ADVERTISEMENT

ಕಿಕ್ಕೇರಿ: 220 ಸದಸ್ಯರ ‘ಸಮಾಗಮ’

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2015, 20:33 IST
Last Updated 26 ಏಪ್ರಿಲ್ 2015, 20:33 IST

ಕಿಕ್ಕೇರಿ (ಮಂಡ್ಯ ಜಿಲ್ಲೆ): ಒಂದು ಅವಿಭಕ್ತ ಕುಟುಂಬದ ಸುಖ, ಸಂತೋಷ ಎಂಥದ್ದು ಎಂಬುದಕ್ಕೆ ಹೋಬಳಿಯ  ಅಯ್ಯನಕೊಪ್ಪಲುದಲ್ಲಿ ಭಾನುವಾರ ನಡೆದ ‘ಸಮಾಗಮ’ ಕಾರ್ಯಕ್ರಮ ಸಾಕ್ಷಿಯಾಯಿತು.

ಅಯ್ಯನಕೊಪ್ಪಲು ಗ್ರಾಮದಲ್ಲಿ ನಂಜಮ್ಮ ತಿಮ್ಮಪ್ಪ ಜೋಯಿಸ್ ಮಕ್ಕಳು ನಿರ್ಮಿಸಿಕೊಂಡಿರುವ ಪಟ್ಟಾಭಿರಾಮ ಪ್ರತಿಷ್ಠಾನದ ವತಿಯಿಂದ ನಡೆದ ಈ ವಿಭಿನ್ನ ಕಾರ್ಯಕ್ರಮದಲ್ಲಿ ದೇಶದ ವಿವಿಧೆಡೆ ಹಾಗೂ ವಿದೇಶದಲ್ಲಿರುವ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳೂ ಸೇರಿದ್ದರು. ಇಡೀ ದಿನ ಒಂದೆಡೆ ಸೇರಿ ಹಿರಿಯ– ಕಿರಿಯ ಜೀವಗಳೆಲ್ಲ ವೈವಿಧ್ಯಮಯ ಕಾರ್ಯಕ್ರಮ ನಡೆಸಿ ಖುಷಿಪಟ್ಟರು.

೨೨೦ಕ್ಕೂ ಹೆಚ್ಚು ಸದಸ್ಯರಿರುವ ತಿಮ್ಮಪ್ಪ ಜೋಯಿಸ್ ಕುಟುಂಬ ಜ್ಯೋತಿಷ ವಿದ್ಯೆಯಲ್ಲಿ ಪಾಂಡಿತ್ಯ ಹೊಂದಿದೆ. ಅಲ್ಲದೆ, ವೈದ್ಯರು, ವಕೀಲರು, ಸಾಫ್ಟ್‌ವೇರ್‌ ಎಂಜಿನಿಯರುಗಳೂ ಇದ್ದಾರೆ.

ಸಮಾಗಮದ ನೆನಪಿಗಾಗಿ ಶತಮಾನದಷ್ಟು ಹಳೆಯದಾದ ಶಿಥಿಲಾವಸ್ಥೆಯಲ್ಲಿದ್ದ ಅಶ್ವತ್ಥಕಟ್ಟೆಯನ್ನು ಜೀರ್ಣೋದ್ಧಾರ ಮಾಡಲಾಯಿತು. ಎರಡು ದಿನಗಳ ಕಾಲ ಅಶ್ವತ್ಥಹೋಮ, ಗಣಹೋಮ, ಲಕ್ಷ್ಮೀ ಹೋಮದಂತಹ ಪೂಜಾ ಕೈಂಕರ್ಯಗಳನ್ನೂ ಮಾಡಿದರು. ಇದೇ ಪರಿವಾರದ ಕೆಲ ಸದಸ್ಯರು ಸಂಗೀತ ಕಲಾವಿದರೂ ಆಗಿದ್ದು, ಕೀರ್ತನೆಗಳನ್ನು ಹಾಡಿದರು. ವೇದಬ್ರಹ್ಮಶ್ರೀ ಲಕ್ಷ್ಮೀನರಸಿಂಹಸ್ವಾಮಿ ಅವರು ನವಗ್ರಹಗಳೊಂದಿಗೆ ವೈಜ್ಞಾನಿಕ ಚಿಂತನೆ ಕುರಿತು ಉಪನ್ಯಾಸ ನೀಡಿದರು.

ನಾಗಮಂಗಲದ ಭಾಸ್ಕರ್ ಭಟ್ ಸ್ವದೇಶಿ ಸಂಸ್ಕೃತಿ, ಪುಸ್ತಕ, ವಸ್ತುಗಳ ಪರಿಚಯ ಮಾಡಿಕೊಟ್ಟರು.  ಹಸಿರು ತೋಟದಲ್ಲಿ ನಡೆದ ಈ ವಿಶಿಷ್ಟ ಕಾರ್ಯಕ್ರಮದ ಅಂಗವಾಗಿ ಮರಗಿಡಗಳಿಗೆ ಲೇಖಕರ, ವಿದ್ವಾಂಸರ ಹೆಸರಿಟ್ಟು, ಉತ್ತಮ ಸಂದೇಶ, ನಾಣ್ಣುಡಿಯನ್ನು ಬರೆದ ನಾಮಫಲಕ ಅಳವಡಿಸಲಾಯಿತು. ಇದು ದೇಸಿ ಸಂಸ್ಕೃತಿಯನ್ನು  ವೈಭವೀಕರಿಸುವಂತಿತ್ತು. ‘ಒಂದು ಮರ ನೂರಾರು ಟಿಸಿಲು’ ಶೀರ್ಷಿಕೆಯಲ್ಲಿ ತಯಾರಿಸಿದ ಕುಟುಂಬದ ವಂಶವೃಕ್ಷದ ಚಿತ್ರಪಟ ಆಕರ್ಷಕವಾಗಿತ್ತು.

ಮಹಿಳೆಯರು ಲಲಿತಸಹಸ್ರನಾಮ ಪಠಣೆ ಮಾಡಿದರೆ, ಪುಟಾಣಿಗಳು ದೇವರ ನಾಮ ಹಾಡಿದರು. ಹಸಿರ ಸಿರಿಯ ಮಧ್ಯೆ ಎಲ್ಲರೂ ಊಟ ಸವಿದರು. ಹೂ ವಿಳ್ಳೆ, ಮಡಿಲು ತುಂಬುವ ಕಾರ್ಯಕ್ರಮವಂತೂ ಇಡೀ ದಿನ ನಡೆಯಿತು. ಅನಿಲ್‌ಶಾಸ್ತ್ರೀ ಪೂಜಾ ವಿಧಿ ವಿಧಾನ ನಡೆಸಿಕೊಟ್ಟರು. ಮಾದಾಪುರ ಸುಬ್ಬಣ್ಣ ಪರಿಸರ ಸಂರಕ್ಷಣೆ, ಅನ್ನದ  ಮಹಿಮೆ ಕುರಿತು ಮಾತನಾಡಿದರು. ಸತ್ಯ, ಸೋಮು, ನಾಗೇಂದ್ರ, ಸೀತು, ಮಾದಾಪುರ ಸುಬ್ಬಣ್ಣ, ರಮೇಶ್ ಮತ್ತಿತರರು ಉಸ್ತುವಾರಿ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.