ADVERTISEMENT

ಹಂತಹಂತವಾಗಿ ಗ್ರಾ.ಪಂ ನೌಕರರ ಕಾಯಂ

​ಪ್ರಜಾವಾಣಿ ವಾರ್ತೆ
Published 27 ಮೇ 2017, 5:38 IST
Last Updated 27 ಮೇ 2017, 5:38 IST

ಕೆ.ಆರ್.ಪೇಟೆ: ‘ಇಲ್ಲಿವರೆಗೆ ಗ್ರಾಮ ಪಂಚಾಯಿತಿಯ 30 ಸಾವಿರ ನೌಕರರನ್ನು ಕಾಯಂ ಮಾಡಲಾಗಿದ್ದು, ಉಳಿದ 20 ಸಾವಿರ ಮಂದಿಯನ್ನು ಹಂತ ಹಂತವಾಗಿ ಕಾಯಂ ಮಾಡಲಾಗು ವುದು’ ಎಂದು ಪಂಚಾಯತ್ ರಾಜ್ ಇಲಾಖೆ ಅಧೀನ ಕಾರ್ಯದರ್ಶಿ ಟಿ.ವಿ.ಅರುಣ್ ಕುಮಾರ್ ಹೇಳಿದರು.

ಪಟ್ಟಣದ ಖಾಸಿಂಖಾನ್ ಸಮುದಾಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ನೌಕರರ ಸಂಘ ತಾಲ್ಲೂಕು ಘಟಕದ 7ನೇ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ನೌಕರರು ಸಮನ್ವಯತೆಯಿಂದ ಸೇವೆ ಸಲ್ಲಿಸಿದರೆ ಗ್ರಾಮ ಪಂಚಾಯಿತಿ ಸದೃಢಗೊಳಿಸಲು ಸಾಧ್ಯ. ಕಳೆದ ಸಾಲಿನಲ್ಲಿ ಎಲ್ಲ ಗ್ರಾಮ ಪಂಚಾಯಿತಿಗಳಿಂದ ಒಟ್ಟು ₹ 1,200 ಕೋಟಿ ಕರ ವಸೂಲಿಯಾಗಬೇಕಾಗಿತ್ತು. ಆದರೆ, ₹ 300 ಕೋಟಿ ಮಾತ್ರ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಬಿಲ್ ಕಲೆಕ್ಟರ್ ಹೋದರೆ ನಿರೀಕ್ಷಿತ ಕರ ವಸೂಲಿ ಸಾಧ್ಯವಾಗುವುದಿಲ್ಲ. ಬದಲಾಗಿ ಆ ಭಾಗದ ನೀರುಗಂಟಿ, ಗ್ರಾಮ ಪಂಚಾಯಿತಿ ಸದಸ್ಯರು, ಲೆಕ್ಕ ಸಹಾಯಕರು ಹೋಗಬೇಕು. ಸಮನ್ವ ಯತೆಯಿಂದ ಕೆಲಸ ಮಾಡಿ ನಿರ್ದಿಷ್ಟ ಗುರಿ ಸಾಧಿಸಿದರೆ ಹೆಚ್ಚು ಸೌಲಭ್ಯ ಒದಗಿಸಲು ಇಲಾಖೆ ಬದ್ಧವಾಗಿದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ನೌಕರರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಜಿ.ರಾಮಕೃಷ್ಣ, ‘ಗ್ರಾಮ ಪಂಚಾಯಿತಿ ನೌಕರರ ವೇತನಕ್ಕಾಗಿ ಪ್ರತ್ಯೇಕ ಅನುದಾನ ನೀಡಬೇಕು. ಕರ ವಸೂಲಿಗೂ ನೌಕರರ ವೇತನಕ್ಕೂ ತಾಳೆ ಹಾಕಬಾರದು. ಕೆಲವು ಗ್ರಾಮ ಪಂಚಾಯಿತಿಯಲ್ಲಿ 8, 10 ತಿಂಗಳ ವೇತನ ಬಾಕಿ ಬರಬೇಕಾಗಿದೆ. ಇದರಿಂದ ನೌಕರರು ಜೀವನ ಸಾಗಿಸಲು ಕಷ್ಟವಾಗಿದೆ’ ಎಂದು ಹೇಳಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಮೋದೂರು ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಘಟಕದ ಉಪಾಧ್ಯಕ್ಷ ಮತ್ತಿಘಟ್ಟ ಎಂ.ಕೆ.ಕುಮಾರ್, ಪ್ರಧಾನ ಕಾರ್ಯದರ್ಶಿ ಕೃಷ್ಣ, ಇಒ ಚಂದ್ರಮೌಳಿ, ಪಿಡಿಒ ಡಾ.ನರಸಿಂಹರಾಜು, ಸಂಘದ ಪದಾಧಿಕಾರಿಗಳು, ಪಾಂಡವಪುರ ತಾಲ್ಲೂಕು ಘಟಕದ ಅಧ್ಯಕ್ಷ ಕುಮಾರ್, ನೂರಾರು ನೌಕರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.