ADVERTISEMENT

ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2017, 7:04 IST
Last Updated 26 ಜುಲೈ 2017, 7:04 IST

ಭಾರತೀನಗರ: ಸಮೀಪದ ಅರೆ ಕಲ್ಲುದೊಡ್ಡಿ ಗ್ರಾಮಕ್ಕೆ ಹೊಂದಿ ಕೊಂಡಂತಿರುವ ಸುಮಾರು 61 ಎಕರೆ ವಿಸ್ತಾರವಾದ ಕೆರೆಗೆ ₹ 50 ಲಕ್ಷ ವೆಚ್ಚದಲ್ಲಿ ಹೂಳೆತ್ತುವ ಕಾರ್ಯಕ್ರಮಕ್ಕೆ ಶಾಸಕ ಡಿ.ಸಿ.ತಮ್ಮಣ್ಣ  ಈಚೆಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘ಕೆರೆ ಅಭಿವೃದ್ಧಿಯಾಗಿ ನೀರಿದ್ದರೆ  ಪ್ರಾಣಿ-ಪಕ್ಷಿಗಳಿಗೆ, ಜಾನುವಾರುಗಳಿಗೆ ಅನುಕೂಲವಾಗುತ್ತದೆ. ಸುತ್ತ-ಮುತ್ತಲ ಪ್ರದೇಶದ ಜಮೀನುಗಳಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ’ ಎಂದರು. 

ಗ್ರಾಮದಲ್ಲಿರುವ ಕೆರೆ ನಾಗರಿಕತೆ, ಸಂಸ್ಕೃತಿ ಮತ್ತು ಅಭಿವೃದ್ಧಿಯ ಸಂಕೇತ. ಇಂತಹ ಅಮೂಲ್ಯ ಕೆರೆಗಳು ಗ್ರಾಮಾಂ ತರ ಪ್ರದೇಶಗಳಲ್ಲಿ ನಿರ್ಲಕ್ಷ್ಯಕ್ಕೊಳಗಾಗಿವೆ ಎಂದರು.
ಕೆರೆಯಲ್ಲಿ ಸಂಗ್ರಹವಾಗುವ ಹೂಳು ಫಲವತ್ತಾಗಿದ್ದು ಅದರಿಂದ ಉತ್ತಮ ಬೆಳೆ ತೆಗೆಯಬಹುದು.

ADVERTISEMENT

ಕೃಷಿಗೆ ಯೋಗ್ಯ ವಾಗುವ ಹೂಳನ್ನು ರೈತರು ಜಮೀನಿಗೆ ಸಾಗಿಸಬಹುದು ಎಂದು ವಿವರಿಸಿದರು. ಕೆರೆಯಲ್ಲಿ ಎತ್ತಲಾದ ಹೂಳನ್ನು ರೈತರಿಗೆ ಉಚಿತವಾಗಿ ನೀಡಬೇಕೆಂದು ಗುತ್ತಿಗೆದಾರರಿಗೆ ತಾಕೀತು ಮಾಡಿದರು.  

ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದ ಕಾರಣ ಕಾವೇರಿ ಕಣಿವೆ ಪ್ರದೇಶದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿವೆ. ಪ್ರಸ್ತುತ ಕೆರೆಗಳ ಹೂಳೆತ್ತಿಸಿದರೆ ಮುಂದಿನ ದಿನಗಳಲ್ಲಿ ಉಪಯುಕ್ತವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಜಿ.ಪಂ. ಸದಸ್ಯ ಬೋರಯ್ಯ, ಮುಖಂಡರಾದ ಎನ್.ಆರ್.ಪ್ರಕಾಶ್, ಕೆ.ಟಿ.ಶೇಖರ್, ಅರೆಕಲ್ಲುದೊಡ್ಡಿ ಗ್ರಾಮದ ಚಿಕ್ಕಣ್ಣ, ನೀಲಕಂಠನಹಳ್ಳಿ ಪ್ರಕಾಶ್, ಪುಟ್ಟರಾಜು, ಪುಟ್ಟಸ್ವಾಮಿ, ನಾಡಗೌಡ ಮರೀಗೌಡ, ಗ್ರಾ.ಪಂ. ಅಧ್ಯಕ್ಷೆ ತಾಯಮ್ಮ ಕೆಂಚೇಗೌಡ, ಸದಸ್ಯ ತಿಬ್ಬೇಗೌಡ, ಹಳ್ಳಿಕೆರೆ ಶಿವು, ಗುತ್ತಿಗೆದಾರ ಯೋಗೇಶ ಮಂಡ್ಯ, ಜಿ.ಪಂ ಎಇಇ. ಮರೀಗೌಡ, ಜೆಇ. ಮಹದೇವು ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.