ADVERTISEMENT

ಡಿಜೆ ಬಂದ್‌: ದಿಢೀರ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2017, 6:46 IST
Last Updated 29 ಆಗಸ್ಟ್ 2017, 6:46 IST

ಕೊಪ್ಪಳ: ಗಣೇಶಮೂರ್ತಿ ವಿಸರ್ಜನೆ ವೇಳೆ ಪೊಲೀಸರು ಡಿ.ಜೆ ಬಂದ್ ಮಾಡಿದ್ದಕ್ಕೆ ಆಕ್ರೋಶಗೊಂಡ ಯುವಕರು ಮೂರ್ತಿಯನ್ನು ರಸ್ತೆಯಲ್ಲಿಟ್ಟು ಭಾನುವಾರ ತಡರಾತ್ರಿ ಅಶೋಕ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಕಿನ್ನಾಳ ರಸ್ತೆಯ ಜಿ.ಎಚ್.ಪಾಟೀಲ ನಗರದ ಏಕದಂತ ಮಿತ್ರ ಮಂಡಳಿ ಯುವಕರು ಗಣೇಶ ಮೂರ್ತಿಯನ್ನು ನಗರ ಹೃದಯಭಾಗವಾದ ಅಶೋಕ ವೃತ್ತದಲ್ಲಿಟ್ಟು ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಮೂರನೇ ದಿನ ಮಂಡಳಿಯವರು ಕಿನ್ನಾಳ ರಸ್ತೆ, ಅಶೋಕ ವೃತ್ತದ ಮಾರ್ಗವಾಗಿ ಗಣೇಶ ವಿಸರ್ಜನೆಗೆ ಹೊರಟಿದ್ದರು.

ಅಶೋಕ ವೃತ್ತದಲ್ಲಿ ಪೊಲೀಸರು ಬಂದು ಡಿ.ಜೆ ಬಂದ್ ಮಾಡಿಸಿದರು. ಇದರಿಂದ ಆಕ್ರೋಶಗೊಂಡ ಯುವಕರು ಗಣೇಶ ಮೂರ್ತಿಯನ್ನು ಅಶೋಕ ವೃತ್ತದಲ್ಲಿಟ್ಟು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದರು.

ADVERTISEMENT

ಎರಡು ಗಂಟೆ ಪ್ರತಿಭಟನೆ ನಡೆಸಿದ ಮಂಡಳಿ ಯುವಕರು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಶೆಟ್ಟಿ ವಿರುದ್ಧ ಧಿಕ್ಕಾರ ಕೂಗಿದರು. ‘ಜಿಲ್ಲಾಡಳಿತದ ಆದೇಶದಂತೆ 2,000 ವ್ಯಾಟ್ ಒಳಗಿನ ಡಿ.ಜೆ ಬಳಸಿದ್ದೇವೆ. ಆದರೆ, ಪೊಲೀಸರು ಏಕಾಏಕಿ ಸ್ಥಗಿತಗೊಳಿಸಿದ್ದಾರೆ. ಟ್ರ್ಯಾಕ್ಟರ್‌ನಲ್ಲಿದ್ದ ಡಿ.ಜೆ ಬಂದ್ ಮಾಡಿಸಿ ವಶಪಡಿಸಿಕೊಂಡಿದ್ದಾರೆ’ ಎಂದು ಯುವಕರು ಆರೋಪಿಸಿದರು.

ಪೊಲೀಸರು ಮತ್ತು ಪ್ರತಿಭಟನಾ ಕಾರರ ಮಧ್ಯೆ ವಾಗ್ವಾದ ನಡೆಯಿತು. ಗಣೇಶಮೂರ್ತಿಯನ್ನು ವಿಸರ್ಜನೆ ಮಾಡಿ ಎಂದು ಹೇಳಲು ಮುಂದಾದ ಡಿವೈಎಸ್‌ಪಿ ಶ್ರೀಕಾಂತ್ ಕಟ್ಟಿಮನಿ ಹಾಗೂ ಏಕದಂತ ಮಿತ್ರ ಮಂಡಳಿ ಯುವಕರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಪರಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಅರಿತ ಪೊಲೀಸರು ಹೆಚ್ಚಿನ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಿದರು.

2 ಗಂಟೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅನೂಪ್ ಶೆಟ್ಟಿ ಸ್ಥಳಕ್ಕೆ ಬರುತ್ತಿದ್ದಂತೆ ಯುವಕರು ಪೊಲೀಸರನ್ನು ಮತ್ತೆ ತರಾಟೆಗೆ ತಗೆದುಕೊಂಡರು. ಕೊನೆಗೆ ಪೊಲೀಸರೇ ಗಣೇಶ ಮೂರ್ತಿಯನ್ನು ವಿಸರ್ಜಿಸಿದರು. ಮಂಡಳಿಯವರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹೆದ್ದಾರಿಯಲ್ಲಿ ವಾಹನ ಬಂದ್‌ಗೆ ಮುಂದಾದರು. ಎಸ್.ಪಿ ಸಿಬ್ಬಂದಿಯೊಂದಿಗೆ ಓಡಿ ಹೋಗಿ ಯುವಕರನ್ನು ಚದುರಿಸಿದರು. ಕೆಲವರು ಕಲ್ಲು ತೂರಾಟ ನಡೆಸಿದರು. ಕೊನೆಗೆ ಕೈಗೆ ಸಿಕ್ಕ ನಾಲ್ವರನ್ನು ಪೊಲೀಸರು ಬಂಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.