ADVERTISEMENT

ರೈತ ಸಂಘದಿಂದ ಪ್ರತಿಭಟನೆ

ವಿಶೇಷ ಪ್ಯಾಕೇಜ್ ಜಾರಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2017, 6:20 IST
Last Updated 21 ಫೆಬ್ರುವರಿ 2017, 6:20 IST
ಮುಳಬಾಗಲು: ರೈತರ ಸಮಸ್ಯೆಗಳು ದಿನೇ ದಿನೇ ಹೆಚ್ಚುತ್ತಿದ್ದು ರೈತರಿಗೆ ವಿಶೇಷ ಪ್ಯಾಕೇಜ್ ಜಾರಿಗೊಳಿಸುವಂತೆ ಆಗ್ರಹಿಸಿ ತಾಲ್ಲೂಕು ಕಚೇರಿ ಮುಂಭಾಗ ಸೋಮವಾರ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
 
‘ತಾಲ್ಲೂಕಿನ ಸರ್ಕಾರಿ ಕಚೇರಿಗಳಲ್ಲಿ ರೈತರಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಕೆಲಸ ಆಗಬೇಕಾದರೂ ಹಣ ನೀಡ ಬೇಕು.  ಬರಗಾಲದ ಪರಿಣಾಮ ರೈತರಿಗೆ ತೀವ್ರವಾಗಿ ತಟ್ಟುತ್ತಿರುವ ಈ ವೇಳೆಯಲ್ಲಿ ಅಧಿಕಾರಿಗಳು ಹಣ ಮಾಡುತ್ತಿದ್ದಾರೆ’ ಎಂದು ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು. 
 
‘ವಾಣಿಜ್ಯ ಬ್ಯಾಂಕುಗಳು, ಸಹಕಾರಿ ಸಂಘಗಳು ಮತ್ತಿತರ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. ಉದ್ಯಮಿಗಳಿಗೆ ಸುಲಭವಾಗಿ ಸಾಲ ಸಿಗುವಂತೆ  ರೈತರಿಗೂ ಸಾಲ ಸಿಗುವ ವ್ಯವಸ್ಥೆ ಮಾಡಬೇಕು’ ಎಂದು ಆಗ್ರಹಿಸಿದರು.
 
‘ಜನಪ್ರತಿನಿಧಿಗಳು ರೈತರ ಹಿತಾಸಕ್ತಿಯನ್ನು ಮರೆತ್ತಿದ್ದಾರೆ. ಜಿಲ್ಲೆಯ ರೈತರ ಅಭಿವೃದ್ಧಿಗೆ ಸಂಬಂಧಿಸಿದಂತೆ ಯಾವುದೇ ಅಭಿವೃದ್ಧಿ ಯೋಜನೆಗಳನ್ನು  ಜಾರಿ ಮಾಡುತ್ತಿಲ್ಲ’ ಎಂದು ಅವರು ದೂರಿದರು.
 
 ಕೋಲಾರ ಜಿಲ್ಲೆಯ ಜನರು ಪ್ರಮುಖವಾಗಿ ಕೃಷಿಯನ್ನು ನಂಬಿಕೊಂಡಿದ್ದಾರೆ. ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದರೆ ರೈತರ ಬದುಕು ಮೂರಾಬಟ್ಟೆಯಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
 
ರೈತರ ಕೊಳವೆ ಬಾವಿ, ಪಂಪ್‌ಸೆಟ್‌ಗಳಿಗೆ ನಿತ್ಯ ಕನಿಷ್ಠ 8 ಗಂಟೆ ತ್ರಿಪೇಸ್ ವಿದ್ಯುತ್ ನೀಡಬೇಕು. ಸರ್ಕಾರಿ ಆಸ್ಪತ್ರೆಗಳನ್ನು ಅಭಿವೃದ್ಧಿ ಗೊಳಿಸಬೇಕು. ಅರಣ್ಯ ಇಲಾಖೆ ಎಚ್ಚೆತ್ತು ಕಾಡು ಪ್ರಾಣಿಗಳಿಂದ ದನಕರುಗಳನ್ನು ರಕ್ಷಿಸಲು ಮುಂದಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
 
‘ಬೆಂಗಳೂರು ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ ಜಿಲ್ಲೆಯ ಕೆರೆಗಳಿಗೆ ಹರಿಸುವ ಯೋಜನೆ ಕಾಮಗಾರಿಗಳು ಹಣ ಮಾಡುವ ದಂಧೆಯಾಗುತ್ತಿವೆ. ಯರಗೋಳ ಯೋಜನೆಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು.  ಇದರಿಂದ ಸತ್ಯಾಂಶ ಹೊರ ಬರಲಿದೆ. ಜಿಲ್ಲೆಯ ಕೆರೆಗಳ ಹೂಳು ತೆಗೆಯಲು ವಿಶೇಷ ಅನುದಾನ ನೀಡಬೇಕು. ಕೆರೆಗಳ ಒತ್ತುವರಿ ತೆರವುಗೊಳಿಸಿ ರಾಜಕಾಲುವೆ ಗಳನ್ನು ದುರಸ್ತಿಪಡಿಸ ಬೇಕು’ ಎಂದು ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಫಾರುಕ್ ಪಾಷಾ ಆಗ್ರಹಿಸಿದರು.
 
ಪ್ರತಿಭಟನಾಕಾರರು ಶಿರಸ್ತೇದಾರ್ ರೆಡ್ಡೆಪ್ಪ ಗುಪ್ತ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
 
ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಎ.ನಳಿನಿ, ಯಲುವಳ್ಳಿ ಪ್ರಭಾಕರ್, ಆನಂದ್‌ ಸಾಗರ್, ಹೆಬ್ಬಿಣಿ ಆನಂದರೆಡ್ಡಿ, ಪ್ರಿಂಟಿಂಗ್ ಗಣೇಶ್, ನಂದಕುಮಾರ್, ರಮೇಶ್ ವಿಜಯಪಾಲ್, ಆನಂದ್  ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
 
**
ಎಪಿಎಂಸಿಯಲ್ಲಿ ದಲ್ಲಾಳಿಗಳ ಕಾಟ ತಪ್ಪಿಸಲು ಹೋಬಳಿವಾರು ರೈತ ಸಂತೆ, ಮಾರುಕಟ್ಟೆಗಳನ್ನು ತೆರೆಯಬೇಕು. ರೈತರ  ಬೆಳೆಗಳಿಗೆ ವೈಜ್ಞಾನಿಕ ಬೆಲೆ ಘೋಷಿಸಬೇಕು.
–ನಾರಾಯಣಗೌಡ
ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ 

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.