ADVERTISEMENT

‘ಸಾಹಿತ್ಯಕ್ಕೆ ದಲಿತ ವಚನಕಾರರ ಕೊಡುಗೆ ಅಪಾರ’

ದಲಿತ ವಚನಕಾರರ ಜಯಂತಿಯಲ್ಲಿ ಉಪ ವಿಭಾಗಾಧಿಕಾರಿ ಎಂ.ಪಿ. ಮಾರುತಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 9:47 IST
Last Updated 17 ಮಾರ್ಚ್ 2018, 9:47 IST

ಲಿಂಗಸುಗೂರು: ‘ಸಾಹಿತ್ಯ ಕ್ಷೇತ್ರಕ್ಕೆ ದಲಿತ ವಚನಕಾರರ ಕೊಡುಗೆ ಸಹ ಅಪಾರ’ ಎಂದು ಉಪ ವಿಭಾಗಾಧಿಕಾರಿ ಎಂ.ಪಿ. ಮಾರುತಿ ಹೇಳಿದರು.

ಶುಕ್ರವಾರ ದಲಿತ ವಚನಕಾರರ ಜಯಂತಿ ಉದ್ಘಾಟಿಸಿ ಮಾತನಾಡಿ, ‘ಕಾಯಕ ನಿಷ್ಠೆ, ಸಮಾಜಮುಖಿ ಚಿಂತನೆ, ಲಿಂಗಾಂಗ ಸಾಮರಸ್ಯಗಳ ಮೂಲಕ ದಲಿತ ಸಮುದಾಯದ ಕಾಯಕ ಜೀವಿಗಳು ತಮ್ಮ ಬದುಕಿನ ಅನುಭವ, ನೋವು, ನಲಿವುಗಳನ್ನು ವಚನಗಳಲ್ಲಿ ಸಂಗ್ರಹಿಸುತ್ತ ಅನುಭವ ಮಂಟಪದ ಮೂಲಕ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ್ದು ಇತಿಹಾಸ’ ಎಂದು ವಿವರಿಸಿದರು.

ಲೊಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಅಶೋಕ ಬರಗುಂಡಿ ಮಾತನಾಡಿ ‘ಇತರೆ ವಚನಕಾರರಿಗಿಂತ ದಲಿತ ವಚನಕಾರರ ವಚನಗಳಲ್ಲಿ ಬಳಸಿದ ಶಬ್ದಗಳಿಗೆ ಗಟ್ಟಿತನವಿದೆ. ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ,ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗಪೆದ್ದಿ ಅವರುಗಳ ವಚನಗಳು ನಮಗೆಲ್ಲ ದಾರಿ’ ಎಂದರು.

ADVERTISEMENT

ಕಾಟಾಚಾರದ ಆಚರಣೆ: ದಲಿತ ವಚನಕಾರರ ಜಯಂತಿ ಆಚರಣೆ ನಿಮಿತ್ತ ಆಯೋಜಿಸಿದ್ದ ದಲಿತ ವಚನಕಾರರ ಭಾವಚಿತ್ರದ ಮೆರವಣಿಗೆಗೆ ಬೆರಳೆಣಿಕೆಷ್ಟು ಮಂದಿ ಭಾಗವಹಿಸಿದ್ದರು. ಸಭೆಯಲ್ಲಿ ಸಹ ಕೆಲವೇ ಜನರು ಭಾಗವಹಿಸಿದ್ದು ತಾಲ್ಲೂಕು ಆಡಳಿತದ ಕಾಟಾಚಾರದ ಆಚರಣೆಗೆ ಸಾಕ್ಷಿಯಾಗಿತ್ತು. ಬಹುತೇಕ ಇಲಾಖೆ, ಅಧಿಕಾರಿಗಳು, ಸಿಬ್ಬಂದಿ ಶರಣಾಭಿಮಾನಿಗಳು ಅನುಪಸ್ಥಿತಿ ಎದ್ದು ಕಾಣುತ್ತಿತ್ತು.

ಪುರಸಭೆ ಅಧ್ಯಕ್ಷ ಖಾದರಪಾಷ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷೆ ಶಕುಂತಲಾ ಹನುಮಂತಪ್ಪ ಕಂದಗಲ್ಲ, ತಹಶೀಲ್ದಾರ್‌ ಚಾಮರಾಜ ಪಾಟೀಲ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಪುಷ್ಪಾ ಎಂ. ಕಮ್ಮಾರ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಭಂಡಾರಿ, ಡಾ. ರಾಚಪ್ಪ, ಡಾ. ರುದ್ರಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.