ADVERTISEMENT

ಇದು ಮೇಷ್ಟ್ರುಗಳ ಮನದಾಳ....

ಜಿಲ್ಲೆಯ ಮೂವರು ಶಿಕ್ಷಕರಿಗೆ ಒಲಿದ ಪ್ರಶಸ್ತಿ: ಶಿಕ್ಷಕರ ದಿನಾಚರಣೆ ಇಂದು

ಶರತ್‌ ಹೆಗ್ಡೆ
Published 5 ಸೆಪ್ಟೆಂಬರ್ 2015, 11:31 IST
Last Updated 5 ಸೆಪ್ಟೆಂಬರ್ 2015, 11:31 IST

ಕೊಪ್ಪಳ: ಇಂದು (ಸೆ. 5) ಶಿಕ್ಷಕರ ದಿನಾಚರಣೆ. ಜಿಲ್ಲೆ ಈ ಬಾರಿ ವಿಶೇಷವಾಗಿ ಗುರುತಿಸಿಕೊಂಡಿದೆ. ಏಕೆಂದರೆ ಜಿಲ್ಲೆಯ ಒಬ್ಬರು ಶಿಕ್ಷಕರಿಗೆ ರಾಷ್ಟ್ರ ಪ್ರಶಸ್ತಿ, ಇಬ್ಬರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ.

ಶಿಕ್ಷಣದಲ್ಲಿ ಹಿಂದುಳಿದ ಜಿಲ್ಲೆ ಎಂದು ಅಲ್ಲಲ್ಲಿ ಮೂದಲಿಕೆಗೆ ಒಳಗಾಗುವ ಈ ಪ್ರದೇಶಕ್ಕೆ ಈ ಮೂರು ಪ್ರಶಸ್ತಿಗಳು ಅಲ್ಪ ಸ್ವಲ್ಪ ಆಶಾಕಿರಣ ಮೂಡಿಸಿವೆ. ಇದು ಉಳಿದವರಿಗೂ ಸ್ಫೂರ್ತಿಯಾಗಲಿದೆ ಎಂಬುದು ಶಿಕ್ಷಣ ಪ್ರೇಮಿಗಳ ಆಶಯ. ಪ್ರಶಸ್ತಿ ವಿಜೇತರನ್ನು ಮಾತಿಗೆಳೆದಾಗ...

ಡಾ.ಸಿದ್ದಲಿಂಗಪ್ಪ ಕೋಟ್ನೆಕಲ್‌: ನಗರದ ಗವಿಸಿದ್ದೇಶ್ವರ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ. ಪ್ರಸಕ್ತ ವರ್ಷ ಪದವಿಪೂರ್ವ ಶಿಕ್ಷಣ ಇಲಾಖೆ ನೀಡುವ ರಾಜ್ಯಮಟ್ಟದ ಉತ್ತಮ ಕನ್ನಡ ಶಿಕ್ಷಕ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಮೂಲತಃ ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕು ಹಿರೇಕೋಟ್ನೆಕಲ್‌ ಗ್ರಾಮದವರು.

ಇದುವರೆಗೆ 13 ಪತ್ರಿಕಾ ಲೇಖನಗಳು, ವಿವಿಧ ಗ್ರಂಥಗಳಲ್ಲಿ ಪ್ರಕಟಿತ 9 ಲೇಖನಗಳು, 12 ವಿಚಾರ ಪ್ರಬಂಧ ಮಂಡನೆ, 2 ಸ್ವತಂತ್ರ ಕೃತಿಗಳು, 2 ಸಂಪಾದಿತ ಕೃತಿಗಳನ್ನು ಬರೆದಿದ್ದಾರೆ. 13 ವರ್ಷಗಳ ಸೇವಾವಧಿಯಲ್ಲಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಯಾಗಿ ಜನಜಾಗೃತಿ ಸಮಾಜ ಸೇವಾ ಕಾರ್ಯಗಳನ್ನು ಕೈಗೊಂಡರು.

9 ವರ್ಷಗಳ ಕಾಲ ಚಿತ್ರದುರ್ಗದ ಮುರುಘಾ ಮಠ ನಡೆಸುತ್ತಿದ್ದ ವಚನ ಕಮ್ಮಟ ಪರೀಕ್ಷೆಗಳನ್ನು ಕಾಲೇಜಿನಲ್ಲಿ ಯಶಸ್ವಿಯಾಗಿ ನಡೆಸಿದರು. ಐತಿಹಾಸಿಕ ಸ್ಮಾರಕ ಉಳಿಸಿ, ಕೊಳೆಗೇರಿಗಳಲ್ಲಿ ಜಾಗೃತಿ, ಮದ್ಯಪಾನ ವಿರೋಧಿ ಜಾಗೃತಿ ಜಾಥಾ ಹಮ್ಮಿಕೊಂಡದ್ದು ಡಾ. ಕೋಟ್ನೇಕಲ್‌  ಅವರ ವೃತ್ತಿ ಜೀವನದ ಮಜಲುಗಳು.

ಒಬ್ಬ ಉತ್ತಮ ಶಿಕ್ಷಕನಲ್ಲಿರಬೇಕಾದ ಅಂಶಗಳನ್ನು ಹೀಗೆ ವಿವರಿಸುತ್ತಾರೆ. ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡೇ ಕಾರ್ಯಕ್ರಮ ಹಾಕಿಕೊಳ್ಳಬೇಕು. ಒಮ್ಮೆ ಹೇಳಿದ ಪಾಠವನ್ನು ಇನ್ನೊಮ್ಮೆ ಓದುವಂತಾಗಬಾರದು. ಅದು ಅಚ್ಚೊತ್ತಬೇಕು. ಆ ವಿಶ್ವಾಸದಲ್ಲೇ ಬೋಧಿಸುತ್ತೇನೆ. ಇತ್ತೀಚೆಗೆ ತಂತ್ರಜ್ಞಾನವನ್ನು ಬಳಸಲು ಪ್ರಯತ್ನಿಸುತ್ತಿದ್ದೇನೆ. ಪವರ್‌ಪಾಯಿಂಟ್‌ ಮೂಲಕ ಪಾಠ ತುಂಬಾ ಪರಿಣಾಮಕಾರಿ ಎನ್ನುತ್ತಾರೆ.

ಯಾವ ಕೆಲಸವನ್ನೂ ಇಲ್ಲ ಎನ್ನುವುದಿಲ್ಲ. ಮುಂದಾಳುತ್ವ ವಹಿಸುತ್ತೇನೆ. ಹೌದು, ಶಿಕ್ಷಕರಿಗೆ ಈಗ ತುಂಬಾ ಸವಾಲುಗಳಿವೆ. ವಿದ್ಯಾರ್ಥಿಗಳಿಗೆ ಸೂಕ್ಷ್ಮವಾಗಿಯಷ್ಟೇ ಹೇಳುತ್ತೇವೆ. ಅಷ್ಟರಲ್ಲೆ ತಿದ್ದುವ ಪ್ರಯತ್ನ ನಮ್ಮದು ಎನ್ನುತ್ತಾರೆ ಅವರು. ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವುದರಲ್ಲಿರುವ ಖುಷಿ ಬೇರೆ ಎಲ್ಲಿದೆ ಹೇಳಿ ಎಂದರು. (ಮೊಬೈಲ್‌: 94485 70340)

ನಮ್ಮ ವಿಷಯವೇ ಸಾಹಿತ್ಯ ಮತ್ತು ಸಂಸ್ಕೃತಿ. ಅದರ ನಡುವೆಯೇ ವಿದ್ಯಾರ್ಥಿಗಳಲ್ಲಿ ಮೌಲ್ಯ ಬಿತ್ತುವ ಪ್ರಯತ್ನ ಸಾಗಿದೆ.
ಡಾ.ಸಿದ್ದಲಿಂಗಪ್ಪ ಕೋಟ್ನೆಕಲ್‌,
ಕನ್ನಡ ಉಪನ್ಯಾಸಕ, ಗವಿಸಿದ್ದೇಶ್ವರ ಕಾಲೇಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.