ADVERTISEMENT

ಕೃಷಿ ಚಟುವಟಿಕೆ ಆರಂಭ: ಬಿತ್ತನೆ ಶುರು

ತಾವರಗೇರಾದಲ್ಲಿ 21.4 ಮಿಲಿ ಮೀಟರ್‌ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2018, 10:37 IST
Last Updated 2 ಜೂನ್ 2018, 10:37 IST
ತಾವರಗೇರಾ ಪಟ್ಟಣದ ಹೊರವಲಯದ ಜಮೀನಿನಲ್ಲಿ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿರುವ ಶುಕ್ರವಾರ ಕಂಡು ಬಂತು
ತಾವರಗೇರಾ ಪಟ್ಟಣದ ಹೊರವಲಯದ ಜಮೀನಿನಲ್ಲಿ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿರುವ ಶುಕ್ರವಾರ ಕಂಡು ಬಂತು   

ತಾವರಗೇರಾ: ಪಟ್ಟಣ ಸೇರಿದಂತೆ ಹೋಬಳಿ ವ್ಯಾಪ್ತಿಯಲ್ಲಿ ಕಳೆದ ವಾರದಿಂದ ಉತ್ತಮ ಮಳೆ ಯಾಗುತ್ತಿದ್ದು, ಶುಕ್ರವಾರ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಭರದಿಂದ ಸಾಗಿದೆ.

ಕಳೆದ ತಿಂಗಳ ಚುನಾವಣೆ ಗುಂಗಿನಲ್ಲಿದ್ದ ರೈತರು ಈಗ ಕೃಷಿ ಚಟುವಟಿಕೆಯತ್ತ ಗಮನ ಹರಿಸಿದ್ದು ಭೂಮಿ ಉಳುಮೆ ಮಾಡುವುದು, ಬಿತ್ತನೆ ಮಾಡುವುದರಲ್ಲಿ ಮಗ್ನರಾಗಿದ್ದಾರೆ. ಕಳೆದ ವರ್ಷದ ಬರಗಾಲದ ಕರಾಳ ಛಾಯೆ ಈ ಬಾರಿ ಹೋಗಲಾಡಿಸುವ ಮೂನ್ಸೂಚನೆ ಕಾಣುತ್ತಿದೆ. ಉತ್ತಮ ರೀತಿಯಲ್ಲಿ ಮಳೆಯಾಗುತ್ತಿದ್ದು, ಈ ಭಾಗದ ರೈತರು ಉತ್ಸಾಹದಿಂದಲೇ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಮುಂಗಾರು ಹಂಗಾಮಿನ ಬೆಳೆಗಳಾದ ಹೆಸರು, ಸಜ್ಜೆ, ಜೋಳ ಸೇರಿದಂತೆ ಇತರ ಬೆಳೆಗಳ ಬಿತ್ತನೆ ಕಾರ್ಯ ಮಾಡುತ್ತಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಮೂರು-ನಾಲ್ಕು ದಿನಕ್ಕೊಮ್ಮೆ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆ ಗಳು ಗರಿಗೆದರಿವೆ. ಜೂಲಕುಂಟಿ, ಕಿಲಾರಹಟ್ಟಿ, ಮ್ಯಾದರದೊಕ್ಕಿ, ಸಂಗನಾಳ, ಲಿಂಗದಳ್ಳಿ, ಹೊನಗಡ್ಡಿ, ಗಂಗನಾಳ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಮಳೆಯಾಗಿದ್ದು, ಬಿತ್ತನೆ ಕಾರ್ಯ ಚುರುಕುಗೊಂಡಿವೆ.

ADVERTISEMENT

ಗುರುವಾರ ರಾತ್ರಿ ಸುರಿದ ಮಳೆಯ ಪ್ರಮಾಣ ತಾವರಗೇರಾ ಪಟ್ಟಣದ ಮಳೆ ಮಾಪನ ಕೇಂದ್ರದಲ್ಲಿ 21.4 ಮೀಲಿ ಮೀಟರ್ ದಾಖಲಾಗಿದ್ದು, ಕಿಲಾರಹಟ್ಟಿ ಮಳೆ ಮಾಪನ ಕೇಂದ್ರದಲ್ಲಿ 50.0 ಮೀಲಿ ಮೀಟರ್ ದಾಖಲಾಗಿದೆ ಎಂದು ಮಳೆ ಮಾಪನ ಕೇಂದ್ರದ ಮೇಲ್ವಿಚಾರಕ ಕನಕಪ್ಪ ಸಿದ್ದಾಪೂರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.