ADVERTISEMENT

ಅಲ್ಲಾಪಟ್ಟಣದಲ್ಲಿ ನೀರಿಗೆ ಹಾಹಾಕಾರ!

ಬಿಂದಿಗೆ ನೀರಿಗೂ ಮೈಲು ದೂರ ಹೋಗಬೇಕಾದ ಪರಿಸ್ಥಿತಿ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 7:56 IST
Last Updated 9 ಮಾರ್ಚ್ 2017, 7:56 IST
ಶ್ರೀರಂಗಪಟ್ಟಣ: ತಾಲ್ಲೂಕಿನ ಅಲ್ಲಾಪಟ್ಟಣ ಗ್ರಾಮದಲ್ಲಿ ಒಂದು ವಾರದಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಬಿಂದಿಗೆ ನೀರಿಗೂ ಮೈಲು ದೂರ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಗ್ರಾಮದ ಜನರು ಕೃಷಿ ಪಂಪ್‌ಸೆಟ್‌ಗಳನ್ನು ಹುಡುಕಿ ಅಲ್ಲಿಂದ ನೀರು ಹೊತ್ತು ತರುತ್ತಿದ್ದಾರೆ. ಪುರುಷರು ಬೈಕ್‌, ಬೈಸಿಕಲ್‌ಗಳಿಗೆ ಬಿಂದಿಗೆ ಕಟ್ಟಿಕೊಂಡು ನೀರು ತರುವ ದೃಶ್ಯ ಇಲ್ಲಿ ಸಾಮಾನ್ಯವಾಗಿದೆ. 

ಮಹಿಳೆಯರು ತಲೆ ಮೇಲೆ ಮತ್ತು ಕಂಕುಳಲ್ಲಿ ನೀರು ತುಂಬಿದ ಬಿಂದಿಗೆ ಹೊತ್ತು ತರುತ್ತಿದ್ದಾರೆ. ಕರೆಂಟ್‌ ಇಲ್ಲದಿದ್ದರೆ ಅದು ಬರುವವರೆಗೂ ಮಹಿಳೆಯರು, ಮಕ್ಕಳು ಜಮೀನುಗಳ ಬಳಿ ಕಾದು ಕುಳಿತು ನೀರು ತುಂಬಿಕೊಂಡು 
ತರಬೇಕು.
 
ಗ್ರಾಮದಲ್ಲಿ ದನ, ಕರುಗಳಿಗೆ ಕುಡಿಸುವುದಕ್ಕೂ ನೀರಿಲ್ಲದ ಸ್ಥಿತಿ ಬಂದಿದೆ. ಪಕ್ಕದ ಸಿಡಿಎಸ್‌ ನಾಲೆಯಲ್ಲಿ ನೀರು ನಿಂತು 5 ತಿಂಗಳು ಕಳೆದಿದೆ. ಊರಿನ ಹೊರಗೆ ಇರುವ ಪುಟ್ಟ ಕಟ್ಟೆಯಲ್ಲಿನ ಮಲಿನ ನೀರನ್ನೇ ರಾಸುಗಳಿಗೆ ಕುಡಿಸುವ ಅನಿವಾರ್ಯ ಸ್ಥಿತಿ ಬಂದೊದಗಿದೆ. ಶೌಚ ಕಾರ್ಯಕ್ಕೂ ಅದೇ ನೀರು ಬಳಸಲಾಗುತ್ತಿದೆ. ‘ಕಾಲುವೆ ಬಳಿ ಒಂದು ಕೊಳವೆ ಬಾವಿ ಇದ್ದರೂ, ಅದರಿಂದ ಅಗತ್ಯ ಇರುವಷ್ಟು ನೀರು ಸಿಗುತ್ತಿಲ್ಲ. ಉಳಿದ ಎರಡು ನಿಷ್ಪ್ರಯೋಜಕವಾಗಿವೆ. ಹಾಗಾಗಿ ಸ್ನಾನ, ಬಟ್ಟೆ ಮತ್ತು ಪಾತ್ರೆ ತೊಳೆಯಲು ಕಷ್ಟವಾಗಿದೆ’ ಎನ್ನುತ್ತಾರೆ ಗ್ರಾಮದ ಲಕ್ಷ್ಮಿ.
 
‘ಅಲ್ಲಾಪಟ್ಟಣ ಗ್ರಾಮದಲ್ಲಿ 8 ದಿನಗಳಿಂದ ಕುಡಿಯುವ ನೀರಿಗೆ ತೊಂದರೆಯಾಗಿದೆ. ಎಲ್ಲ ನಲ್ಲಿಗಳು ಬಂದ್‌ ಆಗಿವೆ. ಮುಂಡುಗದೊರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿಗೆ ಸಮಸ್ಯೆ ಕುರಿತು ಹೇಳಿದ್ದರೂ ಗಮನ ಹರಿಸುತ್ತಿಲ್ಲ. ಗ್ರಾಮ ಪಂಚಾಯಿತಿ ಸದಸ್ಯರು ಕೂಡ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸತೀಶ್‌ ಇತರರು ಅಸಮಾಧಾನ ವ್ಯಕ್ತಪಡಿಸಿದರು.
 
‘ಶಾಸಕ ರಮೇಶ ಬಂಡಿಸಿದ್ದೇಗೌಡ ಅವರನ್ನು ಹುಡುಕಿಕೊಂಡು ಹೋಗಿ ಕುಡಿಯುವ ನೀರಿನ ಸಮಸ್ಯೆಯನ್ನು ಅವರ ಗಮನಕ್ಕೆ ತಂದಿದ್ದೇವೆ. ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡಿಸುವುದಾಗಿ ಅವರು ಭರವಸೆ ನೀಡಿದ್ದರು. 4 ದಿನ ಕಳೆದರೂ  ಯಾವುದೇ ಕ್ರಮ ಕೇಗೊಂಡಿಲ್ಲ. ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ಇರುವ ಕೊಳವೆಬಾವಿಗಳನ್ನು ಮತ್ತಷ್ಟು ಆಳಕ್ಕೆ ಕೊರೆಯಿಸಿದರೆ ನೀರು ಸಿಗುತ್ತದೆ.
 
ಆದರೆ, ಇತ್ತ ಗಮನವನ್ನೇ ಹರಿಸುತ್ತಿಲ್ಲ. ಇನ್ನೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ತಾಲ್ಲೂಕು ಪಂಚಾಯಿತಿ ಎದುರು ಖಾಲಿ ಬಿಂದಿಗೆ ಸಹಿತ ಧರಣಿ ಕೂರುತ್ತೇವೆ’ ಎಂದು ಬಾಬು ಜಗಜೀವನರಾಂ ಯುವಕ ಸಂಘಗಳ ಒಕ್ಕೂಟದ ತಾಲ್ಲೂಕು ಕಾರ್ಯದರ್ಶಿ ಕುಮಾರ್‌, ರಾಜು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.