ADVERTISEMENT

ಕಾಣೆಯಾದ ‘ಸಂಕ್ರಾಂತಿ’ಯ ಸಂಭ್ರಮ

ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ನೀರಿಲ್ಲ, ₹ 102 ಕೋಟಿ ನಷ್ಟವಾಗಿರುವುದಾಗಿ ಸರ್ಕಾರಕ್ಕೆ ವರದಿ

ಬಸವರಾಜ ಹವಾಲ್ದಾರ
Published 13 ಜನವರಿ 2017, 8:36 IST
Last Updated 13 ಜನವರಿ 2017, 8:36 IST
ಮಂಡ್ಯ: ಜಿಲ್ಲೆಯ ಜೀವನಾಡಿ ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ನೀರಿಲ್ಲ. ಹಬ್ಬದ ಆಚರಣೆಗೆ ನಾಲೆಗಳಿಗೆ ನೀರು ಹರಿಸಬೇಕು ಎಂಬ ರೈತರ ಕೂಗಿಗೂ ಸ್ಪಂದನೆ ಸಿಕ್ಕಿಲ್ಲ. ಹಾಗಾಗಿ ರೈತರ ಸುಗ್ಗಿಯ ಹಬ್ಬವಾದ ‘ಸಂಕ್ರಾಂತಿ’ಯಲ್ಲಿ ಸಂಭ್ರಮ ಕಾಣುತ್ತಿಲ್ಲ.
 
ಜಿಲ್ಲೆಯ ಏಳೂ ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಜಾನುವಾರುಗಳಿಗೆ ಮೇವಿನ ಕೊರತೆಯ ಆತಂಕ ಕಾಡುತ್ತಿದೆ. ಜತೆಗೆ ಈಗಾಗಲೇ ಜಿಲ್ಲೆಯ ಹಲವೆಡೆ ಕುಡಿಯುವ ನೀರಿನ ತೊಂದರೆಯೂ ಕಾಣಿಸಿಕೊಂಡಿದೆ.
 
ಕೆಆರ್‌ಎಸ್‌ ಅಣೆಕಟ್ಟೆಯಿಂದ ಮುಂಗಾರಿನಲ್ಲಿ ನೀರು ಹರಿಸಲಾಗಿತ್ತು. ಆಗಲೂ ಕಟ್ಟು ಪದ್ಧತಿಯಲ್ಲಿ ನೀರು ಹರಿಸಿದ್ದರಿಂದ ಕೆಲ ಭೂಮಿಗೆ ಸರಿಯಾಗಿ ನೀರು ಲಭಿಸಲಿಲ್ಲ. ನಾಲೆಯ ಕೊನೆ ಭಾಗದ ಮದ್ದೂರು ಹಾಗೂ ಮಳವಳ್ಳಿ ತಾಲ್ಲೂಕಿನ ಹಲವು ಗ್ರಾಮಗಳಿಗೆ ನೀರು ತಲುಪಲೇ ಇಲ್ಲ. 
 
ಆ ಭಾಗದಲ್ಲಿ ಬಿತ್ತನೆ ಮಾಡಿದ್ದ ರೈತರು ಬೆಳೆ ನಷ್ಟಕ್ಕೆ ಗುರಿಯಾಗಬೇಕಾಯಿತು. 
 
ಜಿಲ್ಲೆಯ ಕೆಲವು ಕಡೆಗಳಲ್ಲಿ ಭತ್ತ ಹಾಗೂ ರಾಗಿಯ ಒಕ್ಕಣೆ ನಡೆದಿದೆ. ಮಾರುಕಟ್ಟೆಯಲ್ಲಿ ಬೆಲೆಯೂ ಉತ್ತಮವಾಗಿದೆ. ಆದರೆ, ಜಿಲ್ಲೆಯಾದ್ಯಂತ ಹಲವೆಡೆ ಫಸಲು ಬಂದಿಲ್ಲ. ಹಾಗಾಗಿ ಬೆಲೆ ಇದ್ದರೂ ಫಸಲಿಲ್ಲದ ಸ್ಥಿತಿ ಹಲವರು ರೈತರದ್ದಾಗಿದೆ.
 
ಅಣೆಕಟ್ಟೆಯ ಸ್ಥಿತಿ: ಕೆಆರ್‌ಎಸ್‌ ಅಣೆಕಟ್ಟೆಯ ನೀರಿನ ಮಟ್ಟವು 79.42 ಅಡಿ ಇದೆ. 
 
ಕಳೆದ ವರ್ಷ ಇದೇ ದಿನ 104 ಅಡಿ ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ 24.5 ಅಡಿಯಷ್ಟು ನೀರು ಕಡಿಮೆ ಇದೆ. 
 
ಅಣೆಕಟ್ಟೆಯಲ್ಲಿ ಒಟ್ಟು 10.53 ಟಿಎಂಸಿ ಅಡಿಯಷ್ಟು ನೀರಿದ್ದು, ಡೆಡ್‌ ಸ್ಟೋರೇಜ್‌ ಹಾಗೂ ಬೇಸಿಗೆಗೆ ಪೂರೈಸಲು ಸಂಗ್ರಹಿಸಿರುವ ಕುಡಿಯುವ ನೀರಿಗೆ ಹೊರತು ಪಡಿಸಿದರೆ 2.14 ಟಿಎಂಸಿ ಅಡಿಯಷ್ಟು ನೀರಿದೆ. 
 
269 ಕ್ಯುಸೆಕ್‌ ಒಳಹರಿವಿದ್ದು, 254 ಕ್ಯುಸೆಕ್‌ ಹೊರಹರಿವಿದೆ. ಒಳ ಹರಿವಿನಲ್ಲಿ ತೀವ್ರ ಕುಸಿತವಾಗಿರುವುದರಿಂದ ಮಾರ್ಚ್‌ವರೆಗೂ ಕುಡಿಯುವ ನೀರು ಪೂರೈಸಲು ಈಗ ಲಭ್ಯ ಇರುವ ನೀರನ್ನು ಬಳಸಿಕೊಳ್ಳಲಾಗುತ್ತಿದೆ. 
 
ನೀರಿಗಾಗಿ ಹೋರಾಟ: ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ನಾಲೆಗಳಿಗೆ ನೀರು ಹರಿಸುವ ಮೂಲಕ ಜನರು ಹಾಗೂ ಜಾನುವಾರುಗಳ ಕುಡಿಯುವ ನೀರಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿ ರೈತ ಸಂಘ ಹೋರಾಟ ಮಾಡುತ್ತಿದೆ. 
 
ನಾಲ್ಕೈದು ದಿನಗಳ ಕಾಲ ನೀರು ಹರಿಸಿದರೆ ಜನರು ಹಾಗೂ ಜಾನುವಾರುಗಳಿಗೆ ಕೆಲ ದಿನಗಳ ಕಾಲ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗುತ್ತದೆ. ಜತೆಗೆ ಅಂತರ್ಜಲದಲ್ಲಿಯೂ ಸುಧಾರಣೆಯಾಗುತ್ತದೆ ಎನ್ನುವುದು ಅವರ ಆಗ್ರಹ.
 
ಬೆಳೆ ನಷ್ಟ: ಜಿಲ್ಲೆಯಲ್ಲಿ 2.05 ಲಕ್ಷ ಹೆಕ್ಟೇರ್‌ ಭೂಮಿ ಇದೆ. ಅದರಲ್ಲಿ 1.05 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ಭತ್ತ, ಕಬ್ಬು, ರಾಗಿ ಬೆಳೆ ಹಾಳಾಗಿದೆ. 
 ಕೃಷಿ ಇಲಾಖೆಯು ₹ 102 ಕೋಟಿ ನಷ್ಟವಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ. 
 
ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಹಲವಾರು ಸಂಘಟನೆಗಳು ಆಗ್ರಹಿಸಿವೆ. ಆದರೆ, ಸರ್ಕಾರದಿಂದ ಇನ್ನೂ ಯಾವುದೇ ಪರಿಹಾರ ಬಿಡುಗಡೆ ಆಗಿಲ್ಲ. ಅನಿವಾರ್ಯವಾಗಿ ಸಂಕ್ರಾಂತಿ ಆಚರಿಸಬೇಕಾಗಿದೆ. 
 
ಆದರೆ, ಸಂಭ್ರಮ ಎಲ್ಲೂ ಕಾಣುತ್ತಿಲ್ಲ.
 
**
ರೈತರಿಗೆ ಸುಗ್ಗಿ, ಸಂಭ್ರಮದ ಹಬ್ಬವಾಗಿಬೇಕಿದ್ದ ಸಂಕ್ರಾಂತಿಯು ಜಿಲ್ಲೆಗೆ ಈ ಬಾರಿ ಸಂಕಷ್ಟದ ಸಂಕ್ರಾಂತಿಯಾಗಿದೆ
–ಶಂಭೂನಹಳ್ಳಿ ಸುರೇಶ್‌
ಜಿಲ್ಲಾ ಘಟಕದ ಅಧ್ಯಕ್ಷ, ರೈತ ಸಂಘ, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.