ADVERTISEMENT

ಪ್ರವಾಸೋದ್ಯಮಕ್ಕೂ ಬಡಿದ ಬರಗಾಲ

ಕೊಪ್ಪಳ: ವಿರೂಪಾಪುರ ಗಡ್ಡೆ, ಆನೆಗೊಂದಿ ಪ್ರದೇಶದಲ್ಲಿ ಪ್ರವಾಸಿಗರ ಬರ

ಶರತ್‌ ಹೆಗ್ಡೆ
Published 23 ಜನವರಿ 2017, 9:58 IST
Last Updated 23 ಜನವರಿ 2017, 9:58 IST

ಕೊಪ್ಪಳ: ‘ಕನಿಷ್ಠ ದಿನಕ್ಕೆ 200ರಿಂದ 500 ಜನರಾದರೂ ಈ ಭಾಗದಲ್ಲಿ ಸಂಚರಿಸುತ್ತಿದ್ದರು. ಈ ವರ್ಷ ಅದು ಅರ್ಧಕ್ಕಿಂತಲೂ ಕಡಿಮೆಯಾಗಿದೆ’ ಎಂದರು ವಿರೂಪಾಪುರ ಗಡ್ಡೆಯ ಬಟ್ಟೆ ವ್ಯಾಪಾರಿ. ಗರಿಷ್ಠ ಬೆಲೆಯ ನೋಟುಗಳ ಅಮಾನ್ಯ, ಅಕ್ರಮ ರೆಸಾರ್ಟ್‌ಗಳ ತೆರವು, ಹೊಸ ವರ್ಷಾಚರಣೆಯ ಸಂಭ್ರಮ ಇಲ್ಲಿ ರೇವ್‌ ಪಾರ್ಟಿ ಎಂದು ಬಿಂಬಿತವಾಗಿ ಪೊಲೀಸರ ಕಣ್ಣು ನೆಟ್ಟಿರುವುದು, ಇತ್ಯಾದಿ  ಕಾರಣಗಳಿಂದ ಪ್ರವಾಸಿಗರ ಭೇಟಿ ಕಡಿಮೆಯಾಗಿದೆ ಎನ್ನುತ್ತಾರೆ ಇಲ್ಲಿನ ಆಟೋರಿಕ್ಷಾ ಚಾಲಕರು.

ಆಟಿಕೆ, ಬಟ್ಟೆ, ಸಿಗರೇಟ್, ಕಸೂತಿ ವಸ್ತುಗಳು, ಜೋಕಾಲಿ, ದೇವರ ಚಿತ್ರ, ಕಲ್ಲಿನ ಶಿಲ್ಪಗಳು ಇಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ವಸ್ತುಗಳು. ‘ಇಷ್ಟು ವರ್ಷ ಪ್ರವಾಸಿಗರು ಚೌಕಾಸಿ ಮಾಡುತ್ತಿರಲಿಲ್ಲ. ಆದರೆ, ಈ ಬಾರಿ ಅವರೂ ಜಾಣರಾಗಿದ್ದಾರೆ’ ಎನ್ನುತ್ತಾರೆ ಕರಕುಶಲ ವಸ್ತುಗಳ ವ್ಯಾಪಾರಿ ಹುಸೇನ್‌.

‘ಮೂರು ದ್ವಿಚಕ್ರ ವಾಹನ ಬಾಡಿಗೆಗೆ ಇಟ್ಟಿದ್ದೇನೆ. ಒಂದು ಮಾತ್ರ ಹೋಗಿದೆ. ಉಳಿದೆರಡು ಬೆಳಗ್ಗಿನಿಂದ ಇಲ್ಲೇ ಇವೆ’ ಎಂದು ಆತಂಕ ವ್ಯಕ್ತಪಡಿಸಿದರು ಮೊಪೆಡ್‌, ಸ್ಕೂಟರ್‌ ಬಾಡಿಗೆಗೆ ನೀಡುವ ಆನಂದ್‌.

ಹಣ ವಿನಿಮಯ ಕೇಂದ್ರಗಳು, ಟ್ರಾವೆಲ್‌ ಏಜೆನ್ಸಿಗಳು, ಸೈಬರ್‌ಕೆಫೆ, ರೆಸ್ಟೋರೆಂಟ್‌ಗಳು ಎಲ್ಲವೂ ಇವೆ. ಆದರೆ ದುಬಾರಿ ರೆಸ್ಟೋರೆಂಟ್‌ಗಳಿಂದ ಪ್ರವಾಸಿಗರು ವಿಮುಖರಾಗಿದ್ದಾರೆ. ರಸ್ತೆ ಬದಿಯಲ್ಲಿದ್ದ ಮೊಬೈಲ್‌ ಕ್ಯಾಂಟೀನೊಂದರಲ್ಲಿ ಪ್ರವಾಸಿಗರು ಊಟ ಮಾಡುತ್ತಿರುವುದು ಕಂಡುಬಂದಿತು.

ತುಂಗಭದ್ರಾ ನದಿ ಕಮಲಾಪುರ ಮತ್ತು ಆನೆಗೊಂದಿ ಪ್ರದೇಶದಲ್ಲಿ ಕವಲಾಗಿ ಹರಿಯುತ್ತದೆ. ಇದರ ನಡುವೆ ದ್ವೀಪದಂತಿರುವ ಪ್ರದೇಶ ವಿರೂಪಾಪುರ ಗಡ್ಡೆ. ಇದು ವಿದೇಶಿ ಪ್ರವಾಸಿಗರಿಗೆ ಅಚ್ಚುಮೆಚ್ಚಿನ ತಾಣ. ಹಂಪಿಯ ವಿರೂಪಾಕ್ಷ ದೇವಸ್ಥಾನಕ್ಕೆ ಭೇಟಿ ನೀಡಿದವರು ಹೊಳೆ ದಾಟಿ ಬಂದರೆ ವಿರೂಪಾಪುರ ಗಡ್ಡೆಯಲ್ಲಿ ಕಾಲಿಡುತ್ತಾರೆ. ಪ್ರಶಾಂತ ಪರಿಸರ, ಹಸಿರು, ಏಕಾಂತಕ್ಕೆ ಹೇಳಿ ಮಾಡಿಸಿದಂತಿದೆ.

‘ಹಲವು ಕಾರಣಗಳು ಹಂಪಿ, ವಿರೂಪಾಪುರಗಡ್ಡೆ, ಆನೆಗೊಂದಿ ಪ್ರದೇಶದ ಪ್ರವಾಸೋದ್ಯಮದ ಮೇಲೆ ಹೊಡೆತ ಕೊಟ್ಟಿವೆ. ಪ್ರಕೃತಿ ಸಹಜ ಬರಗಾಲದೊಂದಿಗೆ ಪ್ರವಾಸಿಗರ ಬರವೂ ಸೇರಿದೆ. ಹೀಗಾಗಿ ಸಾಲದ ಕಂತು ಕಟ್ಟಲೂ ನಾವು ಪರದಾಡುತ್ತಿದ್ದೇವೆ’ ಎಂದರು ಪ್ರವಾಸಿಗರ ದೋಣಿ ನಡೆಸುತ್ತಿರುವ ಮಾರುತಿ. ‘ಇದೇ ಪರಿಣಾಮ ಆನೆಗೊಂದಿ, ಅಂಜನಾದ್ರಿ ಪರ್ವತ ಪ್ರದೇಶದಲ್ಲೂ ಕಾಣಿಸುತ್ತಿದೆ. ಆದರೆ ಎರಡು ವರ್ಷಕ್ಕೊಮ್ಮೆ ಬರುವ ಕಾಯಂ ಪ್ರವಾಸಿಗರು ಮಾತ್ರ ಈ ಬಾರಿಯೂ ಬಂದಿದ್ದಾರೆ’ ಎನ್ನುತ್ತಾರೆ ಟ್ರಾವೆಲ್‌ ಏಜೆನ್ಸಿಯವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.