ADVERTISEMENT

ಅಕ್ರಮ ತಡೆಯಲು ವಿಫಲ: 7 ಅಧಿಕಾರಿಗಳ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 10:14 IST
Last Updated 23 ಜುಲೈ 2017, 10:14 IST

ಮಂಡ್ಯ: ಶ್ರೀರಂಗಪಟ್ಟಣ ತಾಲ್ಲೂಕಿನ ಅರಣ್ಯ ಭೂಮಿ ಒತ್ತುವರಿ ಮಾಡಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ಸೇರಿ ಏಳು ಅಧಿಕಾರಿಗಳ ವಿರುದ್ಧ ಆರ್‌ಟಿಐ ಕಾರ್ಯಕರ್ತ ಎಂ.ಡಿ.ಕೇಶವಮೂರ್ತಿ ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ದೂರು ನೀಡಿದ್ದಾರೆ.

ಜಿಲ್ಲಾಧಿಕಾರಿ ಎಸ್‌.ಜಿಯಾವುಲ್ಲಾ, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಶರತ್‌, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಕೆ.ಎಂ. ನಾಗಭೂಷಣ್‌, ಉಪವಿಭಾಗಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ, ತಹಶೀ ಲ್ದಾರ್‌ ಕೃಷ್ಣ, ಸೆಸ್ಕ್‌ ಸಹಾಯಕ ಎಂಜಿನಿಯರ್‌, ಆರ್‌ಎಫ್‌ಒ ವಿರುದ್ಧ ಗುರುವಾರ ದೂರು ದಾಖಲಾಗಿದೆ.

ಅಧಿಕಾರಿಗಳು ಗಣಿ ಮಾಲೀಕರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಅರಣ್ಯ ಮಾತ್ರವಲ್ಲದೆ ಗೋಮಾಳ, ಸ್ಮಶಾನ ವನ್ನೂ ಒತ್ತುವರಿ ಮಾಡಿ ಕೊಳ್ಳಲಾಗಿದೆ. ನೂರಾರು ಗಣಿಗಳ ಪರವಾನಗಿ ಅವಧಿ ಮುಗಿದಿದ್ದರೂ ಅಕ್ರಮವಾಗಿ ಗಣಿ ನಡೆಸುತ್ತಿದ್ದಾರೆ ಎಂದು ಹಗಲು ವೇಳೆಯಲ್ಲಿ ಕಲ್ಲು ಸ್ಫೋಟಿಸುತ್ತಿರುವ ಕಾರಣ ಜನರು ಭಯದ ನಡುವೆ ವಾಸ ಮಾಡುತ್ತಿದ್ದಾರೆ.

ADVERTISEMENT

ಅಲ್ಲದೆ ಸರ್ಕಾರಕ್ಕೆ ಸಲ್ಲಬೇಕಾದ ರಾಜಧನ ಪಾವತಿ ಮಾಡದೆ ಮೋಸ ಮಾಡುತ್ತಿದ್ದಾರೆ. ರಾಜಾರೋಷವಾಗಿ ಇಷ್ಟೆಲ್ಲ ನಡೆಯುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಗಣಿ ಮಾಲೀಕರೊಂದಿಗೆ ಶಾಮೀಲಾಗಿದ್ದಾರೆ. ಹೀಗಾಗಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೆಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ಪಡೆಯಲು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ಭೂ ವಿಜ್ಞಾನಿಗಳಿಗೆ ಕರೆ ಮಾಡಿದಾಗ ಅವರು ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.