ADVERTISEMENT

ಅಕ್ಷಯ ತೃತೀಯ ಬಳಿಕ ನಾಮಪತ್ರ

ಕುಷ್ಟಗಿ: ರಂಗೇರುತ್ತಿರುವ ವಿಧಾನಸಭಾ ಚುನಾವಣಾ ಆಖಾಡ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 9:41 IST
Last Updated 18 ಏಪ್ರಿಲ್ 2018, 9:41 IST

ಕುಷ್ಟಗಿ: ಕ್ಷೇತ್ರದಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಹೆಸರುಗಳು ಅಂತಿಮಗೊಂಡಿದ್ದು ಈ ವಿಧಾನಸಭಾ ಚುನಾವಣಾ ಆಖಾಡ ನಿಧಾನವಾಗಿ ರಂಗೇರುತ್ತಿದೆ.

ಎಚ್‌.ಸಿ.ನೀರಾವರಿ ಅವರನ್ನು ಜೆಡಿಎಸ್‌ ಮೊದಲಬಾರಿಗೆ ತನ್ನ ಅಭ್ಯರ್ಥಿ ಎಂದು ಘೋಷಿಸಿದರೆ ನಂತರ ಬಿಜೆಪಿ ದೊಡ್ಡನಗೌಡ ಪಾಟೀಲ ಅವರ ಹೆಸರನ್ನು ಪ್ರಕಟಿಸಿತ್ತು. ಈಗ ಕಾಂಗ್ರೆಸ್‌ ಪಕ್ಷ ಅಮರೇಗೌಡ ಪಾಟೀಲ ಬಯ್ಯಾಪುರ ಅವರೇ ಅಭ್ಯರ್ಥಿ ಎಂದು ಪ್ರಕಟಿಸಿದ್ದು ಪಕ್ಷ, ಅಭ್ಯರ್ಥಿಗಳು ಅದಲು ಬದಲಾಗಬಹುದು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ.

ನಾಳೆಯಿಂದ (ಏ. 19) ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ. ನಾಮಪತ್ರ ಸಲ್ಲಿಕೆಗೆ ಸಂಬಂಧಿಸಿದಂತೆ ಮುಹೂರ್ತ ನಿಗದಿಪಡಿಸಿಕೊಳ್ಳಲು ಪ್ರಮುಖ ಅಭ್ಯರ್ಥಿಗಳು ಜ್ಯೋತಿಷಿಗಳ ಮೊರೆ ಹೋಗಿದ್ದಾರೆ. ಹೆಚ್ಚು ಕಡಿಮೆ ಅಕ್ಷಯ ತೃತೀಯದ ನಂತರ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ.

ADVERTISEMENT

ಈ ಮಧ್ಯ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಿನ ಕ್ರಮಗಳ ನಡುವೆಯೂ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳಿಂದ ಪ್ರಚಾರಕಾರ್ಯ ನಡೆಯುತ್ತಿದೆ. ಅಭ್ಯರ್ಥಿಗಳ ಆಯ್ಕೆ ಪ್ರಕಟವಾಗುವ ಕೆಲ ತಿಂಗಳ ಮೊದಲೇ ಈ ಕ್ಷೇತ್ರದಲ್ಲಿ ಹೆಚ್ಚುಕಡಿಮೆ ಚುನಾವಣಾ ಪ್ರಚಾರ ಆರಂಭಗೊಂಡಿದೆ. ಬೇಸಿಗೆಯ ಬಿಸಿಲು ಲೆಕ್ಕಿಸದ ಚುನಾವಣಾ ಆಕಾಂಕ್ಷಿಗಳು ಹಳ್ಳಿಗಳ ಪ್ರವಾಸ ಕೈಗೊಂಡಿದ್ದಾರೆ.

ಕಾಂಗ್ರೆಸ್‌ ಮತ್ತು ಬಿಜೆಪಿಯ ಅಭ್ಯರ್ಥಿಗಳಾದ ಅಮರೇಗೌಡ ಬಯ್ಯಾಪುರ ಮತ್ತು ದೊಡ್ಡನಗೌಡ ಪಾಟೀಲ ಮತದಾರರನ್ನು ಖುದ್ದಾಗಿ ಭೇಟಿ ಮಾಡುತ್ತ ಬಂದಿದ್ದು ಕಾಂಗ್ರೆಸ್‌ ಈ ವಿಷಯದಲ್ಲಿ ಮುಂಚೂಣಿಯಲ್ಲಿದೆ. ತಾವು ಹೆಚ್ಚು ಅನುದಾನ ತಂದು ಅಭಿವೃದ್ಧಿಪಡಿಸಿರುವುದಾಗಿ ದೊಡ್ಡನ ಗೌಡ ಹೇಳುತ್ತಿದ್ದಾರೆ.

ಹಿಂದೆ ತಾವು ಶಾಸಕರಾಗಿದ್ದಾಗ ಆದ ಅಭಿವೃದ್ಧಿ ಮತ್ತು ಕಾಂಗ್ರೆಸ್‌ ಪಕ್ಷ ಜಾರಿಗೊಳಿಸಿದ ಯೋಜನೆಗಳ ಬಗ್ಗೆ ಕಾಂಗ್ರೆಸ್‌ನ ಅಮರೇ ಗೌಡ ಬಯ್ಯಾಪುರ ಹೋದಲ್ಲೆಲ್ಲ ಪಟ್ಟಿ ನೀಡುತ್ತಿದ್ದಾರೆ.

ಅದೇ ರೀತಿ ಜೆಡಿಎಸ್‌ನ ಎಚ್‌.ಸಿ.ನೀರಾವರಿ ಅವರು ಎಚ್‌.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಯಾಗಿದ್ದಾಗ ಅನುಷ್ಠಾನಗೊಳಿಸಿದ ಕಾರ್ಯಕ್ರಮ ಗಳನ್ನು ಜನರ ಮುಂದಿಡುವ ಮೂಲಕ ಮನ ಒಲಿಸಿಕೊಳ್ಳುವ ಕಸರತ್ತು ನಡೆಸಿದ್ದಾರೆ.

ನಾರಾಯಣರಾವ್‌ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.