ADVERTISEMENT

ತಾಲ್ಲೂಕು ಆಸ್ಪತ್ರೆಗಳ ‘ಸರ್ಜರಿ’ಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಮೇ 2017, 6:15 IST
Last Updated 28 ಮೇ 2017, 6:15 IST

ಮಂಡ್ಯ: ಜಿಲ್ಲೆಯ ಹಲವು ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳು ಮೂಲಸೌಕರ್ಯ ಇಲ್ಲದೆ ನರಳುತ್ತಿವೆ. ಅವುಗಳಿಗೆ ಶೀಘ್ರ ಸೌಲಭ್ಯ ಕಲ್ಪಿಸಬೇಕು ಎಂದು ಸಂಸದ ಸಿ.ಎಸ್‌.ಪುಟ್ಟರಾಜು ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಾಲ್ಲೂಕು ಆಸ್ಪತ್ರೆಗಳ ಅವ್ಯವಸ್ಥೆ ಯಿಂದಾಗಿ ಜನರು ಆಸ್ಪತ್ರೆಗೆ ಬರಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಒಂದೆಡೆಯಾದರೆ, ಕಟ್ಟಡಗಳು ಶಿಥಿಲಗೊಂಡು ಕುಸಿದು ಬೀಳುವ ಹಂತದಲ್ಲಿವೆ. ಅವುಗಳ ಸರ್ಜರಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾ ವೈದ್ಯಾಧಿಕಾರಿ ಕೆ.ಮೋಹನ್‌, ‘ವಿವಿಧ ತಾಲ್ಲೂಕು ಆಸ್ಪತ್ರೆಗಳಲ್ಲಿ ಒಟ್ಟು 159 ಹುದ್ದೆ ಖಾಲಿ ಇವೆ. ಕೆ.ಆರ್‌.ಪೇಟೆ ತಾಲ್ಲೂಕಿನಲ್ಲಿ 60, ನಾಗಮಂಗಲ ತಾಲ್ಲೂಕಿನಲ್ಲಿ 45 ಹುದ್ದೆ ಖಾಲಿ ಇವೆ. ಈ ಕುರಿತು ಸರ್ಕಾರಕ್ಕೆ ವರದಿ ನೀಡಲಾಗಿದೆ. ಶೀಘ್ರ ನೇಮಕಾತಿ ಪ್ರಕ್ರಿಯೆ ಆರಂಭಿಸುವ ಭರವಸೆ ಸಿಕ್ಕಿದೆ’ ಎಂದು ತಿಳಿಸಿದರು.

ADVERTISEMENT

‘ಶಿಥಿಲಗೊಂಡಿರುವ ಕಟ್ಟಡಗಳ ದುರಸ್ತಿಗಾಗಿ ಜಿಲ್ಲಾ ಪಂಚಾಯಿತಿ ಹಾಗೂ ಕೆಎಚ್‌ಎಸ್‌ಡಿಆರ್‌ಪಿ ವಿಭಾಗಕ್ಕೆ ವರದಿ ನೀಡಲಾಗಿದೆ. ಜಿಲ್ಲಾ ಪಂಚಾಯಿತಿಯಿಂದ ₹ 45 ಲಕ್ಷ ಬಿಡುಗಡೆ ಆಗಿದೆ. ಆದರೆ, ಈ ಹಣದಿಂದ ಕಟ್ಟಡಗಳ ದುರಸ್ತಿ ಅಸಾಧ್ಯ. ಹೆಚ್ಚುವರಿ ಅನುದಾನ ನಿರೀಕ್ಷಿಸಲಾಗಿದೆ’ ಎಂದು ಸಭೆಗೆ ತಿಳಿಸಿದರು.

ವಿದ್ಯುತ್‌ ಗುತ್ತಿಗೆದಾರರ ಪರವಾನಗಿ ರದ್ದು ಮಾಡಿ: ‘ರಾಜೀವ್‌ ಗಾಂಧಿ ಗ್ರಾಮೀಣ ವಿದ್ಯುದ್ದೀಕರಣ ಯೋಜನೆ ಯಡಿ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸುತ್ತಿಲ್ಲ. ಸೆಸ್ಕ್  ಇಲಾಖೆ ಯಿಂದ ಪಡೆದ ವಸ್ತುಗಳನ್ನು ಖಾಸಗಿ ಕೆಲಸಕ್ಕೆ ಬಳಸಿಕೊಳ್ಳುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಿ’ ಎಂದು ಶಾಸಕ ಡಿ.ಸಿ.ತಮ್ಮಣ್ಣ ಪ್ರಶ್ನಿಸಿಸಿದರು.

ಇದಕ್ಕೆ ಉತ್ತರಿಸಿದ ಸೆಸ್ಕ್ ಕಾರ್ಯ ಪಾಲಕ ಎಂಜಿನಿಯರ್‌ ರವಿಶಂಕರ್‌, ‘ಅಂತಹ ಗುತ್ತಿಗೆದಾರರಿಗೆ ನೋಟಿಸ್‌ ನೀಡಿ ಕಪ್ಪುಪಟ್ಟಿಗೆ ಸೇರಿಸಲಾಗುವುದು’ ಎಂದು ಹೇಳಿದರು.
‘ನೋಟಿಸ್‌ ನೀಡಿರೆ ಸಾಕಾಗುವು ದಿಲ್ಲ, ಅಂತಹ ಗುತ್ತಿಗೆದಾರರ ಪರವಾನಗಿ ರದ್ದು ಮಾಡಿ’ ಎಂದು ಸಿಇಒ ಬಿ.ಶರತ್‌ ಸೂಚಿಸಿದರು.

ಕೃಷಿ ಅಭಿಯಾನ ವಾಹನ: ಕೃಷಿ ಇಲಾಖೆ ಜಂಟಿ ನಿರ್ದೇಶಕಿ ರಾಜಾಸುಲೋಚನಾ, ‘ಜೂನ್‌ ತಿಂಗಳಿಂದ ಜಿಲ್ಲೆಯಾದ್ಯಂತ ಕೃಷಿ ಅಭಿಯಾನ ವಾಹನ ಸಂಚರಿಸಲಿದೆ. ಈ ಮೂಲಕ ಮುಂಗಾರು ಹಂಗಾಮಿನ ಬಗ್ಗೆ ರೈತರಲ್ಲಿ ಅರಿವು ಮೂಡಿಸಲಾಗು ವುದು. ಗ್ರಾಮ ಪಂಚಾಯಿತಿ ವ್ಯಾಪ್ತಿ ಯಲ್ಲಿ ಕಾರ್ಯಕ್ರಮ ಆಯೋಜಿಸಿ ಅರಿವು ಮೂಡಿಸಲಾಗುವುದು’ ಎಂದರು.‘ಈ ಕಾರ್ಯಕ್ರಮಗಳಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಪಡೆಯಬೇಕು’ ಎಂದು ಜಿಲ್ಲಾಧಿಕಾರಿ ಎಸ್‌.ಜಿಯಾವುಲ್ಲಾ ಸೂಚಿಸಿದರು.

ಕೊಳೆಯುತ್ತಿದೆ ಹಣ: ವಿಧಾನ ಪರಿಷತ್‌ ಸದಸ್ಯ ಅಪ್ಪಾಜಿಗೌಡ ಮಾತನಾಡಿ, ‘ಕಾರ್ಮಿಕ ಕಲ್ಯಾಣ ನಿಧಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಹಣ ಕೊಳೆಯುತ್ತಿದೆ. ಸಂಕಷ್ಟದಲ್ಲಿರುವ ಕಾರ್ಮಿಕರ ಕಲ್ಯಾಣಕ್ಕೆ ಈ ಹಣ ಬಳಕೆಯಾಗುತ್ತಿಲ್ಲ. ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ’ ಎಂದು ಆರೋಪಿಸಿದರು.


ಗಿರಿಜನರ ಉಪಯೋಜನೆ ಅಧಿ ಕಾರಿ ಮಾತನಾಡಿ, ‘ಜಿಲ್ಲೆಯಲ್ಲಿ 22,600 ಗಿರಿಜನರನ್ನು ಗುರುತಿಸಲಾಗಿದೆ. ಇಲ್ಲಿಯವರೆಗೂ ಕೇಂದ್ರದಿಂದ ಒಂದು ರೂಪಾಯಿ ಅನುದಾನ ಬಂದಿಲ್ಲ. ಸಮಾಜ ಕಲ್ಯಾಣ ಇಲಾಖೆಯಡಿ ಹಣ ಬಳಸಿಕೊಳ್ಳಲಾಗುತ್ತಿದೆ’ ಎಂದು ಸಭೆಗೆ ತಿಳಿಸಿದರು.

ಇದಕ್ಕೆ ಉತ್ತರಿಸಿದ ಸಂಸದರು, ‘ತಾಲ್ಲೂಕುವಾರು ಗಿರಿಜನರ ಪಟ್ಟಿ ನೀಡಿ, ಈ ಬಗ್ಗೆ ಗಮನಹರಿಸಲಾಗುವುದು’ ಎಂದು ಹೇಳಿದರು. ಸಭೆಯಲ್ಲಿ ಕೆ.ಆರ್‌.ಪೇಟೆ ಶಾಸಕ ಕೆ.ಸಿ.ನಾರಾಯಣಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜೆ.ಪ್ರೇಮಕುಮಾರಿ, ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.