ADVERTISEMENT

17ರಂದು ವಿರುಪಾಪೂರದಲ್ಲಿ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮ

ಕೆ.ಶರಣಬಸವ ನವಲಹಳ್ಳಿ
Published 14 ಡಿಸೆಂಬರ್ 2022, 5:53 IST
Last Updated 14 ಡಿಸೆಂಬರ್ 2022, 5:53 IST
ತಾವರಗೇರಾ ಸಮೀಪದ ವಿರುಪಾಪೂರ ಗ್ರಾಮದಲ್ಲಿ ರಸ್ತೆಯ ಮಧ್ಯೆ ಹರಿಯುತ್ತಿರುವ ಕೊಳಚೆ ನೀರು
ತಾವರಗೇರಾ ಸಮೀಪದ ವಿರುಪಾಪೂರ ಗ್ರಾಮದಲ್ಲಿ ರಸ್ತೆಯ ಮಧ್ಯೆ ಹರಿಯುತ್ತಿರುವ ಕೊಳಚೆ ನೀರು   

ತಾವರಗೇರಾ: ಈಚೆಗೆ ಸುರಿದ ಮಳೆಗೆ ಮನೆ ಕುಸಿದು ಅತಂತ್ರರಾದ ಕುಟುಂಬಕ್ಕೆ ಸಿಗದ ಪರಿಹಾರ, ಸಣ್ಣ ಮಳೆಗೂ ಸೋರುವ ಸರ್ಕಾರಿ ಪ್ರಾಥಮಿಕ ಶಾಲೆ ನೂತನ ಕೊಠಡಿ, ಸ್ಮಶಾನ ಜಾಗದ ಕೊರತೆ, ಸ್ವಚ್ಛತೆ ಇಲ್ಲದೇ ಆವರಿಸಿದ ರೋಗಭೀತಿ... ಇದು ‘ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ’ಕ್ಕೆ ಆಯ್ಕೆಯಾದ ಇಲ್ಲಿನ ವಿರುಪಾಪೂರದ ಸಮಸ್ಯೆಗಳಿವು.

ಈ ಗ್ರಾಮದಲ್ಲಿ ಡಿಸೆಂಬರ್‌ 17ರ ಶನಿವಾರ ‘ಜಿಲ್ಲಾಧಿಕಾರಿಗಳ ಕಡೆ ಹಳ್ಳಿಯ ಕಡೆ’ ಕಾರ್ಯಕ್ರಮ ನಡೆಸಲು ಜಿಲ್ಲಾಡಳಿತವು ನಿರ್ಧರಿಸಿದೆ. ಕಾರ್ಯಕ್ರಮಕ್ಕೆ ಕೆಲ ಸಿದ್ಧತೆಗಳು ಸದ್ದಿಲ್ಲದೇ ನಡೆದಿವೆ.

ಲಿಂಗದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ವಿರುಪಾಪೂರದ 230ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿದ್ದು, 1,200 ಜನಸಂಖ್ಯೆಯಿದೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6 ಕೊಠಡಿಗಳಲ್ಲಿ ತರಗತಿ ನಡೆಯುತ್ತಿದ್ದು, ನಾಲ್ಕು ಕೊಠಡಿಗಳು ಮಳೆ ನೀರಿಗೆ ಸೋರುತ್ತಿವೆ. ಶಾಲೆಯಲ್ಲಿ 1ರಿಂದ 7ನೇ ತರಗತಿಯ 183 ಮಕ್ಕಳಿದ್ದು, ಮೂವರು ಕಾಯಂ ಶಿಕ್ಷಕರಿದ್ದಾರೆ. ಗ್ರಾಮಸ್ಥರ ಕೋರಿಕೆ ಮೇರೆಗೆ ಇಬ್ಬರು ಅತಿಥಿ ಶಿಕ್ಷಕರು ಕಾರ್ಯ ನಿರ್ವಸುತ್ತಿದ್ದು, ಇನ್ನೂ ಇಬ್ಬರು ಶಿಕ್ಷಕರ ಅಗತ್ಯವಿದೆ.

ADVERTISEMENT

2017 -2018ನೇ ಸಾಲಿನ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಮೈಕ್ರೋ ಯೋಜನೆ ಅಡಿ ನಿರ್ಮಿಸಿರುವ ನೂತನ ಕೊಠಡಿ ಕಳಪೆ ಕಾಮಗಾರಿಯಿಂದ ಮೇಲ್ಛಾವಣಿಯಿಂದ ನೀರು ಸೋರುತ್ತಿದೆ. ತರಗತಿ ಸಮಯದಲ್ಲಿ ಮಳೆ ಸುರಿದರೆ ಮಕ್ಕಳ ಸ್ಥಿತಿ ಹೇಳತೀರದು. ಗ್ರಾಮದಲ್ಲಿ ಎರಡು ಅಂಗನವಾಡಿ ಕೇಂದ್ರಗಳಿದ್ದು, 1ನೇ ಕೇಂದ್ರವು ಖಾಸಗಿ ಮನೆಯೊಂದರಲ್ಲಿ ನಡೆಯುತ್ತಿದೆ.

‘ಪರಿಶಿಷ್ಟ ಜಾತಿ ಸಮುದಾಯದ ಓಣಿಯಲ್ಲಿ ರಸ್ತೆಯ ಮಧ್ಯೆ ಕಲುಷಿತ ನೀರು ನಿಂತು ಸೊಳ್ಳೆ ಕಾಟ ಹೆಚ್ಚಾಗಿದೆ. ಸಿಸಿ ರಸ್ತೆ ನಿರ್ಮಿಸುವಂತೆ ಮನವಿ ಮಾಡಿದ್ದರೂ ಗ್ರಾಮ ಪಂಚಾಯಿತಿ ಆಡಳಿತ ನಿರ್ಲಕ್ಷ್ಯ ವಹಿಸಿದೆ. ಕಳೆದ ಮೂರು ತಿಂಗಳ ಹಿಂದೆ ಸುರಿದ ಮಳೆಗೆ ಗ್ರಾಮದ ಯಂಕೋಬ ಮತ್ತು ಹನುಮಪ್ಪ ಭೀಮಣ್ಣ ಎಂಬುವವರ ಮನೆಗಳು ಬಿದ್ದಿವೆ.ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುಟುಂಬಗಳಿಗೆ ನೆರೆ ಪರಿಹಾರ ದೊರಕಿಲ್ಲ. ಅಲ್ಲದೇ 8 ರಿಂದ 10 ಕುಟುಂಬಗಳು ವಸತಿ ಕೊರತೆಯಿಂದ ಗುಡಿಸಲಲ್ಲಿ ವಾಸಿಸುತ್ತಿವೆ ಎಂದು ಗ್ರಾಮದ ಹನಮಗೌಡ ಗೌಡ್ರ ಮತ್ತು ಯಮನಪ್ಪ ಕಾರಟಗಿ ತಿಳಿಸಿದರು.

‘ಸ್ಮಶಾನದ ಸ್ಥಳದ ಕೊರತೆಯಿಂದ ಅರಣ್ಯ ಇಲಾಖೆಯ ಸರ್ವೆ ಸಂಖ್ಯೆ 40 ರಲ್ಲಿ ಮೃತರ ಅಂತ್ಯಕ್ರಿಯೆ ನಡೆಸಲಾಗುತ್ತಿದೆ. ಸರ್ಕಾರ ಎಲ್ಲಾ ಸಮುದಾಯದ ಜನರ ಸ್ಮಶಾನ ಭೂಮಿಗೆ ಜಾಗ ಮಂಜೂರು ಮಾಡಬೇಕು. ಈಗಾಗಲೇ ಗ್ರಾಮಸ್ಥರು ಬೇಡಿಕೆ ಸಲ್ಲಿಸಿದ್ದೇವೆ’ ಎಂದು ಮುಖಂಡ ನಾಗರಾಜ ಲೋಕರೆ ತಿಳಿಸಿದರು.

ಗ್ರಾಮದಲ್ಲಿ ಬಹುತೇಕ ಜನರು ಕೃಷಿ ಮತ್ತು ಕೂಲಿ ಕೆಲಸದಿಂದ ಜೀವನ ನಡೆಸುತ್ತಿದ್ದು, ಅವರಿಗೆ ಆದರೆ ಸರ್ಕಾರದ ವಿವಿಧ ಸೌಕರ್ಯಗಳು ತಲುಪಿಲ್ಲ. ಇಲ್ಲಿನ ಶಾಲೆಯ ಸಮಸ್ಯೆ ಬಗ್ಗೆ ಅಧಿಕಾರಿಗಳು ಗಮನಹರಿಸಿಲ್ಲ. ‘ಜಿಲ್ಲಾಧಿಕಾರಿಗಳ ಕಡೆ ಹಳ್ಳಿಯ ಕಡೆ’ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ಗ್ರಾಮಸ್ಥರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.