ADVERTISEMENT

₹650 ಕೋಟಿ ವೆಚ್ಚದ ಕ್ರಿಯಾಯೋಜನೆ ಸಲ್ಲಿಕೆ

ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಉನ್ನತ ಶಿಕ್ಷಣದಲ್ಲಿ ದಾಖಲಾತಿ ಹೆಚ್ಚಿಸುವ ಆಶಯ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 7:00 IST
Last Updated 9 ಮಾರ್ಚ್ 2017, 7:00 IST
ಬಳ್ಳಾರಿ: ಹೈದರಾಬಾದ್‌ ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿ ಉನ್ನತ ಶಿಕ್ಷಣದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ, ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಎಸ್‌. ಸುಭಾಷ್‌ ನೇತೃತ್ವದಲ್ಲಿ ರಚಿಸಲಾಗಿದ್ದ ಕುಲಪತಿಗಳ ಸಮಿತಿಯು ಉನ್ನತ ಶಿಕ್ಷಣ ಇಲಾಖೆಗೆ  ₹ 650 ಕೋಟಿ ವೆಚ್ಚದ ಕ್ರಿಯಾ ಯೋಜನೆ ಸಲ್ಲಿಸಿದೆ.
 
‘ಪ್ರಸ್ತಾವ ಸಲ್ಲಿಸಿ ಕೆಲವು ತಿಂಗಳಾದರೂ ಇಲಾಖೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ’ ಎಂದು ಪ್ರೊ.ಎಂ.ಎಸ್‌.ಸುಭಾಷ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
 
‘ದಾಖಲಾತಿ ಹೆಚ್ಚಿಸುವ ಉದ್ದೇಶದ ಜೊತೆಗೆ, ಉದ್ಯೋಗಪೂರ್ವ ಕೌಶಲ ತರಬೇತಿ, ವಿದ್ಯಾರ್ಥಿಗಳಲ್ಲಿ ಉದ್ಯಮ ಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ಕನ್ನಡ ವಿಶ್ವವಿದ್ಯಾಲಯ, ಕೃಷ್ಣದೇವರಾಯ ವಿಶ್ವವಿದ್ಯಾಲಯ, ಗುಲ್ಬರ್ಗಾ ವಿಶ್ವವಿದ್ಯಾಲಯ, ರಾಯಚೂರಿನ ಕೃಷಿ ವಿಶ್ವವಿದ್ಯಾಲಯ, ಬೀದರಿನ ಕರ್ನಾಟಕ ಪಶುವೈದ್ಯಕೀಯ, ಪಶು, ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಒಟ್ಟಿಗೇ ಈ ಕ್ರಿಯಾ ಯೋಜನೆ ಸಿದ್ಧಪಡಿಸಿವೆ’ ಎಂದರು.
 
‘ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಉದ್ಯೋಗಪೂರ್ವ ತರಬೇತಿ ಕೇಂದ್ರ, ಗುಲ್ಬರ್ಗಾದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ, ರಾಯಚೂರಿನಲ್ಲಿ ಕೌಶಲ ಆಧಾರಿತ ಕಾಲೇಜುಗಳ ಸ್ಥಾಪನೆ ಹಾಗೂ ಬೀದರಿನಲ್ಲಿ ತರಬೇತಿ ಮತ್ತು ಕೌಶಲ ಅಭಿವೃದ್ಧಿ ಕೇಂದ್ರಕ್ಕೆ ತಲಾ ₹ 25 ಕೋಟಿ ಅಗತ್ಯವಿದೆ ಎಂದು ಪ್ರಸ್ತಾಪಿಸಲಾಗಿದೆ’ ಎಂದರು.
 
‘ಬಳ್ಳಾರಿ ಹಾಗೂ ಗುಲ್ಬರ್ಗಾದಲ್ಲಿ ಹಾಸ್ಟೆಲ್‌, ಬೀದರ್‌ ಮತ್ತು ರಾಯಚೂರಿನಲ್ಲಿ ಮೂಲಸೌಕರ್ಯಕ್ಕೆ ತಲಾ ₹ 50 ಕೋಟಿ, ಬಳ್ಳಾರಿಯಲ್ಲಿ ವಿಶನ್‌- 2025ಗೆ ₹ 100 ಕೋಟಿ ಕೇಳಲಾಗಿದೆ’ ಎಂದು ವಿವರಿಸಿದರು.
 
‘ಸಂಡೂರಿನ ನಂದಿಹಳ್ಳಿಯಲ್ಲಿ ಗಣಿ ಅಧ್ಯಯನ ಕಾಲೇಜು, ಎಂಜಿನಿಯರಿಂಗ್‌ ಹಾಗೂ ಪರಿಸರ ವಿಜ್ಞಾನ ಕಾಲೇಜು ಸ್ಥಾಪನೆಗೆ ₹ 100 ಕೋಟಿ, ರಾಯಚೂರಿನಲ್ಲಿ ಮಾಹಿತಿ–ತರಬೇತಿ ಕೇಂದ್ರಕ್ಕೆ ಹಾಗೂ ಬೀದರಿನಲ್ಲಿ ಉನ್ನತ ಅಧ್ಯಯನ ಕಾಲೇಜು ಸ್ಥಾಪನೆಗೆ ತಲಾ ₹50 ಕೋಟಿ ಬೇಡಿಕೆ ಇಡಲಾಗಿದೆ’ ಎಂದರು.

ಹೈ–ಕ ಮಂಡಳಿಗೆ ಪ್ರತ್ಯೇಕ ಪ್ರಸ್ತಾವ
‘ಬಳ್ಳಾರಿಯ ವಿಶ್ವವಿದ್ಯಾಲಯದ ಅಭಿವೃದ್ಧಿಗಾಗಿ, ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಪ್ರತ್ಯೇಕವಾಗಿ ₹ 365 ಕೋಟಿ ವೆಚ್ಚದ ಕ್ರಿಯಾಯೋಜನೆ ಸಲ್ಲಿಸಿದೆ. ಇದುವರೆಗೆ ₹1 ಕೋಟಿಯಷ್ಟೇ ಬಿಡುಗಡೆಯಾಗಿದೆ. ಮಂಡಳಿ ಮೇಲೆ ಒತ್ತಡ ತರುವ ಸಲುವಾಗಿ, ಸ್ಥಳೀಯ ಜನಪ್ರತಿನಿಧಿಗಳ ಸಭೆ ನಡೆಸಲು ನಿರ್ಧರಿಸಲಾಗಿದೆ’ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.