ADVERTISEMENT

ಶಿಶು ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 6:13 IST
Last Updated 25 ಏಪ್ರಿಲ್ 2017, 6:13 IST
ವೈದ್ಯರ ನಿರ್ಲಕ್ಷ್ಯದಿಂದ ಶಿಶು ಮೃತಪಟ್ಟಿದೆ ಎಂದು ಆರೋಪಿಸಿ ಪಾಲಕರು ಸೋಮವಾರ ಸಂಜೆ ಕುಷ್ಟಗಿ ಸರ್ಕಾರಿ ಆಸ್ಪತ್ರೆ ಮುಂದೆ  ಧರಣಿ ನಡೆಸಿದರು
ವೈದ್ಯರ ನಿರ್ಲಕ್ಷ್ಯದಿಂದ ಶಿಶು ಮೃತಪಟ್ಟಿದೆ ಎಂದು ಆರೋಪಿಸಿ ಪಾಲಕರು ಸೋಮವಾರ ಸಂಜೆ ಕುಷ್ಟಗಿ ಸರ್ಕಾರಿ ಆಸ್ಪತ್ರೆ ಮುಂದೆ ಧರಣಿ ನಡೆಸಿದರು   

ಕುಷ್ಟಗಿ: ‘ಹೆರಿಗೆ ಸಂದರ್ಭದಲ್ಲಿ ವೈದ್ಯರು ಮತ್ತು ಸಿಬ್ಬಂದಿ  ನಿರ್ಲಕ್ಷ್ಯದಿಂದ ನವಜಾತ ಗಂಡುಶಿಶು ಮೃತಪಟ್ಟಿದೆ’ ಎಂದು ಆರೋಪಿಸಿ ತಾಲ್ಲೂಕಿನ ಟೆಂಗುಂಟಿ ಗ್ರಾಮಸ್ಥರು ಸೋಮವಾರ  ಇಲ್ಲಿನ ಸರ್ಕಾರಿ ಆಸ್ಪತ್ರೆ ಮುಂದೆ ಶಿಶುವಿನ ಮೃತದೇಹದೊಂದಿಗೆ ಧರಣಿ ನಡೆಸಿದರು.

ಆಸ್ಪತ್ರೆ ಬಳಿ ಜಮಾಯಿಸಿದ ಗ್ರಾಮಸ್ಥರು ವೈದ್ಯರು ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ ಎಂದು ಅವರ ಜತೆ ವಾಗ್ವಾದ ನಡೆಸಿದರು. ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದರು.

‘ಶಿವನಮ್ಮ ಪೊಲೀಸಪಾಟೀಲ ಅವರನ್ನು  ಬೆಳಿಗ್ಗೆ ಆಸ್ಪತ್ರೆಗೆ ದಾಖಲಿಸ ಲಾಗಿತ್ತು. ತಪಾಸಣೆ ನಡೆಸಿದ ವೈದ್ಯಾಧಿ ಕಾರಿ ಡಾ.ಕೆ.ಎಸ್‌.ರೆಡ್ಡಿ ಸಹಜ ಹೆರಿಗೆಯಾಗುತ್ತದೆ ಎಂದು ಹೇಳಿದ್ದರು.  ಸಂಜೆ 4 ಗಂಟೆಗೆ  ಗಂಡುಮಗು ಜನಿ ಸಿತು. ಶಿಶುವಿಗೆ ಉಸಿರಾಟದ ತೊಂದರೆ ಇದ್ದು, ಖಾಸಗಿ ಮಕ್ಕಳ  ವೈದ್ಯರ ಬಳಿ ತಕ್ಷಣ ಕರೆದೊಯ್ಯುವಂತೆ ಹೆರಿಗೆ ಮಾಡಿಸಿದ್ದ ನರ್ಸ್‌ ಹೇಳಿಸಿದ್ದರು. ಆದರೆ ಹುಟ್ಟಿದ ತಕ್ಷಣ ಶಿಶು ಮೃತಪಟ್ಟಿದ್ದರೂ ಬದುಕಿದೆ ಎಂದು ಸುಳ್ಳು ಹೇಳಿದ್ದರು. ಸಿಬ್ಬಂದಿ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ’ ಎಂದು ಶಿಶುವಿನ ತಂದೆ ಬಸನಗೌಡ ಪೊಲೀಸ ಪಾಟೀಲ ಆರೋಪಿಸಿದರು.

ADVERTISEMENT

‘ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ನಿರ್ಲಕ್ಷ್ಯದಿಂದ ನಡೆದುಕೊಳ್ಳುತ್ತಾರೆ.  ಔಷಧವನ್ನೂ ಹೊರಗೆ ಬರೆದು ಕೊಟ್ಟಿದ್ದಾರೆ. ಸರಿಯಾಗಿ ತಪಾಸಣೆ ನಡೆಸುವುದಿಲ್ಲ ಸೌಲಭ್ಯಗಳಿಲ್ಲ’ ಎಂದು ಜಯಕರ್ನಾಟಕ ಸಂಘಟನೆಯ ರಮೇಶ ಮೇಲಿನಮನಿ, ರವಿಪ್ರಕಾಶ ಕೆಳಗಡೆ   ಆರೋಪಿಸಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಆನಂದ ಗೋಟೂರು, ‘ವೈದ್ಯರ ನಿರ್ಲಕ್ಷ್ಯದಿಂದ ಶಿಶು ಮೃತ ಪಟ್ಟಿಲ್ಲ. ಮಗು ಹೆರಿಗೆ ಪೂರ್ವದಲ್ಲಿ ಕೊರಳಿಗೆ ಮಾಸವನ್ನು ಸುತ್ತಿಕೊಂಡು ಹೊರಬಂದಿದ್ದರಿಂದ ಉಸಿರಾಟದ ತೊಂದರೆಯಿಂದ ಮೃತಪಟ್ಟಿದೆ. ಶೇ  2–3ರಷ್ಟು ಇಂಥ ಪ್ರಕರಣಗಳು ಸಂಭವಿ ಸುವುದು ಸಾಮಾನ್ಯ’ ಎಂದರು.

‘ಆಸ್ಪತ್ರೆಯ ಮಕ್ಕಳ ವೈದ್ಯ ರಜೆಯಲ್ಲಿದ್ದಾರೆ. ಹೀಗಾಗಿ ಖಾಸಗಿ ಮಕ್ಕಳ ವೈದ್ಯರ ಬಳಿ ಕರೆದೊಯ್ಯಲು ಸಲಹೆ ನೀಡಲಾಗಿತ್ತು’ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕೆ.ಎಸ್‌.ರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.