ADVERTISEMENT

ಕಾಲೇಜು ಕಾಂಪೌಂಡ್‌ ಒಡೆದ ಜಿಲ್ಲಾಡಳಿತ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2017, 7:42 IST
Last Updated 8 ಸೆಪ್ಟೆಂಬರ್ 2017, 7:42 IST
ಮಂಡ್ಯದ ಸರ್ಕಾರಿ ಮಹಾವಿದ್ಯಾಲಯದ ಕಂಪೌಂಡ್‌ ಒಡೆದಿರುವುದು
ಮಂಡ್ಯದ ಸರ್ಕಾರಿ ಮಹಾವಿದ್ಯಾಲಯದ ಕಂಪೌಂಡ್‌ ಒಡೆದಿರುವುದು   

ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾಹನ ತೆರಳುವ ರಸ್ತೆ ನಿರ್ಮಿಸಲು ನಗರದ ಸರ್ಕಾರಿ ಮಹಾವಿದ್ಯಾಲಯದ ಕಾಂಪೌಂಡ್‌ ಒಡೆಯಲಾಗಿದೆ. ಮುಖ್ಯಮಂತ್ರಿ ಶುಕ್ರವಾರ ಅಟಲ್‌ ನಗರ ನವೀಕರಣ ಮತ್ತು ಪುನರುಜ್ಜೀವನ (ಅಮೃತ್‌) ಯೋಜನೆ ಕಾಮಗಾರಿಗಳಿಗೆ ಚಾಲನೆ ನೀಡಲು ನಗರಕ್ಕೆ ಬರುತ್ತಿದ್ದು, ಸರ್ಕಾರಿ ಮಹಾವಿದ್ಯಾಲಯದ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ.

ವೇದಿಕೆವರೆಗೆ ಮುಖ್ಯಮಂತ್ರಿ ಕಾರು ತೆರಳುವ ರಸ್ತೆ ನಿರ್ಮಿಸಲು ಜಿಲ್ಲಾಡಳಿತ ಕಾಂಪೌಂಡ್‌ ಗೇಟ್‌ನ ಎರಡೂ ಭಾಗವನ್ನು ಒಡೆದಿದೆ. ‘ಸರ್ಕಾರಿ ಅನುದಾನದಲ್ಲಿ ಕಾಂಪೌಂಡ್‌ ನಿರ್ಮಾಣ ಮಾಡಲಾಗಿದೆ. ನಾಲ್ಕೈದು ಮೀಟರ್‌ ನಡೆದುಕೊಂಡು ಹೋದರೆ ವೇದಿಕೆ ಸಿಗುತ್ತದೆ. ಆದರೆ, ಮುಖ್ಯಮಂತ್ರಿ ಕಾರು ತೆರಳುವುದಕ್ಕಾಗಿ ಲಕ್ಷಾಂತರ ರೂಪಾಯಿ ಹಣ ವೆಚ್ಚಮಾಡಿ ನಿರ್ಮಾಣ ಮಾಡಿರುವ ಕಂಪೌಂಡ್‌ ಒಡೆದಿರುವುದು ಸರಿಯಲ್ಲ’ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಎಚ್‌.ಆರ್‌.ಅರವಿಂದ್‌ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ರೈತರಿಂದ ಕಪ್ಪು ಬಟ್ಟೆ ಪ್ರದರ್ಶನ: ‘ಕೆಆರ್‌ಎಸ್‌ ನೀರಿನ ವಿಚಾರದಲ್ಲಿ ಮುಖ್ಯಮಂತ್ರಿ ಜಿಲ್ಲೆಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದಾಗ ಅವರ ವಿರುದ್ಧ ಕಪ್ಪು ಬಟ್ಟೆ ಪ್ರದರ್ಶನ ಮಾಡಲಾಗುವುದು. ಹೀಗಾಗಿ, ಮುಖ್ಯಮಂತ್ರಿಗೆ ಹೆಚ್ಚುವರಿ ಭದ್ರತೆ ನೀಡುವ ದೃಷ್ಟಿಯಿಂದ ಕಾಂಪೌಂಡ್‌ ಒಡೆದಿದ್ದಾರೆ. ಇದು ಖಂಡನೀಯ’ ಎಂದು ರೈತಸಂಘ (ಮೂಲ ಸಂಘಟನೆ) ಮುಖಂಡ ಕೆ.ಎಸ್‌.ಸುಧೀರ್‌ ಕುಮಾರ್‌ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.