ADVERTISEMENT

ಕಲ್ಯಾಣಿಗೆ ಕಳೆ ತಂದ ‘ನರೇಗಾ’

ಕೆ.ಮಲ್ಲಿಕಾರ್ಜುನ
Published 8 ಜುಲೈ 2022, 5:37 IST
Last Updated 8 ಜುಲೈ 2022, 5:37 IST
ಕಾರಟಗಿ ತಾಲ್ಲೂಕಿನ ಯರಡೋಣ ಗ್ರಾಮದ ಕಲ್ಯಾಣಿ (ಮೊದಲಿನ ಸ್ಥಿತಿ)
ಕಾರಟಗಿ ತಾಲ್ಲೂಕಿನ ಯರಡೋಣ ಗ್ರಾಮದ ಕಲ್ಯಾಣಿ (ಮೊದಲಿನ ಸ್ಥಿತಿ)   

ಕಾರಟಗಿ: ಯರಡೋಣ ಗ್ರಾಮದಲ್ಲಿ ನಿಜಾಮರ ಕಾಲದ ಕಲ್ಯಾಣಿ, ನಾಗದೇವರ ಮೂರ್ತಿಗಳಿವೆ. ರೈತರು ಭತ್ತ ನಾಟಿ ಮತ್ತು ಕಟಾವು ಮಾಡುವಾಗ ಕಲ್ಯಾಣಿಯ ನೀರನ್ನು ಉಪಯೋಗಿಸಿ ಪೂಜೆ ಸಲ್ಲಿಸುತ್ತಿದ್ದರು. ಇದರಿಂದಲೇ ಉತ್ತಮ ಇಳುವರಿ ಬರುತ್ತಿದೆ ಎಂಬ ನಂಬಿಕೆ ಬೇರೂರಿತ್ತು. ಅನಾರೋಗ್ಯಕ್ಕೀಡಾದವರು ಕಲ್ಯಾಣಿ ನೀರು ಕುಡಿದರೆ ಗುಣಮುಖರಾಗುವರು ಎಂಬ ನಂಬಿಕೆಯೂ ಇತ್ತು.

ಇಂತಹ ಇತಿಹಾಸ ಹೊಂದಿದ ಕಲ್ಯಾಣಿ 2 ದಶಕದಿಂದಲೂ ಕಸ, ಕಡ್ಡಿ, ಹೂಳು ತುಂಬಿಕೊಂಡು ತಿಪ್ಪೆಯಂತಾಗಿತ್ತು. ಇದಕ್ಕೆಲ್ಲಾ ನರೇಗಾ ಯೋಜನೆ ತಿಲಾಂಜಲಿ ನೀಡಿದ್ದು, ಕಲ್ಯಾಣಿಗೆ ಹೊಸ ಕಳೆ ಬಂದಿದೆ. ನರೇಗಾ ಯೋಜನೆ ಇತಿಹಾಸದ ಮೇಲೆ ಹೊಸ ಬೆಳಕು ಚಲ್ಲುವಲ್ಲಿ ಯಶಸ್ವಿಯಾಗಿದೆ.

ಕಲ್ಯಾಣಿ ಹೊರ ಭಾಗ ಹಾಗೂ ಪಕ್ಕದಲ್ಲಿರುವ ಬನ್ನಿ ಮಹಾಂಕಾಳಿ ದೇವಸ್ಥಾನದ ಬಳಿ ತಡೆಗೋಡೆ ಇರದೇ ಜನರು ಭಯಭೀತರಾಗಿ ಓಡಾಡಬೇಕಿತ್ತು. ಗಂಗಾಪೂಜೆಗೆ ಸ್ಥಳವೂ ಇರಲಿಲ್ಲ. ನರೇಗಾ ಯೋಜನೆ ಯಿಂದ ಕಲ್ಯಾಣಿ ಪುನಶ್ಚೇತನವಾಗಿದೆ.

ADVERTISEMENT

₹5.85 ಲಕ್ಷ ಅನುದಾನ ಬಳಕೆ: ಕಲ್ಯಾಣಿಯ ಪುನರ್‌ ಅಭಿವೃದ್ಧಿಗೆ ₹5.85 ಲಕ್ಷ ನರೇಗಾ ಅನುದಾನ ಬಳಸಲಾಗಿದೆ. ಕೂಲಿ ಕಾರ್ಮಿಕರ ಖಾತೆಗೆ ₹1.47 ಲಕ್ಷ ಹಾಗೂ ಸಾಮಗ್ರಿಗಳ ವೆಚ್ಚಕ್ಕೆ ₹3.77 ಲಕ್ಷ ಬಳಸಲಾಗಿದೆ. ಕಲ್ಯಾಣಿಗೆ ತಡೆಗೋಡೆ, ಬಣ್ಣ, ರಕ್ಷಣಾ ಗೋಡೆ, ಮೆಟ್ಟಿಲು, ಗೇಟು ಅಳವಡಿಸಿ, ಬನ್ನಿ ಮಹಾಂಕಾಳಿ ದೇವಸ್ಥಾನದ ಸುತ್ತಲೂ ಕಾಂಕ್ರಿಟ್‌ ಹಾಕಿ ಪೂಜೆ ಕಟ್ಟೆ ಕಟ್ಟಲಾಗಿದೆ.

ಇಕ್ಕಟ್ಟಾದ ಜಾಗ: ತೀರಾ ಇಕ್ಕಟ್ಟಾದ ಜಾಗಯಲ್ಲಿ ಅಭಿವೃದ್ದಿ ಕೆಲಸ ಕೈಗೊಳ್ಳುವುದೇ ಸವಾಲಿನ ಕೆಲಸವಾಗಿತ್ತು. ಇದ್ದ 4 ಅಡಿ ಕಾಲುದಾರಿಯಲ್ಲಿ ಹೂಳು ತಗೆಯು ವುದು, ವಿಲೇವಾರಿ ಮಾಡುವುದು ಸವಾಲಿನ ಕೆಲಸವಾಗಿತ್ತು. ಗ್ರಾಮದ ಕೆಲಸ ಎಂಬ ಉತ್ಸಾಹದಲ್ಲಿ ಕೂಲಿ ಕಾರ್ಮಿಕರು ಹೆಚ್ಚಿನ ಆಸಕ್ತಿ ವಹಿಸಿ ಕೆಲಸ ಮಾಡಿ ಕೊನೆಗೂ ಕಲ್ಯಾಣಿಗೆ ಪುನಶ್ಚೇತನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಲ್ಯಾಣಿ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶಗೌಡ, ಸದಸ್ಯರಾದ ಶರಣಬಸವ ಕೋಲ್ಕಾರ್ ಆಸಕ್ತಿ ವಹಿಸಿ ಕೆಲಸ ಮಾಡಿದ್ದರು.

----

*ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಐತಿಹಾಸಿಕ ಕಲ್ಯಾಣಿಗಳನ್ನು ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಯರಡೋಣ ಗ್ರಾಮದ ಪುರಾತನ ಕಲ್ಯಾಣಿ ಅಭಿವೃದ್ಧಿಪಡಿಸಲಾಗಿದ್ದು, ಹೊಸ ಕಳೆ ಬಂದಿದೆ

- ಬಿ.ಫೌಜೀಯಾ ತರನ್ನುಮ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿ.ಪಂ.ಕೊಪ್ಪಳ

*ಯರಡೋಣ ಗ್ರಾಮದಲ್ಲಿ ಸಂಪೂರ್ಣ ಹಾಳಾಗಿದ್ದ ಪುರಾತನ ಕಲ್ಯಾಣಿಗೆ ನರೇಗಾ ಯೋಜನೆಯ ಅನುದಾನ ಸದ್ಬಳಕೆ ಮಾಡಿಕೊಂಡು ಪುನರುಜ್ಜೀವನಗೊಳಿಸಲಾಗಿದೆ. ಈಗ ಮಳೆಯಾಗಿ, ಅಂತರ್ಜಲ ಹೆಚ್ಚಳವಾಗಿ, ಕಲ್ಯಾಣಿ ತುಂಬಿ ನವ ವಧುವಿನಂತೆ ಕಂಗೊಳಿಸಲಿದೆ.

- ಡಾ.ಡಿ.ಮೋಹನ್, ಕಾರ್ಯನಿರ್ವಾಹಕ ಅಧಿಕಾರಿಗಳು, ತಾ.ಪಂ ಕಾರಟಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.