ADVERTISEMENT

ಸಿಂಗಪುರ ಪ್ರವಾಸಕ್ಕೆ ಪೌರ ಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 10:36 IST
Last Updated 23 ಜುಲೈ 2017, 10:36 IST

ಕೋಲಾರ: ‘ಅಧ್ಯಯನ ಪ್ರವಾಸಕ್ಕಾಗಿ ಸಿಂಗಪುರಕ್ಕೆ ಹೋಗುತ್ತಿರುವ ನಗರದ ಪೌರ ಕಾರ್ಮಿಕರು ಅಲ್ಲಿನ ಘನ ತ್ಯಾಜ್ಯ ನಿರ್ವಹಣೆ ವ್ಯವಸ್ಥೆ ಹಾಗೂ ಸ್ವಚ್ಛತಾ ಕ್ರಮಗಳನ್ನು ತಿಳಿದು ನಗರದಲ್ಲಿ ಅನುಷ್ಠಾನಗೊಳಿಸುವ ಪ್ರಯತ್ನ ಮಾಡಬೇಕು’ ಎಂದು ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮಿ ಕರೆ ನೀಡಿದರು.

ರಾಜ್ಯ ಸರ್ಕಾರವು ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಆಯೋಜಿಸಿರುವ ಪ್ರವಾಸಕ್ಕೆ ಆಯ್ಕೆಯಾಗಿರುವ ನಗರದ ಪೌರ ಕಾರ್ಮಿಕರಾದ ವಿ.ನಾರಾಯಣಸ್ವಾಮಿ, ವಿ.ಮೋಹನ್, ವಿ.ವೆಂಕಟೇಶ್ ಮತ್ತು ಸಿ.ಮುನಿಯಪ್ಪ ಅವರನ್ನು ಬೀಳ್ಕೊಡಲು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಿಂಗಪುರದಲ್ಲಿ ಸ್ವಚ್ಛತಾ ವ್ಯವಸ್ಥೆ, ತ್ಯಾಜ್ಯ ನಿರ್ವಹಣೆಗೆ ಅಳವಡಿಸಿಕೊಂ ಡಿರುವ ವೈಜ್ಞಾನಿಕ ವಿಧಾನ ಮತ್ತು ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿ. ಪ್ರವಾಸದಿಂದ ಹಿಂದಿರುಗಿದ ಬಳಿಕ ಆ ಮಾಹಿತಿಯನ್ನು ನಗರದ ಇತರೆ ಪೌರ ಕಾರ್ಮಿಕರೊಂದಿಗೆ ವಿನಿಮಯ ಮಾಡಿಕೊಳ್ಳಿ. ನಗರವನ್ನು ಕಸಮುಕ್ತ ನಗರವಾಗಿ ಮಾಡಿ’ ಎಂದು ಕಿವಿಮಾತು ಹೇಳಿದರು.

ADVERTISEMENT

ನಗರಸಭೆ ಸದಸ್ಯ ಮುರಳಿಗೌಡ ಮಾತನಾಡಿ, ‘ನಗರಸಭಾ ಸದಸ್ಯರೇ ಈವರೆಗೆ ಸಿಂಗಪುರ ನೋಡಿಲ್ಲ, ಪೌರ ಕಾರ್ಮಿಕರಿಗೆ ಸಿಕ್ಕಿರುವ ಈ ಅವಕಾಶ ಸದ್ಬಳಕೆಯಾಗಬೇಕು. ಸ್ವಚ್ಛತೆ ವಿಚಾರದಲ್ಲಿ ನಗರವನ್ನು ಸಿಂಗಪುರ ಮಾದರಿಯಲ್ಲಿ ಬದಲಾವಣೆ ಮಾಡಬೇಕು’ ಎಂದು ಅವರು ತಿಳಿಸಿದರು.

ನಗರಸಭೆ ಉಪಾಧ್ಯಕ್ಷೆ ಎನ್‌.ಸುಜಾತಾ, ಸದಸ್ಯರಾದ ಸಲಾವು ದ್ದೀನ್ ಬಾಬು, ಪ್ರಸಾದ್‌ಬಾಬು, ಸೋಮಶೇಖರ್, ಸಾದಿಕ್ ಪಾಷಾ, ಚಾಂದ್‌ ಪಾಷಾ, ಮಂಜುನಾಥ್, ಹರ್ಷಿಯಾ ಸುಲ್ತಾನಾ, ಮಂಜುಳಾ, ಆಯುಕ್ತ ಎಸ್‌.ಎ.ರಾಮ್‌ಪ್ರಕಾಶ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.