ADVERTISEMENT

ವಸತಿನಿಲಯಗಳಲ್ಲಿ ಸೌಕರ್ಯ ಕೊರತೆವಸತಿನಿಲಯಗಳಲ್ಲಿ ಸೌಕರ್ಯ ಕೊರತೆ

ಬಸವರಾಜ ಹವಾಲ್ದಾರ
Published 14 ಮಾರ್ಚ್ 2017, 6:35 IST
Last Updated 14 ಮಾರ್ಚ್ 2017, 6:35 IST

ಮಂಡ್ಯ: ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡಗಳ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿ ಎಂದು ಮೆಟ್ರಿಕ್‌ ಪೂರ್ವ ಹಾಗೂ ಮೆಟ್ರಿಕ್‌ ನಂತರದ ವಿದ್ಯಾರ್ಥಿ ವಸತಿ ನಿಲಯಗಳನ್ನು ತೆರೆಯಲಾಗಿದೆ. ಆದರೆ, ಸ್ವಂತ ಕಟ್ಟಡ, ಮೂಲ ಸೌಕರ್ಯ, ಸಿಬ್ಬಂದಿ ಕೊರತೆಯಿಂದಾಗಿ ವಿದ್ಯಾರ್ಥಿಗಳು ತೊಂದರೆ ಎದುರಿಸುವಂತಾಗಿದೆ.

ವಸತಿ ನಿಲಯದಲ್ಲಿಯೂ ವಸತಿಗೆ ಸಮಸ್ಯೆ ಇದೆ ಎಂದರೆ ನೀವು ನಂಬಲೇಬೇಕು. ಖಾಸಗಿ ಕಟ್ಟಡಗಳಲ್ಲಿರುವ ಹಾಸ್ಟೆಲ್‌ಗಳಲ್ಲಿ ಮಕ್ಕಳು ಗೂಡಿನಂತಹ ಕೊಠಡಿಯಲ್ಲಿ ಮಲಬೇಕಾದ ಸ್ಥಿತಿ ಹಲವು ಕಡೆಗಳಲ್ಲಿ ಇದೆ.

ಶೌಚಾಲಯ, ಸ್ನಾನದ ಕೊಠಡಿಗಳ ಕೊರತೆಯೂ ವಿದ್ಯಾರ್ಥಿಗಳನ್ನು ಕಾಡುತ್ತಿದೆ.

ADVERTISEMENT

ಸರ್ಕಾರ ನಿರ್ಮಾಣ ಮಾಡಿರುವ ಹಲವು ಕಟ್ಟಡಗಳು ಉತ್ತಮವಾಗಿವೆ. ಅಲ್ಲಿ ಸೌಲಭ್ಯಗಳೂ ಚೆನ್ನಾಗಿವೆ. ಕುಡಿಯುವ ನೀರು, ಊಟಕ್ಕೆ ಡೈನಿಂಗ್‌ ಹಾಲ್‌, ಮಲಗಲು ಮಂಚ ಇತ್ಯಾದಿ ವ್ಯವಸ್ಥೆಗಳನ್ನು ಮಾಡಿಕೊಡಲಾಗಿದೆ.

ಇನ್ನು ಕೆಲವು ಸರ್ಕಾರಿ ಕಟ್ಟಡಗಳಲ್ಲಿದ್ದರೂ ಮೂಲ ಸೌಲಭ್ಯ ಕೊರತೆಯಿಂದ ಬಳಲುತ್ತಿವೆ. ಶೌಚಾಲಯಗಳು ಹಾಗೂ ಸ್ನಾನಗೃಹಕ್ಕೆ ಮೂಗು ಮುಚ್ಚಿಕೊಂಡು ಹೋಗಬೇಕಾದ ಸ್ಥಿತಿ ಇದೆ. ಕೆಲವು ಕಡೆಗಳಲ್ಲಿ ಬಾಗಿಲು ಕಿತ್ತು ಹೋಗಿದ್ದರೂ, ಅದನ್ನು ಹಾಕಿಸುವ ಗೋಜಿಗೆ ಅಧಿಕಾರಿಗಳು ಹೋಗಿಲ್ಲ.

ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಮೆಟ್ರಿಕ್‌ ಪೂರ್ವ ಹಾಗೂ ಮೆಟ್ರಿಕ್‌ ನಂತರದ 67 ವಿದ್ಯಾರ್ಥಿ ನಿಲಯಗಳಿವೆ. ಅದರಲ್ಲಿ 10 ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ.

ಜಿಲ್ಲೆಯಲ್ಲಿ 8 ಮೊರಾರ್ಜಿ ಹಾಗೂ 6 ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳಿವೆ. ಆ ಪೈಕಿ ಒಂದು ಮೊರಾರ್ಜಿ, 5 ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳು ಬಾಡಿಗೆ ಕಟ್ಟಡದಲ್ಲಿವೆ.

ವಸತಿ ಶಾಲೆ ಹಾಗೂ ವಸತಿ ನಿಲಯಗಳನ್ನು ತೆರೆಯುವಾಗ ತೋರಿಸುವ ಉತ್ಸಾಹವನ್ನು ಸರ್ಕಾರ ನಂತರ ಸ್ವಂತ ಕಟ್ಟಡ ಒದಗಿಸುವಲ್ಲೂ ತೋರಿಸಿಲ್ಲ. ಪರಿಣಾಮವಾಗಿ ಮಕ್ಕಳು ಖಾಸಗಿ ಕಟ್ಟಡಗಳಲ್ಲಿಯೇ ಇರಬೇಕಾದ ಸ್ಥಿತಿ ಎದುರಾಗಿದೆ. ಕೆಲವು ಕಡೆ ಇಲ್ಲಿಯವರೆಗೆ ನಿವೇಶನವನ್ನೇ ಒದಗಿಸಿಲ್ಲ.

ಖಾಸಗಿ ಕಟ್ಟಡಗಳಲ್ಲಿ ಸಣ್ಣದಾದ ಕೊಠಡಿಗಳಿರುತ್ತವೆ. ಅಂತಹ ಕೊಠಡಿಯಲ್ಲಿಯೇ ಹತ್ತಾರು ವಿದ್ಯಾರ್ಥಿಗಳು ಇರಬೇಕು. ಅವರಿಗೆ ಮಲಗಲು ಬೇಕಾದ ಮಂಚಗಳು ಬಂದಿದ್ದರೂ ಜಾಗದ ಕೊರತೆಯಿಂದ ಅವುಗಳನ್ನು ಹಾಕಲಾಗುವುದಿಲ್ಲ.

ಆ ಕಟ್ಟಡಗಳಲ್ಲಿ ವಿದ್ಯಾರ್ಥಿಗಳ ಹಾಸಿಗೆ, ಡ್ರೆಸ್‌, ಪುಸ್ತಕಗಳನ್ನು ಇಡಲು ಬೇಕಾದ ‘ಕಬೋರ್ಡ್’ ಗಳಿರುವುದಿಲ್ಲ. ಅವುಗಳನ್ನು ಟ್ರಂಕ್‌, ಸೂಟಕೇಸ್‌, ಬ್ಯಾಗುಗಳಲ್ಲಿಯೇ ಇಟ್ಟುಕೊಳ್ಳಬೇಕಾಗುತ್ತದೆ. ಮಲಗಲು, ಊಟ ಮಾಡಲು ನೆಲವೇ ಗತಿಯಾಗಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಮೆಟ್ರಿಕ್‌ ಪೂರ್ವ ಹಾಗೂ ಮೆಟ್ರಿಕ್‌ ನಂತರದ 106 ವಿದ್ಯಾರ್ಥಿಗಳ ವಸತಿ ನಿಲಯ ಇವೆ.  29 ವಿದ್ಯಾರ್ಥಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. ಅವುಗಳ ಪೈಕಿ 18 ಬಾಲಕಿಯರ ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ.
ಜಿಲ್ಲೆಯ ಕೆಲವು ವಸತಿ ನಿಲಯಗಳು ವಿದ್ಯಾರ್ಥಿಗಳ ಕೊರತೆಯನ್ನೂ ಎದುರಿಸುತ್ತಿವೆ.

ವಿವಿಧೆಡೆ ವಸತಿ ನಿಲಯ ತೆರೆದಿರುವುದು ಒಂದು ಕಾರಣವಾದರೆ, ಬಸ್‌ ಪಾಸ್‌ ಸೌಲಭ್ಯ ಕಲ್ಪಿಸಿರುವುದೂ ಇನ್ನೊಂದು ಕಾರಣವಾಗಿದೆ. ಹಾಗಾಗಿ ಹಲವು ವಸತಿ ನಿಲಯಗಳ ಭರ್ತಿಗೆ ಇದ್ದ ಸಂಖ್ಯೆಯನ್ನೇ ಕಡಿಮೆ ಮಾಡಲಾಗಿದೆ.

**

ಓದಲು ಬೇಕಾದ ವಾತಾವರಣ ಅಗತ್ಯ
ಹಿಂದುಳಿದ, ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ, ಪಂಗಡದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಹಾಸ್ಟೆಲ್‌ಗಳನ್ನು ಆರಂಭಿಸಲಾಗಿದೆ. ಹಾಸ್ಟೆಲ್‌ಗಳನ್ನು ಆರಂಭಿಸುವಾಗ ತೋರಿಸುವ ಉತ್ಸಾಹವನ್ನು ನಂತರ ಮೂಲ ಸೌಕರ್ಯ ಒದಗಿಸಲು ತೋರಿಸುವುದಿಲ್ಲ. ಹಲವು ವಸತಿ ನಿಲಯ ಮಂಜೂರಾಗಿ ನಾಲ್ಕಾರು ವರ್ಷಗಳು ಕಳೆದರೂ ಬಾಡಿಗೆ ಕಟ್ಟಡದಲ್ಲಿಯೇ ನಡೆಯುತ್ತಿವೆ. ಸಿಬ್ಬಂದಿ ಕೊರತೆಯೂ ಅವುಗಳನ್ನು ಕಾಡುತ್ತಿದೆ. ಓದಲು ಬೇಕಾದ ವಾತಾವರಣ ಕಲ್ಪಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಿದೆ

**

ಅಗತ್ಯ ಸಿಬ್ಬಂದಿ ಇಲ್ಲದಿರುವುದರಿಂದ ಸಮಸ್ಯೆ

ಸಿಬ್ಬಂದಿ ಕೊರತೆಯೂ ವಸತಿ ನಿಲಯಗಳನ್ನು ಕಾಡುತ್ತಿದೆ. ಅಡುಗೆ ಮಾಡುವವರಿಂದ ಹಿಡಿದು ವಾರ್ಡ್‌ನ್‌ ಹುದ್ದೆಯವರೆಗೂ ಸಿಬ್ಬಂದಿ ಇಲ್ಲ. ಕೆಲವು ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ವಾಚಮನ್‌ಗಳೂ ಇಲ್ಲ. ಹಾಗಾಗಿ ಅವರನ್ನು ಭದ್ರತೆಯ ಕೊರತೆ ಕಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.