ADVERTISEMENT

ಅಭಿವೃದ್ಧಿಯಿಂದ ಬಲುದೂರ ಕಟಗಿಹಳ್ಳಿ

ಉಮಾಶಂಕರ ಬ.ಹಿರೇಮಠ
Published 14 ನವೆಂಬರ್ 2017, 7:31 IST
Last Updated 14 ನವೆಂಬರ್ 2017, 7:31 IST
ಯಲಬುರ್ಗಾ ತಾಲ್ಲೂಕು ಕಟಗಿಹಳ್ಳಿ ಗ್ರಾಮದಲ್ಲಿ ಅಪೂರ್ಣವಾಗಿರುವ ಕಲ್ಯಾಣಮಂಟಪ
ಯಲಬುರ್ಗಾ ತಾಲ್ಲೂಕು ಕಟಗಿಹಳ್ಳಿ ಗ್ರಾಮದಲ್ಲಿ ಅಪೂರ್ಣವಾಗಿರುವ ಕಲ್ಯಾಣಮಂಟಪ   

ಯಲಬುರ್ಗಾ: ತಾಲ್ಲೂಕು ಕೇಂದ್ರದಿಂದ 35 ಕಿ.ಮೀ ದೂರದಲ್ಲಿರುವ ಕಟಗಿಹಳ್ಳಿ ಅಭಿವೃದ್ಧಿಯಿಂದ ವಂಚಿತವಾಗಿದೆ. ಗ್ರಾಮವನ್ನು ಪ್ರವೇಶಿಸುತ್ತಿದ್ದಂತೆ ತಿಪ್ಪೆಗಳ ರಾಶಿ, ಕೊಳಚೆ ನೀರು, ದುರ್ನಾತ ರಾಚುತ್ತದೆ. ಜನಪ್ರತಿನಿಧಿಗಳು ಚುನಾವಣೆಯನ್ನು ನೆನಪಿಸುವುದಕ್ಕೆ ಮಾತ್ರ ಗ್ರಾಮವನ್ನು ಪ್ರವೇಶಿಸುತ್ತಾರೆ. ಹೀಗಾಗಿ ಸಮಸ್ಯೆಗಳು ಪರಿಹಾರ ಕಾಣದೆ ಉಳಿದಿವೆ. ಗ್ರಾಮಸ್ಥರ ನರಕಯಾತನೆ ತಪ್ಪುತ್ತಿಲ್ಲ.

ಉತ್ತಮ ರಸ್ತೆ, ಚರಂಡಿ, ಸಿಮೆಂಟ್ ರಸ್ತೆ, ಸಾರಿಗೆ ಸೌಲಭ್ಯ, ಶೈಕ್ಷಣಿಕ ಅಭಿವೃದ್ಧಿ ಈ ಗ್ರಾಮದಲ್ಲಿ ಕಾಣುವುದಿಲ್ಲ. ಮೂರ್ನಾಲ್ಕು ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಸಾರ್ವಜನಿಕ ಶೌಚಾಲಯ ಇದ್ದು ಇಲ್ಲದಂತಿದೆ. ಶೌಚಾಲಯದ ಎಲ್ಲ ಬಾಗಿಲು ಕಿತ್ತುಹೋಗಿವೆ. ರಸ್ತೆಯಲ್ಲಿ ಮುಳ್ಳು ಬೆಳೆದಿವೆ.

‘ಈಶಣ್ಣ ಗುಳಗಣ್ಣವರ ಶಾಸಕರಾಗಿದ್ದಾಗ ಮಂಜೂರಾದ ಕಲ್ಯಾಣ ಮಂಟಪದ ಕಟ್ಟಡ ತಳ ಹಂತದವರೆಗೆ ಮಾತ್ರ ನಿರ್ಮಾಣಗೊಂಡಿದೆ. ಕಟ್ಟಡ ಪೂರ್ಣಗೊಳಿಸುವ ಇಚ್ಛಾಶಕ್ತಿ ಯಾವುದೇ ಜನಪ್ರತಿನಿಧಿಗೆ ಇಲ್ಲ. ಇದು ಬೇಸರ ಮೂಡಿಸಿದೆ’ ಎಂದು ಕನ್ನಡಪರ ಸಂಘಟನೆಯ ಶರಣಗೌಡ ಭರಮಗೌಡ್ರ ತಿಳಿಸಿದರು.

ADVERTISEMENT

‘ನಾಲ್ಕು ವರ್ಷದ ಹಿಂದೆ ಮತ ಕೇಳಲು ಬಂದಿದ್ದ ಶಾಸಕರು ಮತ್ತೆ ಈಗ ಬಂದಿದ್ದಾರೆ. ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ₹42 ಲಕ್ಷ ವೆಚ್ಚದ ಎರಡು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಸಾಕಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವುದು ಬಾಕಿ ಇದ್ದರೂ ಅವುಗಳ ಬಗ್ಗೆ ಅವರು ಗಮನ ಹರಿಸುತ್ತಿಲ್ಲ’ ಎಂದು ವೀರೇಶ ಬೇವಿನಗಿಡದ ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮವಿಕಾಸ ಯೋಜನೆಯಲ್ಲಿ ಸಮಗ್ರ ಅಭಿವೃದ್ಧಿಗೆ ಅವಕಾಶವಿದೆ. ಶಾಸಕರು ಆಸಕ್ತಿ ತೋರುತ್ತಿಲ್ಲ. ಮುಧೋಳ ಗ್ರಾಮಕ್ಕೆ ಮಾತ್ರ ಈ ಯೋಜನೆಯನ್ನು ಸೀಮಿತಗೊಳಿಸಲಾಗಿದೆ ಎಂಬುದು ಗ್ರಾಮಸ್ಥರ ಟೀಕೆ.

‘ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇದ್ದು ಇಲ್ಲದಂತಿದ್ದಾರೆ. ಕಾಟಾಚಾರಕ್ಕೆ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಿರುವ ಅವರ ದುರಾಡಳಿತದಿಂದ ಬಹುತೇಕ ಯೋಜನೆಗಳು ಅಸಮರ್ಪಕವಾಗಿದೆ. ಶೌಚಾಲಯ ಸರಿಯಾಗಿ ನಿರ್ಮಾಣಗೊಂಡಿಲ್ಲ. ನಿರ್ಮಾಣಗೊಂಡರೂ ಪರಿಪೂರ್ಣವಾಗಿಲ್ಲ, ಶೇ 90 ಜನ ಬಯಲು ಬಹಿರ್ದೆಸೆಗೆ ಹೋಗುತ್ತಿದ್ದಾರೆ. ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ’ ಎಂದು ಮಾಜಿ ಗ್ರಾಪಂ ಸದಸ್ಯರೊಬ್ಬರು ತಿಳಿಸಿದ್ದಾರೆ.

‘ಗ್ರಾಮದ ಹನುಮಪ್ಪನ ದೇವಸ್ಥಾನದ ಅಭಿವೃದ್ಧಿ ಹಾಗೂ ಹೋಗುವ ದಾರಿಯಲ್ಲಿ ಸಿಮೆಂಟ್ ರಸ್ತೆ ನಿರ್ಮಿಸುವುದು, ಕುಡಿಯುವ ನೀರು ಪೂರೈಸುವುದು, ರಸ್ತೆ ಬದಿಯಲ್ಲಿ ಚರಂಡಿ ನಿರ್ಮಿಸಿ ಮನೆ ಬಳಕೆ ನೀರು ಸುಗಮವಾಗಿ ಹರಿದು ಹೋಗುವಂತೆ ಮಾಡಬೇಕು’ ಎಂಬುದು ಗ್ರಾಮಸ್ಥರ ಒತ್ತಾಯ.

ಸಮರ್ಪಕ ಬಸ್ ಸಂಚಾರ ಇಲ್ಲದೆ ಟಂಟಂ ವಾಹನಗಳನ್ನೇ ಅವಲಂಬಿಸಿದ್ದಾರೆ. ಅಪಾಯ ಎಂಬುದು ಗೊತ್ತಿದ್ದರೂ ಪ್ರಯಾಣ ಅನಿವಾರ್ಯ. ತಾಲ್ಲೂಕು ಕೇಂದ್ರದಿಂದ ಸಾಕಷ್ಟು ದೂರದಲ್ಲಿರುವ ಕಾರಣ ಈ ಗ್ರಾಮಕ್ಕೆ ಅಧಿಕಾರಿಗಳು ಭೇಟಿ ನೀಡುವುದು ಅಪರೂಪ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.