ADVERTISEMENT

ಹಸಿರೀಕರಣದ ಗುರಿ: ಬೀಜದುಂಡೆ ತಯಾರಿಕೆ

​ಪ್ರಜಾವಾಣಿ ವಾರ್ತೆ
Published 28 ಮೇ 2017, 6:08 IST
Last Updated 28 ಮೇ 2017, 6:08 IST
ಗಾಜಲದಿನ್ನೆ ಅರಣ್ಯ ಪ್ರದೇಶದಲ್ಲಿ ಶನಿವಾರ ಬೀಜದುಂಡೆ ತಯಾರಿಕೆಯಲ್ಲಿ ನಿರತರಾಗರುವ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಯುವಶಕ್ತಿ ಸಂಘಟನೆ ಸದಸ್ಯರು
ಗಾಜಲದಿನ್ನೆ ಅರಣ್ಯ ಪ್ರದೇಶದಲ್ಲಿ ಶನಿವಾರ ಬೀಜದುಂಡೆ ತಯಾರಿಕೆಯಲ್ಲಿ ನಿರತರಾಗರುವ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಯುವಶಕ್ತಿ ಸಂಘಟನೆ ಸದಸ್ಯರು   

ಕೋಲಾರ: ‘ನೀರಿಗಾಗಿ ಅರಣ್ಯ’ ಘೋಷ ವಾಕ್ಯದೊಂದಿಗೆ ಈ ಬಾರಿಯ ವಿಶ್ವ ಪರಿಸರ ದಿನ ಆಚರಿಸಲು ಸಿದ್ಧತೆ ನಡೆಸಿರುವ ಅರಣ್ಯ ಇಲಾಖೆಯು ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಯುವಶಕ್ತಿ ಸಂಘಟನೆ ಸಹಯೋಗದಲ್ಲಿ ನಗರದ ಹೊರವಲಯದ ಗಾಜಲದಿನ್ನೆ ಅರಣ್ಯ ಪ್ರದೇಶದಲ್ಲಿ ಬೀಜದುಂಡೆ (ಸೀಡ್ ಬಾಲ್) ತಯಾರಿಸುವ ಕಾರ್ಯಕ್ಕೆ ಶನಿವಾರ ಚಾಲನೆ ನೀಡಿತು.

ಇಲಾಖೆಯು ಮಳೆಗಾಲದಲ್ಲಿ ಜಿಲ್ಲೆಯ ಬೆಟ್ಟ ಗುಡ್ಡಗಳಲ್ಲಿ ಈ ಬೀಜದುಂಡೆಗಳನ್ನು ಚೆಲ್ಲುವ ಮೂಲಕ ಹಸೀರಿಕರಣದ ಗುರಿ ಸಾಧಿಸುವ ಉದ್ದೇಶ ಹೊಂದಿದೆ. ಮಣ್ಣು, ಗೊಬ್ಬರ ಮತ್ತು ಬೀಜ ಸೇರಿಸಿ ‘ಸೀಡ್ ಬಾಲ್’ ತಯಾರಿಸುವ ಕುರಿತು ಇಲಾಖೆ ಅಧಿಕಾರಿಗಳು ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಯುವಶಕ್ತಿ ಸಂಘಟನೆ ಸದಸ್ಯರಿಗೆ ಮಾಹಿತಿ ನೀಡಿದರು.

ಬೀಜದುಂಡೆ ತಯಾರಿಕೆಗೆ ಚಾಲನೆ ನೀಡಿ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ ವಿಭಾಗ) ಎಸ್‌.ಶ್ರೀನಿವಾಸರಾವ್, ‘ಮನುಷ್ಯನ ದುರಾಸೆಯಿಂದ ಅರಣ್ಯ ಸಂಪತ್ತು ನಾಶವಾಗುತ್ತಿದೆ. ಮರಗಳ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಪರಿಸರದ ಮೇಲೆ ದುಷ್ಪರಿಣಾಮವಾಗುತ್ತಿದೆ. ಮಳೆ ಬಾರದೆ ಕೆರೆ ಕುಂಟೆಗಳು ಒಣಗಿವೆ ಮತ್ತು ಅಂತರ್ಜಲ ಮಟ್ಟ ಕುಸಿದಿದೆ’ ಎಂದು ಅತಂಕ ವ್ಯಕ್ತಪಡಿಸಿದರು.

ADVERTISEMENT

‘ಅನಿವಾರ್ಯ ಕಾರಣಗಳಿಂದ ಜಿಲ್ಲೆಯಲ್ಲಿ ಬರಪರಿಸ್ಥಿತಿ ಎದುರಾಗಿದೆ. ಉತ್ತಮ ಮಳೆಯಾಗುತ್ತಿದ್ದರೂ ಮಳೆ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಇದರಿಂದ ಜಿಲ್ಲೆಯಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆ. ಮಳೆ ನೀರು ಸಂರಕ್ಷಿಸುವುದು ಮತ್ತು ಗಿಡ ಮರಗಳನ್ನು ಬೆಳೆಸುವುದು ಪ್ರತಿಯೊಬ್ಬರ ಜಬಾಬ್ದಾರಿ’ ಎಂದು ಕಿವಿಮಾತು ಹೇಳಿದರು.

‘ಬೀಜದುಂಡೆಗಳನ್ನು ತಯಾರಿಸಿ ಸಂಗ್ರಹ ಮಾಡಿಕೊಂಡು ಮಳೆಗಾಲದಲ್ಲಿ ಅರಣ್ಯ ಪ್ರದೇಶ, ಸರ್ಕಾರಿ ಜಮೀನು, ಬೆಟ್ಟ ಗುಡ್ಡ ಪ್ರದೇಶದಲ್ಲಿ ಹಾಕಿದರೆ ಮರಗಳು ಬೆಳೆಯುತ್ತವೆ. ಜಿಲ್ಲೆಯಲ್ಲಿ ಹಸಿರು ಕ್ರಾಂತಿ ಸೃಷ್ಟಿಸುವ ಸಂಕಲ್ಪ ಮಾಡಿದ್ದು, ಹೊಂಗೆ, ಬೇವು, ಶ್ರೀಗಂಧ, ಹೆಬ್ಬೇವು ಮತ್ತು ನೇರಳೆ ಬೀಜಗಳನ್ನು ಮಣ್ಣಿನಲ್ಲಿ ಹುದುಗಿಸಿ ಉಂಡೆ ಮಾಡಿಟ್ಟುಕೊಂಡರೆ ಮಳೆಗಾಲದಲ್ಲಿ ಬಿತ್ತನೆಗೆ ಅನುಕೂಲವಾಗುತ್ತದೆ’ ಎಂದು ಅವರು ತಿಳಿಸಿದರು.

ಸ್ವಾರ್ಥದಿಂದ ಹಾನಿ: ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆ ಜಿಲ್ಲಾ ಘಟಕದ ಉಪಾಧ್ಯಕ್ಷ ತ್ಯಾಗರಾಜ್ ಮಾತನಾಡಿ, ‘ಜಗತ್ತಿನಲ್ಲಿ ಉತ್ಪಾದನೆಯಾಗುವ ಪ್ರತಿ ಪದಾರ್ಥವೂ ಭೂಮಿ ಮೇಲಿನ ಸಂಪನ್ಮೂಲದಿಂದ ಸೃಷ್ಟಿಯಾಗಿದೆ ಎಂಬುದನ್ನು ಜನ ಮರೆತಿದ್ದಾರೆ. ಜನರ ಸ್ವಾರ್ಥದಿಂದ ಪರಿಸರಕ್ಕೆ ಹಾನಿಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಮಳೆ ನೀರಿನ ಸಂಗ್ರಹ ಮತ್ತು ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಬೇಕು ಬೇಡಗಳ ಆಲೋಚನೆ ಮಾಡದೆ ಅನುಭೋಗಿಸುವ ಹಂಬಲದಿಂದ ಅನೇಕ ವಿಷ ವಸ್ತುಗಳನ್ನು ನಾವೇ ಜಗತ್ತಿಗೆ ಪರಿಚಯಿಸುತ್ತಿದ್ದೇವೆ’ ಎಂದು ವಿಷಾದಿಸಿದರು.

ವಿವಿಧ ಹಣ್ಣು, ಗಿಡಗಳ ಬೀಜದುಂಡೆ ತಯಾರಿಸಿದ ಸದಸ್ಯರು ಅವುಗಳನ್ನು ಬಿಸಿಲಿನಲ್ಲಿ ಒಣಗಿಸಲು ಸಾಲಾಗಿ ಜೋಡಿಸಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ (ಪ್ರಾದೇಶಿಕ ವಿಭಾಗ) ರಾಮಲಿಂಗೇಗೌಡ, ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿಗಳಾದ ಮೋಹನ್‌ ಕುಮಾರ್, ವೆಂಕಟೇಶ್, ಯುವಶಕ್ತಿ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಪುಟ್ಟರಾಜು, ಸ್ಕೌಟ್ಸ್ ಮತ್ತು ಗೈಡ್ ಸಂಸ್ಥೆ ಜಿಲ್ಲಾ ಘಟಕದ ಸಂಘಟಕ ವಿ.ಬಾಬು, ಶಿಕ್ಷಕರಾದ ವಿಶ್ವನಾಥ್‌, ಮಧು, ಎಂ.ಸವಿತಾ, ಆಶಾರಾಣಿ, ಭಾರ್ಗವಿರೆಡ್ಡಿ ಪಾಲ್ಗೊಂಡಿದ್ದರು.

* * 

ಬೀಜ ಮೊಳಕೆಯೊಡೆದು ಸಸಿಗಳು ಗಿಡವಾಗುವ ತನಕ ಕಾಪಾಡಿದರೆ ಸಾಕು. ಪರಿಸರ ರಕ್ಷಣೆ ಜತೆಗೆ ಸರ್ಕಾರಿ ಜಾಗಕ್ಕೂ ರಕ್ಷಣೆ ನೀಡಿದಂತಾಗುತ್ತದೆ
ಎಸ್‌.ಶ್ರೀನಿವಾಸರಾವ್
ಉಪ ಅರಣ್ಯ ಸಂರಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.