ADVERTISEMENT

ಎಲ್ಲೂ ಹೋಗಲ್ಲ ಇಲ್ಲೇ ಇರ್ತೀನಿ...

ವರಿಷ್ಠರ ಮನವೊಲಿಕೆಗೆ ವರಸೆ ಬದಲಿಸಿದ ಸಂಗಣ್ಣ, ಕಾದು ನೋಡುವ ತಂತ್ರ

ಶರತ್‌ ಹೆಗ್ಡೆ
Published 21 ಏಪ್ರಿಲ್ 2018, 10:01 IST
Last Updated 21 ಏಪ್ರಿಲ್ 2018, 10:01 IST
ಸಂಗಣ್ಣ ಕರಡಿ
ಸಂಗಣ್ಣ ಕರಡಿ   

ಕೊಪ್ಪಳ: ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್‌ಗೆ ಪಟ್ಟು ಹಿಡಿದಿದ್ದ ಸಂಸದ ಸಂಗಣ್ಣ ಕರಡಿ ಕೊನೆಗೂ ಮೆತ್ತಗಾಗಿದ್ದಾರೆ. ಪಕ್ಷ ಯಾರಿಗೇ ಟಿಕೆಟ್‌ ಕೊಡಲಿ. ನಾನು ದುಡಿಯುತ್ತೇನೆ. ಇಲ್ಲೇ ಇರುತ್ತೇನೆ. ಪಕ್ಷ ಬದಲಿಸುವ ಮಾತೇ ಇಲ್ಲ ಎಂದು ಶುಕ್ರವಾರ ವರಸೆ ಬದಲಿಸಿದ್ದಾರೆ.

'ವಿಷಯವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಮತ್ತು ರಾಜ್ಯದ ಚುನಾವಣಾ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌ ಗಮನಕ್ಕೆ ತಂದಿದ್ದೇನೆ. ನಾಳೆ ಅವರು ನಿರ್ಧಾರ ಪ್ರಕಟಿಸುತ್ತಾರೆ. ಬಿ. ಫಾರಂ ಕೊಟ್ಟ ತಕ್ಷಣ ಬೆಂಗಳೂರಿನಿಂದ ವಾಪಸ್‌ ಬರುತ್ತೇನೆ' ಎಂದರು.

ಮತ್ತೆ ಸ್ವತಂತ್ರವಾಗಿ (ಕೊನೇ ಕ್ಷಣದಲ್ಲಿ ಮನಸ್ಸು ಬದಲಿಸಿ) ಸ್ಪರ್ಧಿಸುವ ಚಿಂತನೆ ಇದೆಯೇ ಎಂಬ ಪ್ರಶ್ನೆಗೆ ರೇಗಿದ ಸಂಗಣ್ಣ, 'ಪಕ್ಷ ಬಿಡುವುದಿಲ್ಲ ಎಂದ ಮೇಲೆ ಮುಗಿಯಿತು. ಎಷ್ಟು ಬಾರಿ ಹೇಳಬೇಕು' ಎಂದು ಗುಡುಗಿದರು.

ADVERTISEMENT

'ವರಿಷ್ಠರು ಮಾತನಾಡಿದ್ದಾರೆ. ಎರಡು ದಿನ (ಶುಕ್ರವಾರ ಮತ್ತು ಶನಿವಾರ) ಕಾದು ನೋಡುವಂತೆ ಹೇಳಿದ್ದಾರೆ. ಅವರೂ ಶೀಘ್ರ ನಿರ್ಧಾರ ಪ್ರಕಟಿಸಲಿದ್ದಾರೆ' ಎಂದು ಮತ್ತೆ ಅಡ್ಡಗೋಡೆ ಮೇಲೆ ದೀಪವಿಟ್ಟರು.

ಸೋಮವಾರ ಸಿವಿಸಿ ನಾಮಪತ್ರ: ಈಗಾಗಲೇ ಪಕ್ಷದ ಪ್ರತಿಷ್ಠೆ ಮೇಲಾಗಿರುವ ಹಾನಿ ಹಾಗೂ ಕಾರ್ಯಕರ್ತರ ಮನಸ್ಸಿನ ಗೊಂದಲ ಪರಿಹರಿಸಲು ಯತ್ನಿಸಿದ ಕ್ಷೇತ್ರದ ಘೋಷಿತ ಅಭ್ಯರ್ಥಿ ಸಿ.ವಿ.ಚಂದ್ರಶೇಖರ, 'ಅಭ್ಯರ್ಥಿ ಬದಲಾವಣೆ ಇಲ್ಲ. ಈ ಬಗ್ಗೆ ಕಾರ್ಯಕರ್ತರಿಗೆ ಮನವರಿಕೆ ಮಾಡಿದ್ದೇನೆ. ನಾಳೆ ವರಿಷ್ಠರು ನನಗೆ ಬಿ.ಫಾರಂ ಕೊಡಲಿದ್ದಾರೆ. ನಾನು ಮತ್ತು ಸಂಸದರು ಕೂಡಿಯೇ ವಾಪಸಾಗುತ್ತೇವೆ. ಸೋಮವಾರ ನಾಮಪತ್ರ ಸಲ್ಲಿಸುತ್ತೇನೆ' ಎಂದು ಹೇಳಿದರು.

'ಕೊನೇ ಕ್ಷಣದ ಬದಲಾವಣೆಗಳ ಬಗ್ಗೆ ಕಾರ್ಯಕರ್ತರಿಗೆ ತೀವ್ರ ಅಸಮಾಧಾನ ಉಂಟಾಗಿರುವುದು ನಿಜ. ಅವರನ್ನು ಸಮಾಧಾನಿಸುವ ಪ್ರಯತ್ನವೂ ನಡೆದಿದೆ' ಎಂದರು.

ಬಿಜೆಪಿ ಗೊಂದಲಗಳ ಬಗ್ಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಅಭ್ಯರ್ಥಿಗಳು ಲೇವಡಿ ಮಾಡಿದ್ದಾರೆ. ಹಿರಿಯ ಕಾಂಗ್ರೆಸ್‌ ಮುಖಂಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರೊಬ್ಬರು ಪ್ರತಿಕ್ರಿಯಿಸಿ, 'ಸಂಸದರಿಗೆ ಎಲ್ಲವೂ ತನಗೇ ಬೇಕು ಎಂಬ ಭಾವನೆ ಸಲ್ಲದು. ಒಬ್ಬ ಗೆಳೆಯನಾಗಿ ಅವರಿಗೆ ಸಲಹೆ ನೀಡಿದ್ದೇನೆ. ಹಿರಿಯರಾದ ಅವರೂ ಅರ್ಥ ಮಾಡಿಕೊಳ್ಳಬೇಕು. ಬೇರೆಯವರಿಗೂ ಅವಕಾಶ ಕೊಡಬೇಕು. ಅವರವರ ಪಕ್ಷಕ್ಕೆ, ಹಿರಿಯರ ನಿರ್ಧಾರಕ್ಕೆ ನಿಷ್ಠರಾಗಿರಬೇಕು' ಎಂದರು.

'ವರಿಷ್ಠರ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ನಮ್ಮ ಅಭಿಪ್ರಾಯವನ್ನು ವರಿಷ್ಠರಿಗೆ ಹೇಳಿ ಬಂದಿದ್ದೇವೆ. ಉಳಿದದ್ದು ಅವರಿಗೇ ಬಿಟ್ಟದ್ದು' ಎಂದು ಈ ಬಿಕ್ಕಟ್ಟಿನ ಬಳಿಕ ವರಿಷ್ಠರ ಸಭೆಗೆ ತೆರಳಿ ಬೇಸರಗೊಂಡ ಜಿಲ್ಲಾಮಟ್ಟದ ಪದಾಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

**

ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ. ಕೇಂದ್ರದ ವರಿಷ್ಠರೂ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ಬಿ.ಫಾರಂ ಪಡೆದು ವಾಪಸಾಗುತ್ತೇವೆ – ಸಂಗಣ್ಣ ಕರಡಿ, ಸಂಸದ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.