ADVERTISEMENT

ಗುಣಮಟ್ಟದ ಶಿಕ್ಷಣ: ರಾಜ್ಯದ ಪ್ರತಿಷ್ಠಿತ ಶಾಲೆಗಳ ಸಾಲಿನಲ್ಲಿ ಗವಿಸಿದ್ದೇಶ್ವರ ಪ್ರೌಢಶಾಲೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2017, 5:58 IST
Last Updated 15 ಮಾರ್ಚ್ 2017, 5:58 IST

ಕುಕನೂರು: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಪಟ್ಟಣದ ಗವಿಸಿದ್ದೇಶ್ವರ ಪ್ರೌಢ ಶಾಲೆಯೂ ಒಂದು.
1958ರಲ್ಲಿ ಸಣ್ಣ ಮನೆಯಲ್ಲಿ ಆರಂಭವಾದ ಈ ಶಾಲೆ ಇದೀಗ ಬೃಹದಾಕಾರವಾಗಿ ಬೆಳೆದಿದೆ. ಉತ್ತಮ ಕಟ್ಟಡ, ಆಟದ ಮೈದಾನ ಎಲ್ಲವನ್ನು ಹೊಂದಿದೆ.

ವಿದ್ಯಾರ್ಥಿಗಳಲ್ಲಿ ಕಂಪ್ಯೂಟರ್ ಜ್ಞಾನದೊಂದಿಗೆ ವೈಜ್ಞಾನಿಕ ಮನೋಭಾವನೆ ಹಾಗೂ ಶೈಕ್ಷಣಿಕ ತಂತ್ರಜ್ಞಾನದ ಬಳಕೆಯ ಕೌಶಲವನ್ನು ಬೆಳೆಸಿ ಕಲಿಕೆಯಲ್ಲಿ ಕಂಪ್ಯೂಟರ್ ಶಿಕ್ಷಣದ ಮಹತ್ವವನ್ನು ತಿಳಿಸಿಕೊಡಲಾಗುತ್ತಿದೆ.

ಪ್ರತಿಭಾವಂತ ಮಕ್ಕಳಿಗಾಗಿ ಪರೀಕ್ಷೆ ನಡೆಸಿ ಗುರುತಿಸುವುದು ಹಾಗೂ ಶಿಷ್ಯವೇತನ ನೀಡುವ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯಗಳ ಬಗ್ಗೆ ಪೂರ್ವ ಪರೀಕ್ಷೆ ನಡೆಸಿ ಪರಿಹಾರ ಬೋಧನೆ ಕೈಗೊಂಡು ಸಾಫಲ್ಯ ಪರೀಕ್ಷೆ ನಡೆಸಿ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳನ್ನು ಗುರುತಿಸಿ ಶಾಲಾ ಶೈಕ್ಷಣಿಕ ಯೋಜನೆಯನ್ನು ತಯಾರಿಸಿ, ನಿರಂತರ ಬೋಧನೆಯನ್ನು ಕೈಗೊಂಡು ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆದಿದೆ ಎಂದು ಶಿಕ್ಷಕ ವಿ.ಕೆ.ಬಂಡಿವಡ್ಡರ ಹೇಳುತ್ತಾರೆ.

ADVERTISEMENT

ಶಿಕ್ಷಕರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲು ವೇದಿಕೆ ಕಲ್ಪಿಸಲಾಗುತ್ತಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಸಂಶೋಧನೆ, ಮೌಲ್ಯಮಾಪನ, ಉಸ್ತುವಾರಿ ಮೇಲ್ವಿಚಾರಣೆ ನಡೆಸಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ಹಾಗೂ ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನಕ್ಕೆ ಪೂರಕ ವಾತಾವರಣ ಕಲ್ಪಿಸಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ಬಂಡಿವಡ್ಡರ ಹೇಳಿದರು.

ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಉತ್ತಮ ಸಾಧನೆ ಹೊಂದಿದೆ. ಪರಿಸರ ಜ್ಞಾನ, ಶಿಸ್ತು, ಸಮಾನತೆ ಬಗ್ಗೆ ಮಕ್ಕಳಿಗೆ ತಿಳಿ ಹೇಳಲಾಗುತ್ತದೆ. ಪಾಠದೊಂದಿಗೆ ಆಟ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿಯೂ ಮಕ್ಕಳು ಮುಂದಿದ್ದಾರೆ. ಪ್ರತಿದಿನ ಕಬಡ್ಡಿ, ವಾಲಿಬಾಲ್ ಇತರೆ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಲಾಗುತ್ತಿದೆ.

ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಕ್ರೀಡೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿ ದ್ದಾರೆ ಎಂದು ಮಾಹಿತಿ ನೀಡುತ್ತಾರೆ ದೈಹಿಕ ಶಿಕ್ಷಣ ಶಿಕ್ಷಕ ಆರ್‌.ಡಿ.ರಾಠೋಡ.
ಶಾಲೆಯಲ್ಲಿ 315 ವಿದ್ಯಾರ್ಥಿಗಳು ಅಭ್ಯಾಸ ನಡೆಸುತ್ತಿದ್ದು, 10 ಶಿಕ್ಷಕ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಷ್ಟ್ರೀಯ ಹಬ್ಬ ಮತ್ತು ರಾಷ್ಟ್ರ ನಾಯಕರ ಜಯಂತಿ ಕಾರ್ಯಕ್ರಮಗಳಲ್ಲಿ ಮಕ್ಕಳು ಸಾಂಸ್ಕೃತಿಕ ಚಟುವಟಿಕೆ ಪ್ರದರ್ಶಿಸುತ್ತಾರೆ. ನಾಟಕ, ನೃತ್ಯ, ಭರತನಾಟ್ಯ, ಗಾಯನ, ಕೋಲಾಟವನ್ನು ಮಕ್ಕಳು ಪ್ರದರ್ಶಿಸುತ್ತಾರೆ ಎಂದು ಶಿಕ್ಷಕ ವಿ.ಆರ್‌.ಹಿರೇಮಠ ಹೇಳಿದ್ದಾರೆ.

ರಸಪ್ರಶ್ನೆ, ಓದುವ ಹವ್ಯಾಸ ಬೆಳೆಸಿಕೊಳ್ಳುವುದು, ದಿನ ಪತ್ರಿಕೆಗಳಲ್ಲಿ ಬರುವ ಶೈಕ್ಷಣಿಕ ಚಟುವಟಿಕೆಗೆ ಪೂರಕವಾದ ಪುರವಣಿಯನ್ನು ಮಕ್ಕಳಿಗೆ ನಿತ್ಯ ಬೋಧಿಸಲಾಗುತ್ತದೆ.

ಗ್ರಾಮೀಣ ಪ್ರದೇಶದ ಮಕ್ಕಳಲ್ಲಿಯೂ ಅದ್ಭುತ ಪ್ರತಿಭೆ ಇದೆ. ಅದನ್ನು ಹೊರ ಹಾಕಲು ಉತ್ತಮ ಶಿಕ್ಷಣ ಮತ್ತು ತರಬೇತಿ ಬೇಕು. ಬಡಮಕ್ಕಳಿಗೆ ಹೆಚ್ಚು ಹಣ ನೀಡಿ ಕಲಿಯಲು ಆಗುವುದಿಲ್ಲ ಎಂಬ ದೃಷ್ಟಿಯನ್ನು ಇಟ್ಟುಕೊಂಡು ಗ್ರಾಮೀಣ ಪ್ರದೇಶದಲ್ಲಿಯೇ ಶಿಕ್ಷಣ ಸಂಸ್ಥೆಯನ್ನು ತೆರೆಯಲಾಗಿದೆ ಎಂದು ಸಂಸ್ಥೆಯ ಪದಾಧಿಕಾರಿಗಳು ಹೇಳುತ್ತಾರೆ.

ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಣ ಸಂಸ್ಥೆಯ ಶ್ರಮಿಸುತ್ತಿದೆ. ಬಡ ಹಾಗೂ ಕುಗ್ರಾಮಗಳ ಮಕ್ಕಳನ್ನು ಶಾಲೆಗೆ ಕರೆತಂದು ಒಳ್ಳೆಯ ಶಿಕ್ಷಣ ನೀಡಲಾಗುತ್ತದೆ. ಶಿಕ್ಷಣದ ಜೊತೆಗೆ ಆಟ, ಸಂಸ್ಕೃತಿಯನ್ನು ಕಲಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಪಾಲಕ  ಹೇಳುತ್ತಾರೆ.

**

ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಉದ್ದೇಶ ನಮ್ಮದ್ದು.
–ಗವಿಸಿದ್ದಪ್ಪ ಚಲವಾದಿ, ಮುಖ್ಯಶಿಕ್ಷಕ

**

–ಮಂಜುನಾಥ ಎಸ್‌. ಅಂಗಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.