ADVERTISEMENT

ಧನ್ವಿ ಬೀಜ ಕಂಪೆನಿಯಿಂದ ರೈತರಿಗೆ ಹಾನಿ

ಕಳಪೆ ಬೀಜ: ವಂಚನೆಗೊಳಗಾದವರನ್ನು ಕೇಳುವವರಿಲ್ಲ

​ಪ್ರಜಾವಾಣಿ ವಾರ್ತೆ
Published 24 ಮೇ 2016, 9:41 IST
Last Updated 24 ಮೇ 2016, 9:41 IST

ಗಂಗಾವತಿ: ತಾಲ್ಲೂಕಿನ ಮರಳಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಧನ್ವಿ ಎಂಬ ಆಂಧ್ರಪ್ರದೇಶ ಮೂಲದ ಕಂಪೆನಿಯೊಂದರ ಕಳಪೆ ಮೆಕ್ಕೆ ಜೋಳದ ಬೀಜಬಿತ್ತಿ ಹಾನಿಗೊಳಗಾದ ರೈತರಿಗೆ ನಷ್ಟ ಪರಿಹಾರ ಕೊಡಿಸಬೇಕಿದ್ದ ಕೃಷಿ ಇಲಾಖೆ ಕೈಕಟ್ಟಿ ಕುಳಿತಿರುವ ಘಟನೆ ಬೆಳಕಿಗ ಬಂದಿದೆ.

ಧನ್ವಿ ಎಂಬ ಬೀಜ ಕಂಪನಿಯ ಪ್ರತಿನಿಧಿಗಳ ಬಣ್ಣದ ಮಾತಿಗೆ ಮರುಳಾದ ರೈತರು, ಕನಕಗಿರಿಯ ಶ್ರೀಶೈಲ ಟ್ರೆಡಿಂಗ್ ಕಂಪೆನಿ ಎಂಬ ಅಂಗಡಿಯಿಂದ ಬೀಜಗಳನ್ನು ಖರೀದಿಸಿದ್ದರು. ಉತ್ತಮ ಇಳುವರಿ ದೊರೆಯಬಹುದು ಎಂದು ನಿರೀಕ್ಷಿಸಿ ಬಿತ್ತನೆ ಮಾಡಿದ್ದ ರೈತರಿಗೆ ಕೊನೆಗೆ ಗೊತ್ತಾಗಿದದ್ದು ತಾವು ವಂಚನೆಗೊಳಗಾಗಿರುವುದು.

ಬೆಳೆ ನೋಡಲು ಆಕರ್ಷಕ ಮತ್ತು ಸಮೃದ್ಧವಾಗಿದ್ದರೂ ಮೂರು ತಿಂಗಳು ಕಳೆದರೂ ಬೆಳೆಯಲ್ಲಿ ತೆನೆ ಮೂಡದ್ದರಿಂದ ರೈತ ಕಂಗಲಾಗಿದ್ದಾರೆ. ಗ್ರಾಮದ ಕೆಲ ಯುವಕರು ಇಂತಹ ಪ್ರಕರಣಗಳನ್ನು ಕೃಷಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ರೈತರಿಗಾದ ನಷ್ಟದ ಬಗ್ಗೆ ವಿವರಣೆ ನೀಡಿದ್ದಾರೆ.

‘ಮೇ6ರಂದು ಸ್ಥಳಕ್ಕೆ ಭೇಟಿ ನೀಡಿದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಜಂಬಣ್ಣ ಐಲಿ, ಕಳಪೆ ಬೀಜ ಬಿತ್ತಿ ಹಾನಿಗೊಳಗಾದ ರೈತರ ವಿವರ, ಹಾನಿಯ ಮೊತ್ತ ಇತರ ಮಾಹಿತಿ ಪಡೆದುಕೊಂಡು ಬಂದಿದ್ದಾರೆ. ಆದರೆ ಇದುವರೆಗೂ ರೈತರಿಗೆ ಸೂಕ್ತ ಪ್ರಮಾಣದ ಪರಿಹಾರ ದೊರೆತಿಲ್ಲ’ ಎಂದು ಗ್ರಾಮದ ಯುವಕ ಭೈರವೇಶ ಆರೋಪಿಸಿದ್ದಾರೆ.   

‘ಮಾಧ್ಯಮಗಳ ಮೂಲಕ ಪ್ರಕರಣ ಬಯಲಾಗುತ್ತಿದಂತೆಯೇ ಸ್ಥಳಕ್ಕೆ ಆಗಮಿಸಿದ ಸಂಸ್ಥೆಯ ಪ್ರತಿನಿಧಿಯೊಬ್ಬರು ಕದ್ದುಮುಚ್ಚಿ ರೈತನ ಕೈಗೆ ಹತ್ತಾರು ಸಾವಿರ ಮೊತ್ತದ ಹಣ ನೀಡಿ ಈ ಬಗ್ಗೆ ಎಲ್ಲಿಯೂ ದೂರು ದಾಖಲಿಸದಂತೆ ಆಗೂ ಮಾಧ್ಯಮಗಳಿಗೆ ಹೇಳಿಕೆ ನೀಡದಂತೆ ಒತ್ತಡ ಹೇರಿದ್ದಾರೆ’ ಎಂದು ರೈತ ಆನಂದಪ್ಪ ತಿಳಿಸಿದ್ದಾರೆ.

‘ಬೀಜ ಖರೀದಿ, ಉಳುಮೆ, ಗೊಬ್ಬರ, ಕೂಲಿ, ನೀರು ಹೀಗೆ ಹತ್ತಾರು ಬಾಬತ್ತಿಗೆ ರೈತರು ಒಂದು ಎಕರೆಗೆ ಕನಿಷ್ಠ ₹25 ಸಾವಿರ ಮೊತ್ತದ ಖರ್ಚು ಮಾಡುತ್ತಾರೆ. ಮೂರು ತಿಂಗಳ ಅವಧಿ ಬಳಿಕ ಉತ್ತಮ ಹೊಲದಲ್ಲಿ ಒಂದು ಎಕರೆಗೆ ಕನಿಷ್ಠ 28 ಕ್ವಿಂಟಲ್ ಮೆಕ್ಕೆಜೋಳ ಬೆಳೆಯಬಹುದು. 

ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಮೆಕ್ಕೆಜೋಳಕ್ಕೆ ₹1500 ಬೆಲೆಯಿದ್ದು 28 ಕ್ವಿಂಟಲ್ ಮೆಕ್ಕೆಜೋಳಕ್ಕೆ ಐವತ್ತು ಸಾವಿರ ರೂಪಾಯಿ ಮೊತ್ತವಾಗುತ್ತದೆ. ಆದರೆ ಸಂಸ್ಥೆಯ ಪ್ರತಿನಿಧಿಗಳು ರೈತರನ್ನು ವಂಚಿಸಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಕಳೆದ ಹತ್ತು ದಿನಗಳಿಂದ ಕಂಪನಿಯ ಪ್ರತಿನಿಧಿಗಳು ಕೈಗೆ ಸಿಗುತ್ತಿಲ್ಲ. ರೈತರ ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ. ಎರಡುಮೂರು ಬಾರಿ ಕರೆ ಮಾಡಿದರೆ ಮೊಬೈಲ್ ಬಂದ್‌ ಮಾಡುತ್ತಿದ್ದಾರೆ. ಕೃಷಿ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ರೈತರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.