ADVERTISEMENT

ಸರ್ಕಾರಿ ಶಾಲೆಗಳ ಅವ್ಯವಸ್ಥೆಗೆ ಅಸಮಾಧಾನ

ಮತಗಟ್ಟೆ ಸ್ಥಿತಿಗತಿ ಪರಿಶೀಲಿಸಿದ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2018, 11:07 IST
Last Updated 18 ಜನವರಿ 2018, 11:07 IST
ಜಿಲ್ಲಾಧಿಕಾರಿ ಜಿ.ಸತ್ಯವತಿ ಕೋಲಾರದ ಕೀಲುಕೋಟೆ ಸರ್ಕಾರಿ ಶಾಲೆಗೆ ಬುಧವಾರ ಭೇಟಿ ನೀಡಿ ಮತಗಟ್ಟೆಯ ಸ್ಥಿತಿಗತಿ ಪರಿಶೀಲಿಸಿದರು
ಜಿಲ್ಲಾಧಿಕಾರಿ ಜಿ.ಸತ್ಯವತಿ ಕೋಲಾರದ ಕೀಲುಕೋಟೆ ಸರ್ಕಾರಿ ಶಾಲೆಗೆ ಬುಧವಾರ ಭೇಟಿ ನೀಡಿ ಮತಗಟ್ಟೆಯ ಸ್ಥಿತಿಗತಿ ಪರಿಶೀಲಿಸಿದರು   

ಕೋಲಾರ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತಗಟ್ಟೆಗಳ ಸ್ಥಿತಿಗತಿ ಅರಿಯಲು ಜಿಲ್ಲಾಧಿಕಾರಿ ಜಿ.ಸತ್ಯವತಿ ನಗರದ ದೇವಾಂಗಪೇಟೆ, ಕೀಲುಕೋಟೆ ಹಾಗೂ ಪಕೀರವಾಡ ಬಡಾವಣೆಗಳ ಸರ್ಕಾರಿ ಶಾಲೆಗಳಿಗೆ ಬುಧವಾರ ದಿಢೀರ್‌ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಬಗ್ಗೆ ಅಸಮಾಧಾನ
ವ್ಯಕ್ತಪಡಿಸಿದರು.

ದೇವಾಂಗಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅವ್ಯವಸ್ಥೆ ಕಂಡು ಸಿಡಿಮಿಡಿಯಾದ ಜಿಲ್ಲಾಧಿಕಾರಿ, ‘ಶಾಲೆಯಲ್ಲಿ ಶೌಚಾಲಯವಿಲ್ಲ. ಇದರಿಂದ ಮಕ್ಕಳು ಬಯಲಿನಲ್ಲಿ ಬಹಿರ್ದೆಸೆ ಹೋಗುವ ಪರಿಸ್ಥಿತಿ ಇದೆ. ಶಿಕ್ಷಣ ಇಲಾಖೆ ಜೀವಂತವಾಗಿದೆಯಾ. ನಾನು ಇಲ್ಲಿಗೆ ಬಂದು ಶಾಲೆಯ ಪರಿಸ್ಥಿತಿ ಅರಿಯಬೇಕೆ. ಕ್ಷೇತ್ರ ಶಿಕ್ಷಣಾಧಿಕಾರಿ ಏನು ಮಾಡುತ್ತಿದ್ದಾರೆ’ ಎಂದು ಗರಂ ಆದರು.

ಶಾಲೆಯಲ್ಲಿ ಶೌಚಾಲಯ, ಕುಡಿಯುವ ನೀರು, ಬೆಳಕು ಸೇರಿದಂತೆ ಯಾವುದೇ ಮೂಲಸೌಕರ್ಯಗಳಿಲ್ಲ. ಆದರೂ ಶಾಲೆಯನ್ನು ಹೇಗೆ ಮತಗಟ್ಟೆ ಮಾಡಿದ್ದೀರಿ. ಶಾಲೆ ಹಿಂಭಾಗದಲ್ಲಿ ಗಿಡಗಳು ಬೆಳೆದಿದ್ದು, ಅಲ್ಲಿ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದ ಶಾಲೆಯಲ್ಲಿ ದುರ್ನಾತ ಹೆಚ್ಚಿದ್ದು, ಮಕ್ಕಳ ಗತಿ ಏನಾಗಬೇಕು. ಇಲ್ಲಿ ಶಾಲಾ ವಾತಾವರಣವೇ ಇಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ADVERTISEMENT

ಗಲಾಟೆ ಮಾಡುತ್ತಾರೆ: ‘ಶಾಲೆಯ ಜಾಗದ ವಿಷಯವಾಗಿ ಖಾಸಗಿ ವ್ಯಕ್ತಿಯೊಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದು, ಇಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಲು ಬಿಡುತ್ತಿಲ್ಲ. ಶಾಲೆ ಆವರಣದಲ್ಲಿ ಸ್ವಲ್ಪ ಮಣ್ಣು ಹಾಕಿದರೂ ದೊಡ್ಡ ಗಲಾಟೆ ಮಾಡುತ್ತಾರೆ’ ಎಂದು ಶಾಲೆಯ ಮುಖ್ಯಶಿಕ್ಷಕಿ ಪ್ರಭಾವತಿ ಅಳಲು ತೋಡಿಕೊಂಡರು.

ಶಾಲೆ ಆವರಣವನ್ನು ಸ್ಥಳೀಯರು ವಾಹನ ನಿಲುಗಡೆ ಪ್ರದೇಶ ಮಾಡಿಕೊಂಡಿದ್ದಾರೆ. ಬೆಳಿಗ್ಗೆ ಸಹ ಗಲಾಟೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಶೌಚಾಲಯ ನಿರ್ಮಿಸುವುದು ಸಾಧ್ಯವಿಲ್ಲ. ಮಕ್ಕಳ ಹಿತದೃಷ್ಟಿಯಿಂದ ಸಮೀಪದಲ್ಲೇ ಎರಡು ಕೊಠಡಿ ಬಾಡಿಗೆ ಪಡೆದಿದ್ದು, ಅಲ್ಲಿ ಶೌಚಾಲಯವಿದೆ. ಆದರೆ, ಮಕ್ಕಳು ಅಷ್ಟು ದೂರ ಹೋಗಲು ಸಾಧ್ಯವಾಗುತ್ತಿಲ್ಲ. ಈ ಸಂಗತಿಯನ್ನು ನಗರಸಭೆ ಮತ್ತು ತಾಲ್ಲೂಕು ಪಂಚಾಯಿತಿ ಗಮನಕ್ಕೂ ತಂದಿದ್ದೇವೆ ಎಂದರು.

ಸಂಚಾರ ಶೌಚಾಲಯ: ಕೀಲುಕೋಟೆ ಬಡಾವಣೆಯ ಮತಗಟ್ಟೆ 201 ಮತ್ತು 202ರಲ್ಲಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ, 202ರ ಮತಗಟ್ಟೆಯ ಬಾಗಿಲು ವಿಚಿತ್ರವಾಗಿದೆ. ಇದನ್ನು ಮತಗಟ್ಟೆ ಮಾಡಲು ಹೇಗೆ ಸಾಧ್ಯ. ಶೌಚಾಲಯವಿಲ್ಲದೆ ಮತಗಟ್ಟೆ ಸ್ಥಾಪಿಸುವುದು ಅಸಾಧ್ಯ. ಚುನಾವಣೆ ವೇಳೆಗೆ ಸಂಚಾರ ಶೌಚಾಲಯ ವ್ಯವಸ್ಥೆ ಮಾಡಬೇಕು. ಮತಗಟ್ಟೆ 201ರ ಕೊಠಡಿಯಲ್ಲಿನ ಕಂಪ್ಯೂಟರ್‌ಗಳನ್ನು ಚುನಾವಣೆ ಸಮಯಕ್ಕೆ ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಸೂಚಿಸಿದರು.

ನಗರಸಭೆ ಆಯುಕ್ತ ಎಸ್‌.ಎ.ರಾಮ್‌ಪ್ರಕಾಶ್‌, ವ್ಯವಸ್ಥಾಪಕ ತ್ಯಾಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.