ADVERTISEMENT

ರಸ್ತೆ ಬದಿ ಮೀನು ಮಾರಾಟ: ಕಿರಿಕಿರಿ, ವಾಸನೆ

ಎಂ.ಎನ್.ಯೋಗೇಶ್‌
Published 18 ಡಿಸೆಂಬರ್ 2017, 4:45 IST
Last Updated 18 ಡಿಸೆಂಬರ್ 2017, 4:45 IST
ಮಂಡ್ಯದ ಕಾರಸವಾಡಿ ರಸ್ತೆ ಬದಿಯ ಮೀನು ಮಾರುಕಟ್ಟೆ ಬಳಿ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿರುವುದು
ಮಂಡ್ಯದ ಕಾರಸವಾಡಿ ರಸ್ತೆ ಬದಿಯ ಮೀನು ಮಾರುಕಟ್ಟೆ ಬಳಿ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿರುವುದು   

ಮಂಡ್ಯ: ಅಕ್ಟೋಬರ್‌, ನವೆಂಬರ್‌ ತಿಂಗಳಲ್ಲಿ ಉತ್ತಮ ಮಳೆಯಾದ ಕಾರಣ ಜಿಲ್ಲೆಯ ಕೆರೆಗಳು ತುಂಬಿದ್ದು ಮೀನು ಉತ್ಪಾದನೆ ಹೆಚ್ಚಳವಾಗಿದೆ. ಆದರೆ ನಗರದಲ್ಲಿ ಸುಸಜ್ಜಿತವಾದ ಮೀನು ಮಾರುಕಟ್ಟೆ ಇಲ್ಲದ ಕಾರಣ ವ್ಯಾಪಾರಿಗಳು ಪರದಾಡುತ್ತಿದ್ದಾರೆ.

ಹೊಸಹಳ್ಳಿ, ಕಾರಸವಾಡಿ ರಸ್ತೆ ಬದಿಯ ಖಾಸಗಿ ಭೂಮಿಯಲ್ಲಿ 30ಕ್ಕೂ ಹೆಚ್ಚು ಮಹಿಳೆಯರು ಮೀನು ಮಾರಾಟ ಮಾಡುತ್ತಾರೆ. ಕಳೆದ 20 ವರ್ಷಗಳಿಂದ ಮೀನು ಮಾರಾಟ ಮಾಡುತ್ತಿರುವ ಅವರಿಗೆ ಸುಸಜ್ಜಿತವಾದ ಜಾಗವಿಲ್ಲ. ಮೊದಲು ಅವರು ನೂರು ಅಡಿ ರಸ್ತೆ ಸಮೀಪ ಮೀನು ಮಾರಾಟ ಮಾಡುತ್ತಿದ್ದರು.  ಅಲ್ಲಿಂದ ತೆರವುಗೊಳಿಸಲಾಯಿತು. ನಂತರ ಕಾರಸವಾಡಿ ರಸ್ತೆ ಬದಿಯಲ್ಲಿ ಮೀನು ಮಾರಾಟ ಆರಂಭಿಸಿದರು. ಕಿರಿದಾದ ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುತ್ತಿರುವ ಕಾರಣ ಹಲವು ಸಮಸ್ಯೆ ಎದುರಿಸುತ್ತಿದ್ದಾರೆ.

ಮೀನು ಕೊಳ್ಳಲು ಬಂದ ಗ್ರಾಹಕರು ರಸ್ತೆಯಲ್ಲೇ ವಾಹನ ನಿಲ್ಲಿಸಿ ಟ್ರಾಫಿಕ್‌ ಜಾಮ್‌ ಮಾಡುತ್ತಿದ್ದಾರೆ. ಭಾನುವಾರ ಜನರು ಕಿಕ್ಕಿರಿದು ತುಂಬಿರುತ್ತಾರೆ. ಎರಡೂ ಕಡೆ ಟ್ರಾಫಿಕ್‌ ಸಮಸ್ಯೆಯುಂಟಾಗಿ ಜನರು ಕಿರಿಕಿರಿ ಅನುಭವಿಸುತ್ತಾರೆ. ಮೀನು ಸ್ವಚ್ಛಗೊಳಿಸಿದ ನೀರು ಹರಿಯಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ, ಹೀಗಾಗಿ ಸುತ್ತಮುತ್ತ ದುರ್ವಾಸನೆ ಬೀರಿದೆ. ಅಲ್ಲದೆ ಮೀನಿನ ತ್ಯಾಜ್ಯ ತಿನ್ನಲು ಬೀದಿ ನಾಯಿಗಳು ಹಿಂಡಿನಲ್ಲಿ ಬರುತ್ತವೆ. ರಸ್ತೆ ಮಧ್ಯಕ್ಕೆ ತ್ಯಾಜ ತಂದು ಬಿಸಾಡುತ್ತವೆ. ಇದರಿಂದ ಹತ್ತಿರದ ನಿವಾಸಿಗಳಿಗೆ ತಲೆನೋವಾಗಿದೆ.

ADVERTISEMENT

‘ರಸ್ತೆಬದಿಯಲ್ಲಿ ವ್ಯಾಪಾರಿಗಳು ಮೀನು ಮಾರಾಟ ಮಾಡುವುದರಿಂದ ದೂಳಿನ ಸಮಸ್ಯೆ ಹೆಚ್ಚಾಗಿದೆ. ಮೀನಿನ ಮೇಲೆ ಒಂದು ಹಂತ ದೂಳು ಇರುತ್ತದೆ. ಹೀಗಾಗಿ ತೆಗೆದುಕೊಂಡು ಹೋದ ನಂತರ 2 ಬಾರಿ ತೊಳೆದು ಬಳಸಬೇಕು. ಸುಸಜ್ಜಿತವಾದ ಮೀನು ಮಾರುಕಟ್ಟೆ ಇಲ್ಲದ ಕಾರಣ ಗ್ರಾಹಕರಿಗೂ ಸಮಸ್ಯೆಯಾಗಿದೆ’ ಎಂದು ವಿದ್ಯಾನಗರದ ಗ್ರಾಹಕ ಸೋಮಶೇಖರ್‌ ಹೇಳಿದರು.

ಮನವಿಗೆ ಸ್ಪಂದನೆ ಇಲ್ಲ: ಏಳೆಂಟು ವರ್ಷಗಳಿಂದಲೂ ವ್ಯಾಪಾರಿಗಳು ಮೀನು ಮಾರುಕಟ್ಟೆ ನಿರ್ಮಿಸಲು ಆಗ್ರಹಿಸಿ ನಗರಸಭೆ ಅಧಿಕಾರಿಗಳು ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ ನಗರಸಭೆ ಜಾಗ ನೀಡಲು ಮುಂದೆ ಬಾರದ ಕಾರಣ ಮನವಿ ಮನವಿಯಾಗಿಯೇ ಉಳಿದಿದೆ.

‘ಪ್ರತಿ ವರ್ಷ ಮೀನು ಮಾರುಕಟ್ಟೆ ನಿರ್ಮಿಸಲು ಮನವಿ ಕೊಡುತ್ತೇವೆ. ಆದರೆ ಬೇಡಿಕೆ ಈಡೇರುತ್ತಿಲ್ಲ. ಇದು ಬೇರೆಯವರ ಜಾಗ, ಅವರು ಖಾಲಿ ಮಾಡಿ ಎಂದರೆ ಈಗಲೇ ಖಾಲಿ ಮಾಡಬೇಕು. ನಾನು 25 ವರ್ಷಗಳಿಂದ ಮೀನು ಮಾರಾಟ ಮಾಡುತ್ತಿದ್ದೇನೆ. ಇದೇ ನನ್ನ ಬದುಕು. ಈಗಲಾದರೂ ನಮಗೊಂದು ಮಾರುಕಟ್ಟೆ ನಿರ್ಮಿಸಿಕೊಡಬೇಕು’ ಎಂದು ಮೀನು ವ್ಯಾಪಾರ ಮಾಡುವ ಕೆಂಪಮ್ಮ ಹೇಳಿದರು.

‘ಮೀನು ಬೇಕಾದಷ್ಟು ಬರುತ್ತದೆ. ಅದೆಲ್ಲವನ್ನು ಮಾರಲು ಸಾಧ್ಯವಾಗುತ್ತಿಲ್ಲ. ಇಷ್ಟು ಸಣ್ಣ ಜಾಗದಲ್ಲಿ ಸ್ವಚ್ಛ ಮಾಡಲೂ ಆಗುತ್ತಿಲ್ಲ. ಕೆಲವರು ಇಲ್ಲಿ ಮೀನು ಮಾರಾಟ ಮಾಡುವುದನ್ನು ಬಿಟ್ಟು ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ’ ಎಂದು ಮಹಾದೇವಮ್ಮ ಹೇಳಿದರು.

‘ಪ್ರತಿನಿತ್ಯ ಇಲ್ಲಿ ₹ 40–50 ಸಾವಿರ ವಹಿವಾಟು ನಡೆಯುತ್ತಿದೆ. 4–5 ಕ್ವಿಂಟಲ್‌ ಮೀನು ಮಾರಾಟವಾಗುತ್ತದೆ. ನಗರಸಭೆ ನಮಗೊಂದು ಮಾರುಕಟ್ಟೆ ಮಾಡಿಕೊಟ್ಟರೆ ಇನ್ನೂ ಹೆಚ್ಚಿನ ಮೀನು ಮಾರಾಟ ಮಾಡಬಹುದು. ಬೇಡಿಕೆಯಂತೂ ಇದ್ದೇ ಇದೆ. ಜಾಗದ ಸಮಸ್ಯೆಯಿಂದಾಗಿ ನಾವು ಸರಿಯಾಗಿ ವ್ಯಾಪಾರ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ವ್ಯಾಪಾರಿ ಸಂತೋಷ್‌ ಹೇಳಿದರು.

ಸಚಿವ ಪ್ರಮೋದ್‌ ಮಧ್ವರಾಜ್‌ಗೆ ಮನವಿ

ಮಂಡ್ಯ: ‘ಈಚೆಗೆ ನಗರಕ್ಕೆ ಭೇಟಿ ನೀಡಿದ್ದ ಮೀನುಗಾರಿಕೆ ಸಚಿವ ಪ್ರಮೋದ್‌ ಮಧ್ವರಾಜ್‌ ಅವರಿಗೆ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಿ, ಎಲ್ಲಾ ಸೌಲಭ್ಯ ನೀಡುವಂತೆ ಒತ್ತಾಯಿಸಿ ಮನವಿ ಕೊಟ್ಟಿದ್ದೇವೆ. ಶೀಘ್ರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ. ನಗರಸಭೆ ಈ ಮೊದಲು ರೈತ ಸಭಾಂಗಣದ ಬಳಿ ಮೀನು ಮಾರುಕಟ್ಟೆಯಾಗಿ ಜಾಗ ಗುರುತಿಸಿತ್ತು.

ಆದರೆ ಅಲ್ಲಿ ಯಾವುದೇ ಸೌಲಭ್ಯ ಇಲ್ಲದ ಕಾರಣ ಮಾರುಕಟ್ಟೆಯನ್ನು ಸ್ಥಳಾಂತರಿಸಲು ಸಾಧ್ಯವಾಗಲಿಲ್ಲ. ಮಳವಳ್ಳಿಯಲ್ಲಿ ಉತ್ತಮ ಮಾರುಕಟ್ಟೆ ಇದೆ. ಜಿಲ್ಲಾ ಕೇಂದ್ರದಲ್ಲಿ ಮಾರುಕಟ್ಟೆ ಇಲ್ಲದಿರುವುದು ದುರದೃಷ್ಟಕರ’ ಎಂದು ಮೀನು ಮಾರಾಟಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸ್‌ ನಂಜುಂಡಪ್ಪ ಹೇಳಿದರು.

* * 

ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಬಹಳ ದಿನಗಳಿಂದ ಬೇಡಿಕೆ ಇದೆ. ನಗರಸಭೆ ಪೌರಾಯುಕ್ತರ ಜೊತೆ ಮಾತನಾಡಿ ಸೂಕ್ತ ಜಾಗದಲ್ಲಿ ಮಾರುಕಟ್ಟೆ ನಿರ್ಮಿಸಿಕೊಡಲಾಗುವುದು. ಮೀನುಗಾರರ ಬೇಡಿಕೆ ಶೀಘ್ರ ಈಡೇರಲಿದೆ
ಹೊಸಹಳ್ಳಿ ಬೋರೇಗೌಡ, ನಗರಸಭೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.