ADVERTISEMENT

ಹಾವುಗಳು ಪರಿಸರಸ್ನೇಹಿ ಮಾತ್ರವಲ್ಲ ರೈತಮಿತ್ರ

ಕೆ.ಆರ್.ಪೇಟೆ: ಮಕ್ಕಳ ಬೇಸಿಗೆ ಶಿಬಿರ; ವಿವಿಧ ಬಗೆಯ ಹಾವು ಕಂಡು ಅವಕ್ಕಾದ ಮಕ್ಕಳು

​ಪ್ರಜಾವಾಣಿ ವಾರ್ತೆ
Published 12 ಮೇ 2017, 10:41 IST
Last Updated 12 ಮೇ 2017, 10:41 IST
ಕೆ.ಆರ್.ಪೇಟೆ:  ಪಟ್ಟಣದ ಬಾಲಕಿಯರ  ಸರ್ಕಾರಿ  ಪ್ರೌಢಶಾಲೆ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಬೆಂಗಳೂರಿನ ಬಾಲಭವನ ಸೊಸೈಟಿ ಆಶ್ರಯದಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರದಲ್ಲಿ  ಬುಧವಾರ  ಹಾವುಗಳದ್ದೇ ಆಟ!
 
ಚಿತ್ರಗಳಲ್ಲಿ, ಸಿನಿಮಾಗಳಲ್ಲಿ ಮಾತ್ರ ಹಾವುಗಳನ್ನು ಕಂಡಿದ್ದ ಮಕ್ಕಳು ತಮ್ಮ ಕಣ್ಣೇದುರಿಗೇ ವಿವಿಧ ಬಗೆಯ ಹತ್ತಾರು ಹಾವುಗಳು ಕಾಣಿಸಿಕೊಂಡಾಗ ಅವಕ್ಕಾದರು. ‘ಹಾವುಗಳು ನಮ್ಮಂತೆಯೇ ಜೀವಿಗಳು. ನಾವು ತೊಂದರೆ ಕೊಡದಿದ್ದರೆ ಅವು ಏನು ಮಾಡವು’ ಎಂಬುದನ್ನು ಮತ್ತೆ– ಮತ್ತೇ ಕೇಳಿ ತಿಳಿದುಕೊಂಡರು.
 
ಉರಗ ತಜ್ಞ ಸ್ನೇಕ್ ಮುನ್ನಾ ತಮ್ಮ ಬುಟ್ಟಿಯಿಂದ ವಿವಿಧ ಬಗೆಯ ಹಾವುಗಳನ್ನು  ಒಂದೊಂದಾಗಿ ತೆಗೆದು ಪರಿಚಯಿಸಿ ಪ್ರದರ್ಶಿಸಿದಾಗ ಮಕ್ಕಳು ಉಸಿರು ಬಿಗಿಹಿಡಿದು ವೀಕ್ಷಿಸಿದರು. ಪ್ರಕೃತಿಯಲ್ಲಿ ಹಾವುಗಳ ಮಹತ್ವ ಎಷ್ಟಿದೆ, ಅವು ಹೇಗೆ ರೈತನ ಸ್ನೇಹಿಯಾಗಿವೆ, ಇಲಿಗಳನ್ನು ತಿಂದು ಹೇಗೆ ಬೆಳೆಗಳನ್ನು ಸಂರಕ್ಷಣೆ ಮಾಡುತ್ತವೆ ಎಂಬ ಬಗ್ಗೆ ಸಮಗ್ರ ಮಾಹಿತಿಯನ್ನು ಮುನ್ನಾ ನೀಡಿದರು. 
 
ಮಕ್ಕಳು ಕೇರೆ ಹಾವು, ಒಳ್ಳೇಬುಡ್ಡ, ಮಣ್ಣು ಹಾವನ್ನು ಮುಟ್ಟಿ ರೋಮಾಂಚನಗೊಂಡರು. 10 ಅಡಿಯಷ್ಟು ಉದ್ದವಿರುವ ಕ್ಯಾರೆಹಾವು, ಬಂಗಾರ ಹಾಗೂ ಗೋಧಿ ಬಣ್ಣದ ನಾಗರಹಾವನ್ನು ಕಂಡು ಪುಳಕಿತಗೊಂಡರು.
 
ಪುರಸಭೆ ಹಿರಿಯ ಸದಸ್ಯ ಡಿ.ಪ್ರೇಮಕುಮಾರ್ ಹಾಗೂ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಕೆ.ಆರ್.ನೀಲಕಂಠ ಮಾತನಾಡಿ, ‘ಹಿರಿಯರು ಹಾವುಗಳಿಂದ ಪ್ರಯೋಜನವಿದ್ದುದರಿಂದಲೇ ಅವುಗಳಿಗೆ ದೈವದ ಮಹತ್ವ ನೀಡಿದರು. ಹಾವುಗಳನ್ನು ಕಂಡೊಡನೆ ಹೊಡೆದು, ಬಡಿದು ಸಾಯಿಸದೇ ಅವುಗಳನ್ನು ಸಂರಕ್ಷಣೆ ಮಾಡಬೇಕು. ರಸ್ತೆ ಬದಿಯಲ್ಲಿ ಹಾಗೂ ಜುಮೀನಿನ ಪಕ್ಕದಲ್ಲಿ ಓಡಾಡುವಾಗ ಎಚ್ಚರಿಕೆಯಿಂದ ಓಡಾಡಬೇಕು’ ಎಂದು ಕಿವಿಮಾತು ಹೇಳಿದರು.  
 
ಕಾರ್ಯಕ್ರಮದಲ್ಲಿ ಎಸಿಡಿಪಿಒ ಪದ್ಮಾ, ಪುಟ್ಟಸ್ವಾಮಿ, ಸಾಮಾಜಿಕ ಕಾರ್ಯಕರ್ತ ಎಚ್.ಬಿ.ಮಂಜುನಾಥ್, ಸಮಷ್ಠಿ ಟ್ರಸ್ಟಿನ ಮ್ಯಾನೇಜಿಂಗ್ ಟ್ರಸ್ಟಿ ಎನ್.ಸಿಂಗ್ರೀಗೌಡ,  ಸಂಚಾಲಕ ಚೆಲುವರಾಜು, ಕ್ಷೇತ್ರಸಂಪನ್ಮೂಲ ವ್ಯಕ್ತಿ ನಾಗೇಶ್, ಎಚ್.ಎನ್. ಚಂದ್ರಶೇಖರ್ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.