ADVERTISEMENT

ಅಶ್ಲೀಲ ಪದ ಬಳಕೆ: ಅಧಿಕಾರಿ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2017, 6:19 IST
Last Updated 3 ಮಾರ್ಚ್ 2017, 6:19 IST

ಶ್ರೀರಂಗಪಟ್ಟಣ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಎ. ಸೀತಾರಾಂ ಎಂಬವರು ಕೆ.ಶೆಟ್ಟಹಳ್ಳಿ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಸಿ.ಮರಿಯಪ್ಪ ಅವರನ್ನು ಏಕವಚನದಲ್ಲಿ ನಿಂದಿಸಿ ಅಶ್ಲೀಲ ಪದಗಳಿಂದ ಬೈಯ್ದರು ಎಂಬ ಹಿನ್ನೆಲೆಯಲ್ಲಿ ಮರಿಯಪ್ಪ ಮತ್ತು ಅವರ ಬೆಂಬಲಿಗರು ಅಧಿಕಾರಿಗೆ ತರಾಟೆಗೆ ತೆಗೆದುಕೊಂಡ ಪ್ರಸಂಗ ಗುರುವಾರ ಸಂಜೆ ನಡೆಯಿತು.

ಮರಿಯಪ್ಪ ಮತ್ತು ಸೀತಾರಾಂ ನಡುವೆ ವಾಗ್ವಾದ ನಡೆಯಿತು. ಇಬ್ಬರೂ ಏಕವಚನದಲ್ಲಿ ನಿಂದಿಸಿಕೊಂಡರು. ಕೈ ಕೈ ಮಿಲಾಯಿಸುವ ಹಂತಕ್ಕೆ ಪರಿಸ್ಥಿತಿ ಹೋಗಿತ್ತು. ಮರಿಯಪ್ಪ ಬೆಂಬಲಿಗರು ಕೂಡ ಸೀತಾರಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ನೀನ್ಯಾವನೊ’ ಎಂದು ಸೀತಾರಾಮು ಅವರು ಮರಿಯಪ್ಪ ಅವರನ್ನು ಪ್ರಶ್ನಿಸಿದ್ದು, ರೈತರನ್ನು ಮತ್ತಷ್ಟು ಕೆರಳಿಸಿತು. ವಿವಿಧ ಗ್ರಾಮಗಳ ರೈತರು ಸೀತಾರಾಂ ವಿರುದ್ಧ ಸಾಲು ಸಾಲು ಘೋಷಣೆ ಕೂಗಿದರು.

ಮರಿಯಪ್ಪ ಮತ್ತು ಬೆಂಬಲಿಗರು ಶಾಸಕ ರಮೇಶ ಬಂಡಿಸಿದ್ದೇಗೌಡ ಅವರನ್ನು ಫೋನ್‌ ಮೂಲಕ ಸಂಪರ್ಕಿಸಿ ಸೀತಾರಾಂ ನಡವಳಿಕೆ ಬಗ್ಗೆ ತಿಳಿಸಿದರು. ಸೀತಾರಾಂ ರೈತರು ಮತ್ತು ಜನಪ್ರತಿನಿಧಿ ಗಳ ಜತೆ ಅನುಚಿತವಾಗಿ ವರ್ತಿಸುತ್ತಿದ್ದು, ಅವರನ್ನು ತಕ್ಷಣ ವರ್ಗಾವಣೆ ಮಾಡಿಸು ವಂತೆ ಒತ್ತಾಯಿಸಿದರು.

ಕೃಷಿ ಇಲಾಖೆ ಕಚೇರಿ ಎದುರು ಸುಮಾರು ಅರ್ಧ ತಾಸು ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದರು.

ನೀಲನಕೊಪ್ಪಲು ಗ್ರಾಮದ ರೈತ ಸತೀಶ್‌ ಎಂಬವರು ಸರ್ಕಾರದ ಸಹಾಯ ಧನ ಯೋಜನೆಯಡಿ ಕೃಷಿ ಪಂಪ್‌ಸೆಟ್‌ಗೆ ಅಗತ್ಯವಾದ ಪೈಪ್‌ ಪಡೆಯಲು ಕೃಷಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು.

ಅದಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಸಿ.ಮರಿಯಪ್ಪ ಅವರಿಂದಲೂ ಶಿಫಾರಸು ಮಾಡಿಸಿದ್ದರು. ಆದರೆ, ಈ ಶಿಫಾರಸ್ಸಿಗೆಬಿ.ಎ. ಸೀತಾರಾಂ ಮನ್ನಣೆ ನೀಡದೆ ತಿರಸ್ಕರಿಸಿದ್ದರು ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.