ADVERTISEMENT

‘ಬ್ರಹ್ಮ ಜ್ಞಾನದಿಂದ ಬದುಕು ಸಾರ್ಥಕ’

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 5:36 IST
Last Updated 19 ಜನವರಿ 2017, 5:36 IST
‘ಬ್ರಹ್ಮ ಜ್ಞಾನದಿಂದ ಬದುಕು ಸಾರ್ಥಕ’
‘ಬ್ರಹ್ಮ ಜ್ಞಾನದಿಂದ ಬದುಕು ಸಾರ್ಥಕ’   

ಸಿಂಧನೂರು: ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯ ಜ್ಞಾನಾಮೃತದಿಂದ ಬ್ರಹ್ಮಜ್ಞಾನವನ್ನು ಪಡೆದು ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಪಾರ್ವತಿ ಅಕ್ಕ ಸಲಹೆ ನೀಡಿದರು.

ನಗರದ ಹಿರೇಲಿಂಗೇಶ್ವರ ಕಾಲೊನಿಯ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದಲ್ಲಿ ದಾದಾ ಲೇಖ್‌ರಾಜ ಬ್ರಹ್ಮಬಾಬಾ ಸ್ಮೃತಿ ದಿನಾಚರಣೆ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ  ಮಾತನಾಡಿದರು.

ಬ್ರಹ್ಮಬಾಬಾರ ಸ್ಮೃತಿ ದಿನವನ್ನು ವಿಶ್ವಶಾಂತಿ ದಿನಾಚರಣೆಯನ್ನಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಮನುಷ್ಯ ಭೋಗದ ವಸ್ತುಗಳಿಗೆ ಹೆಚ್ಚು ಮಹತ್ವ ಕೊಡದೆ, ಪ್ರೀತಿ, ಶಾಂತಿ, ಸಹಬಾಳ್ವೆ ಮತ್ತು ಸಾಮರಸ್ಯದಿಂದ ಬದುಕಿ ಭಗವಂತನ ಕೃಪೆಗೆ ಪಾತ್ರರಾಗಬೇಕಾದ ಜವಾಬ್ದಾರಿಯನ್ನು ಮರೆಯಬಾರದು ಎಂದರು.

ಈಶ್ವರಿ ವಿದ್ಯಾಲಯದಲ್ಲಿ ಬಡವ, ಶ್ರೀಮಂತ, ಅಧಿಕಾರ, ಅಂತಸ್ತು ಯಾವುದೇ ಬೇಧವಿರುವುದಿಲ್ಲ. ಇಲ್ಲಿ ಎಲ್ಲರೂ ಭಗವಂತನ ಮಕ್ಕಳಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಭಗವಂತ ಎಲ್ಲ ಕಡೆಯಲ್ಲೂ ಇದ್ದಾನೆ ಎನ್ನುವ ತತ್ವವನ್ನು ಮನಸ್ಸಿನಲ್ಲಿಟ್ಟುಕೊಂಡು ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಜೀವನದಲ್ಲಿ ಒಳಿತನ್ನೇ ಮಾಡಬೇಕು. ಆಕಸ್ಮಿಕವಾಗಿ ಭೂಮಿಗೆ ಬಂದವರು ಅನಿವಾರ್ಯವಾಗಿ ಮೇಲೆ ಹೋಗಲೇಬೇಕಾಗಿದೆ.

ಹೋಗುವಾಗ ಕರ್ಮದ ಬುತ್ತಿಯನ್ನು ತೆಗೆದುಕೊಂಡು ಹೋಗಬೇಕಾಗಿರುವುದರಿಂದ ತಪ್ಪುಒಪ್ಪುಗಳನ್ನು ಪರಮಾತ್ಮನಿಗೆ ಸಲ್ಲಿಸಬೇಕಾಗಿದೆ ಎಂದು ವಿವರಿಸಿದರು.

ಈಶ್ವರಿ ವಿದ್ಯಾಲಯದಲ್ಲಿ 30 ಸಾವಿರ ಸಹೋದರಿಯರು ತಮ್ಮ ಬದುಕನ್ನು ಪರಮಾತ್ಮನಿಗೆ ಸಮರ್ಪಿಸಿಕೊಂಡು ಜನರ ಸೇವೆಯಲ್ಲಿ ಭಗವಂತನನ್ನು ಕಾಣುತ್ತಿದ್ದಾರೆ. 10 ಲಕ್ಷ ವಿದ್ಯಾರ್ಥಿಗಳು ಈಶ್ವರಿ ವಿದ್ಯಾಲಯದ ಮೂಲಕ ಬ್ರಹ್ಮಜ್ಞಾನವನ್ನು ಸಂಪಾದಿಸುತ್ತಿದ್ದಾರೆ. ಪ್ರತಿನಿತ್ಯ ಯೋಗ, ಧ್ಯಾನ್ಯ ಮತ್ತು ಪರರ ಸೇವೆ ಮಾಡುವ ಮೂಲಕ ಜ್ಞಾನಾಸಕ್ತರಾಗಿ ಶ್ರಮಿಸುತ್ತಿದ್ದಾರೆಂದು ಅವರು ಹೇಳಿದರು.

ರುದ್ರಗೌಡ ಜವಳಗೇರಾ, ದೇವರಡ್ಡಿ ಕಾನಿಹಾಳ, ಶಂಕ್ರಪ್ಪ, ಸುಬ್ಬಾರಾವ್, ಹಂಪಯ್ಯಸ್ವಾಮಿ, ಅಡಿವೆಪ್ಪ ಗೋನವಾರ, ಲಿಂಗಣ್ಣ ಲಿಗಾಡೆ, ಚನ್ನಪ್ಪ ಟೆಂಗುಟಿ, ವಿಜಯಲಕ್ಷ್ಮೀ ವೀರೇಶ ಮಸ್ಕಿ, ಶಾರದಾ ಬುದ್ದಪ್ಪ, ಲಕ್ಷ್ಮೀಬಾಯಿ, ಭುವನೇಶ್ವರಿ, ರಾಣಿ, ಶರಣಮ್ಮ, ಲೀಲಾವತಿ ಮಸ್ಕಿ, ಶಾರದಮ್ಮ ಹಿರೇಮಠ, ಲಲಿತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.