ADVERTISEMENT

ಉಳುವ ಯೋಗಿ ಆಳುವ ಯೋಗಿಯಾಗಲಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2017, 5:31 IST
Last Updated 23 ಡಿಸೆಂಬರ್ 2017, 5:31 IST

ಮಂಡ್ಯ: ‘ಉಳುವ ಯೋಗಿ ಆಳುವ ಯೋಗಿಯಾಗಿ ಬದಲಾಗಬೇಕು’ ಎಂದು ಸಾಹಿತಿ ಮಾ.ರಾಮಕೃಷ್ಣ ಹೇಳಿದರು. ನಗರದ ಗಾಂಧಿಭವನದಲ್ಲಿ ಒಕ್ಕಲಿಗರ ಸೇವಾ ಟ್ರಸ್ಟ್‌ ವತಿಯಿಂದ ಶುಕ್ರವಾರ ನಡೆದ ನಾಡಪ್ರಭು ಕೆಂಪೇಗೌಡರ ಉದ್ಯಾನವನ ಉದ್ಘಾಟನೆ ಹಾಗೂ ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಕ್ಕಳಿಗೆ ಶಿಕ್ಷಣ ಕೊಡಿಸಲು ಆಸ್ತಿ ಮಾರಿದರೆ ತಪ್ಪೇನಿಲ್ಲ. ಬದಲಿಗೆ ಮೋಜು ಮಸ್ತಿಗೆ ಆಸ್ತಿ ಮಾರಿಕೊಳ್ಳಬಾರದು. ಕುವೆಂಪು ಅವರು ಹೇಳಿರುವಂತೆ ಉಳುವ ಯೋಗಿಯು ಆಳುವ ಯೋಗಿಯಾಗಬೇಕು. ಒಕ್ಕಲುತನ ಮಾಡುವವರೆಲ್ಲರೂ ಒಕ್ಕಲಿಗರೇ ಆಗಿದ್ದಾರೆ. ದುಡಿಯುವವರು ಗೌರವ ಸಂಪಾದಿಸಬೇಕು. ಒಕ್ಕಲಿಗರ ಸಂಖ್ಯೆ ಎಂದಿಗೂ ಕಡಿಮೆ ಆಗುವುದಿಲ್ಲ. ಒಕ್ಕಲಿಗರು ಕೀಳರಿಮೆ ತ್ಯಜಿಸಬೇಕು. ಒಕ್ಕಲಿಗರು ಇಡೀ ವಿಶ್ವಕ್ಕೆ ಅವಶ್ಯಕ. ವ್ಯವಸಾಯ ಮಾಡುವವರೆಲ್ಲರೂ ಒಕ್ಕಲಿಗರಾಗಿದ್ದು, ಇವರು ವಿಶ್ವದ ಆಸ್ತಿಯಾಗಿದ್ದಾರೆ’ ಎಂದು ಹೇಳಿದರು.

‘ಇಂದು ಜಾತಿ ವ್ಯವಸ್ಥೆಗೆ ಕಟ್ಟುಬಿದ್ದು ಹೆಸರಿನಲ್ಲಿಯೇ ಜಾತಿ ಸೇರಿಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಆದರೆ ಕೆಲವು ಜಾತಿಯಲ್ಲಿ ತಮ್ಮ ಜಾತಿ ಹೆಸರನ್ನು ಹೇಳಿಕೊಳ್ಳಲು ಹಿಂಜರಿಕೆ ಪಡುತ್ತಿದ್ದಾರೆ. ಎಲ್ಲಾ ಸಮುದಾಯಕ್ಕೂ ಸಮಾನ ಬೆಲೆ ಸಿಗಬೇಕು. ನಾಡಪ್ರಭು ಕೆಂಪೇಗೌಡ, ರಾಷ್ಟ್ರಕವಿ ಕುವೆಂಪು ಹಾಗೂ ಬಾಲಗಂಗಾಧರನಾಥ ಸ್ವಾಮೀಜಿ ಅವರು ಒಕ್ಕಲಿಗ ಸಮುದಾಯದಲ್ಲಿ ಪ್ರಭಾವಿಗಳಾಗಿದ್ದರು. ಒಕ್ಕಲಿಗರ ಸಮುದಾಯದ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗುವ ಅವಶ್ಯಕತೆ ಇದೆ’ ಎಂದು ಹೇಳಿದರು.

ADVERTISEMENT

ಬೆಂಗಳೂರು ಸಿಟಿ ಸಿವಿಲ್ ಕೋರ್ಟ್‌ ನ್ಯಾಯಾಧೀಶ ಕೆ.ಪಿ.ರಾಮಲಿಂಗಯ್ಯ ಮಾತನಾಡಿ ‘ಯಾವುದೇ ಕೆಲಸ ಮಾಡಿದರೂ ಅದನ್ನು ಶ್ರದ್ಧೆಯಿಂದ ಮಾಡಬೇಕು. ಅದು ಯಶಸ್ಸನ್ನು ತಂದು ಕೊಡುತ್ತದೆ. ಸನ್ಮಾನಿತರನ್ನು ಗುರುತಿಸುವುದರ ಜೊತೆಗೆ ಅವರ ಪೋಷಕರನ್ನೂ ಸನ್ಮಾನಿಸುವ ಕೆಲಸ ಆಗಬೇಕು. ಅದಕ್ಕೆ ಅಗತ್ಯ ಸಹಕಾರ ನೀಡಲಾಗುವುದು’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸೇವೆ ಸಲ್ಲಿಸಿದ ಒಕ್ಕಲಿಗ ಸಮುದಾಯದ ಶಿಕ್ಷಕರು, ಅಧಿಕಾರಿಗಳು, ಸಮಾಜ ಸೇವಕರು ಹಾಗೂ ಸಂಘ ಸಂಸ್ಥೆಗಳ ಮುಖಂಡರುಗಳಿಗೆ ಸನ್ಮಾನಿಸಲಾಯತು. ಪುರುಷೋತ್ತಮಾನಂದ ನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಸದಸ್ಯೆ ಸುನಿತಾ ರವಿ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಚಾಮಲಾಪುರ ರವಿಕುಮಾರ, ನಾಡಪ್ರಭು ಕೆಂಪೇಗೌಡರ ಪ್ರತಿಷ್ಠಾನ ಸಮಿತಿ ಅಧ್ಯಕ್ಷ ಎಸ್‌.ನಾರಾಯಣ್‌, ಒಕ್ಕಲಿಗರ ಸೇವಾ ಟ್ರಸ್ಟ್‌ನ ಅಧ್ಯಕ್ಷ ನಾಗಣ್ಣ ಬಾಣಸವಾಡಿ, ಉಪಾಧ್ಯಕ್ಷ ಎನ್‌.ಕೆ.ಕುಮಾರ್‌, ಟ್ರಸ್ಟಿಗಳಾದ ಬಿ.ಎಂ.ಜಯರಾಂ, ಎಲ್‌.ಕೃಷ್ಣ, ಡಾ.ಟಿ.ಟಿ.ಅನುಸೂಯಾ ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.