ADVERTISEMENT

ಕೆರೆ ಕಾಯುವ ಜಲಯೋಧ

ಶರತ್‌ ಹೆಗ್ಡೆ
Published 22 ಮಾರ್ಚ್ 2017, 9:31 IST
Last Updated 22 ಮಾರ್ಚ್ 2017, 9:31 IST
ಕೆರೆ ಕಾಯುವ ಜಲಯೋಧ
ಕೆರೆ ಕಾಯುವ ಜಲಯೋಧ   

ಕೊಪ್ಪಳ: ಇವರು ನಿಜವಾದ ಜಲಯೋಧರು!. ಕೆರೆ ನೀರನ್ನು ಎಷ್ಟು ಬೇಕಾದರೂ ಒಯ್ಯಿರಿ, ಟ್ಯಾಂಕರ್‌ನಲ್ಲಿ ತುಂಬಿ ಏನೂ ಅನ್ನಂಗಿಲ್ಲ. ಆದರೆ, ಕೊಳಕು ಮಾಡ ಬೇಡಿ. ಚರಿಗೆ (ಚೊಂಬು) ಹಿಡಿದುಕೊಂಡು ಬಂದು ಕೆರೆ ದಂಡೆ ಮೇಲೆ ಕೂರಬ್ಯಾಡಿ. – ಇದು ಬನ್ನಿಕೊಪ್ಪದಲ್ಲಿ ಕೆರೆ ಕಾಯುತ್ತಿದ್ದ ಅಜ್ಜ ನಾಗಪ್ಪ ಅವರ ಮಾತು.

ಮೇಲೆ ಹೇಳಿದ ಮಾತು ಮೀರಿದರೆ ಅವರ ಕೈಯಲ್ಲಿರುವ ಕೋಲು ‘ಮಾತನಾಡಲು’ ಹಿಂಜರಿಯುವುದಿಲ್ಲ. ಕೆರೆ ಕಾಯುವ ಕಾಯಕದಲ್ಲಿ ಅವರದ್ದು 30 ವರ್ಷಗಳ ಅನುಭವ. ಕೆರೆ ದಂಡೆಗೆ ಬರುವ ಜನ, ಜಾನುವಾರು, ಪಕ್ಷಿ ಇವೆಲ್ಲವು ಅವರಿಗೆ ಚಿರಪರಿಚಿತ.

  ‘ಆಕಳು ಬಂದರೆ ನೀರು ಕುಡಿದು ಸುಮ್ನೆ ಹೋಗ್ತಾವ್ರಿ. ಎಮ್ಮಿ ಬಂದವಂದ್ರ ನೀರಿಗಿಳಿದು ಈಜಾಡಿ ಕೆಸರೆಬ್ಬಿಸಿ ಹೋಗ್ತಾವು. ಅದಕ್ಕೆ ಅವುಗಳು ನೀರಿಗೆ ಇಳೀದಿದ್ಹಂಗ ನೋಡ್ಕೋಬೇಕು’ ಎಂದರು ನಾಗಪ್ಪಜ್ಜ.

ಅಜ್ಜನ ಜಾಗೃತಿಯ ಹೆಜ್ಜೆ: ‘ಬರಗಾಲದ ತ್ರಾಸ ಏನೈತಿ ಅನ್ನೋದು ನಮಗ ಗೊತ್ತೈತಿ. ಈಗೇನೋ ಪರವಾಗಿಲ್ಲ. ಸರ್ಕಾರ ಈ ಕೆರೆಗೆ ನೀರು ತುಂಬಿಸಿದೆ. ಇಲ್ಲಿಂದ 40 ಹರದಾರಿ ದೂರದ ತುಂಗಭದ್ರಾ ನದಿಯಿಂದ ನೀರನ್ನು ಪೈಪ್‌ಲೈನ್‌ ಮೂಲಕ ತಂದು ಈ ಕೆರೆಗೆ ತುಂಬಿದ್ದಾರೆ. ಪಕ್ಕದ ಕವಲೂರಿನಲ್ಲೂ ಇದೇ ರೀತಿ ಮಾಡಿದ್ದಾರೆ. ಇದೆಲ್ಲಾ ಎಷ್ಟು ಕಷ್ಟ ಗೊತ್ತೇನು? ಹೀಗಾಗಿ ಈ ನೀರಿನ ಹನಿ ಹನಿ ಉಳಿಸುವುದು ನಮ್ಮ ಜವಾಬ್ದಾರಿ ಎಂದರು .

ಕಪ್ಪು ಮಣ್ಣಿನ ಭೂಮಿಯಲ್ಲಿ ತೋಡಲಾದ ಈ ಕೆರೆಯನ್ನು ಎರಡು ಭಾಗ ಮಾಡಲಾಗಿದೆ. ಒಂದು ಭಾಗಕ್ಕೆ ಹೂಳೆತ್ತಿ ಕಾಯಕಲ್ಪ ನೀಡಿ ನೀರು ತುಂಬಲಾಗಿದೆ. ಇನ್ನೊಂದು ಕಾಯಕಲ್ಪದ ಸಿದ್ಧತೆಯಲ್ಲಿದೆ.

ಇದು ಕಪ್ಪು ಮಣ್ಣು ಪ್ರದೇಶ. ಕೆರೆಯ ಆಳದಲ್ಲಿ ಆವೆಯ(ಅಂಟಿನಂತೆ) ಪದರ ರೂಪು ಗೊಂಡಿದೆ. ಹಾಗಾಗಿ ನೀರು ಇಂಗುವುದಿಲ್ಲ. ಎಲ್ಲಾದರೂ ದಂಡೆಯ ಮೂಲಕ ಕೊಂಚ ಅಂತರ್ಜಲಕ್ಕೆ ಸೇರಬಹುದು. ಸ್ವಲ್ಪ ಪ್ರಮಾಣದ ನೀರು ಸೂರ್ಯನ ತಾಪಕ್ಕೆ ಆವಿಯಾಗುತ್ತದೆ. ಅದನ್ನು ಹೊರತುಪಡಿಸಿದರೆ ನೀರು ವ್ಯರ್ಥವಾಗುವ ಮಾತೇ ಇಲ್ಲ’ ಎಂದರು.

ಕವಲೂರು ಕೆರೆಗೂ ಇದೇ ರೀತಿ ಕಾವಲು ಇದೆ. ನೀರನ್ನು ಕುಡಿಯುವ ಹೊರತಾಗಿ ಬೇರೆ ಯಾವುದಕ್ಕೂ ಬಳಸುವಂತಿಲ್ಲ. ಈ ನಿಯಮದಿಂದಾಗಿ ಊರಿನ ಜನಕ್ಕೆ ಸ್ವಲ್ಪ ನೆಮ್ಮದಿ. ಶುದ್ಧ ಸಿಹಿನೀರು ಸಿಗುತ್ತಿರುವುದು ಸಮಾಧಾನ ತಂದಿದೆ. ಕವಲೂರು ಊರ ಮುಂದಿನ ಕೆರೆಗೂ ಕಾಯಕಲ್ಪ ನೀಡಬೇಕು ಎಂಬುದು ಜನರ ಬೇಡಿಕೆ.

ಇದು ಬರಿ ನೀರಲ್ಲ ಜೀವ ಶಕ್ತಿ
ಜಲ ಪ್ರಕೃತಿಯ ದೊಡ್ಡ ಸಂಪತ್ತು. ಅದರ ಶಕ್ತಿ ಎಲ್ಲರನ್ನೂ ಜೋಡಿಸುತ್ತದೆ. ನೀರಿಗಿರುವ ಜೀವಶಕ್ತಿಯನ್ನು ಅರ್ಥ ಮಾಡಿಕೊಂಡು ಬಳಸಿದರೆ ಅದು ನಮ್ಮನ್ನು ಉಳಿಸುತ್ತದೆ. ಬೀಜ ಬೆಳೆಯಾಗಿ, ಬೆಳೆ ಆಹಾರವಾಗಿ ಆಹಾರ ಅಡುಗೆಯಾಗುವವರೆಗೂ ನೀರು ಬೇಕು. ಈ ಮೌಲ್ಯವನ್ನು ಎಲರೂ ಅರ್ಥ ಮಾಡಿಕೊಳ್ಳಬೇಕು. ನೀರಿನ ವಿಷಯದಲ್ಲಿ ಪ್ರತಿಯೊಬ್ಬರಿಗೂ ವೈಯಕ್ತಿಕವಾದ ನೀತಿ ಇರಬೇಕು.
-ಡಾ.ಎಂ.ಬಿ.ಪಾಟೀಲ, ವಿಸ್ತರಣಾಧಿಕಾರಿ, ರಾಯಚೂರು ಕೃಷಿ ವಿ.ವಿ. ಕೃಷಿ ಶಿಕ್ಷಣ ವಿಸ್ತರಣಾ ಕೇಂದ್ರ, ಕೊಪ್ಪಳ

ADVERTISEMENT

*

ಕೃಷಿ ಹೊಂಡವೇ ಅತ್ಯುತ್ತಮ
ಸದ್ಯದ ಪರಿಸ್ಥಿತಿಯಲ್ಲಿ ಈ ಪ್ರದೇಶಕ್ಕೆ ಕೃಷಿ ಹೊಂಡ ನಿರ್ಮಾಣವೇ ಅತ್ಯುತ್ತಮ ಮಾರ್ಗ. ಕೃಷಿ ಹೊಂಡ ನಿರ್ಮಾಣದಿಂದ ಭೂಮಿ ಕಳೆದುಕೊಳ್ಳುತ್ತೇವೆ ಅನ್ನುವುದು ಸರಿಯಲ್ಲ. ತೋಟಗಾರಿಕೆ ಬೆಳೆಗಳನ್ನು ಬೆಳೆದರೆ ಕಳೆದುಕೊಂಡ ಪ್ರದೇಶದ ಬೆಳೆಯ ಲಾಭವನ್ನು ಇಲ್ಲಿ ಪಡೆಯಬಹುದು. ಅಂತರ್ಜಲ ಸಂರಕ್ಷಣೆಯಲ್ಲಿ ಕೃಷಿ ಹೊಂಡದ ಪರಿಣಾಮ ದೀರ್ಘಕಾಲಿಕವಾದದ್ದು. ಆದ್ದರಿಂದ ಸರ್ಕಾರದ ಈ ಯೋಜನೆಯ ಸೌಲಭ್ಯ ಬಳಸಿಕೊಳ್ಳಬೇಕು.
ಎಸ್‌.ಬಿ.ಕೋಣಿ, ಕೃಷಿ ಇಲಾಖೆ ಸಲಹೆಗಾರ, ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.