ADVERTISEMENT

ಹೈಟೆಕ್‌ ‘ಕ್ಷೀರಭವನ’ ಉದ್ಘಾಟನೆ ಇಂದು

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2017, 5:25 IST
Last Updated 27 ನವೆಂಬರ್ 2017, 5:25 IST
ಮದ್ದೂರು ತಾಲ್ಲೂಕು ಕುದರಗುಂಡಿ ಗ್ರಾಮದಲ್ಲಿ ಹೈಟೆಕ್‌ ಮಾದರಿಯಲ್ಲಿ ನಿರ್ಮಾಣಗೊಂಡ ‘ಕ್ಷೀರ ಭವನ’
ಮದ್ದೂರು ತಾಲ್ಲೂಕು ಕುದರಗುಂಡಿ ಗ್ರಾಮದಲ್ಲಿ ಹೈಟೆಕ್‌ ಮಾದರಿಯಲ್ಲಿ ನಿರ್ಮಾಣಗೊಂಡ ‘ಕ್ಷೀರ ಭವನ’   

ಮದ್ದೂರು: ತಾಲ್ಲೂಕಿನ ಕುದರಗುಂಡಿ ಗ್ರಾಮದಲ್ಲಿ ₹ 15 ಲಕ್ಷ ವೆಚ್ಚದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ‘ಕ್ಷೀರ ಭವನ’ ನಿರ್ಮಿಸಲಾಗಿದ್ದು, ಸೋಮವಾರ ಉದ್ಘಾಟನೆಗೊಳ್ಳಲಿದೆ.

ಎರಡು ಅಂತಸ್ತುಗಳ ಈ ಕಟ್ಟಡದಲ್ಲಿ ಕೆಳ ಅಂತಸ್ತಿನಲ್ಲಿ ಆಡಳಿತ ಕಚೇರಿ ಹಾಗೂ ಹಾಲು ಸಂಗ್ರಹಣಾ ಕೊಠಡಿ ನಿರ್ಮಿಸಲಾಗಿದೆ. ಎರಡನೇ ಅಂತಸ್ತಿನಲ್ಲಿ ಕ್ಷೀರ ಪಿತಾಮಹ ಡಾ.ವಿ.ಕುರಿಯನ್‌ ಅವರ ಹೆಸರಿನಲ್ಲಿ ಸುಸಜ್ಜಿತ ಸಭಾಂಗಣ ನಿರ್ಮಿಸಲಾಗಿದೆ.

ಸೋಮವಾರ ಮಧ್ಯಾಹ್ನ8.30ಗಂಟೆಗೆ ಆದಿ ಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಕ್ಷೀರ ಭವನ ಲೋಕಾರ್ಪಣೆ ಹಾಗೂ ಹಾಲು ಶೀತಲೀಕರಣ ಕೇಂದ್ರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವರು. ಸಂಘದ ಅಧ್ಯಕ್ಷ ಕೆ.ಎಂ. ಉಮೇಶ್ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಡಿ.ಸಿ. ತಮ್ಮಣ್ಣ, ಮನ್‌ಮುಲ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಸಚಿವ ಎಂ. ಕೃಷ್ಣಪ್ಪ, ಸಂಸದ ಸಿ.ಎಸ್‌.ಪುಟ್ಟರಾಜು ಪಾಲ್ಗೊಳ್ಳುವರು.

ADVERTISEMENT

ಸಾಧನೆ ಹಾದಿ: 1997ರಲ್ಲಿ ಸಂಸ್ಥಾಪಕ ಅಧ್ಯಕ್ಷೆ ವಿ.ಪಿ.ಭಾಗ್ಯಮ್ಮ ಅವರ ನೇತೃತ್ವದಲ್ಲಿ ಆರಂಭಗೊಂಡ ಈ ಸಂಘ, 2004ರಲ್ಲಿ ಅಧ್ಯಕ್ಷ ಕೆ.ಶಂಕರಯ್ಯ ಅವರ ನೇತೃತ್ವದಲ್ಲಿ ಪುನರುಜ್ಜೀವನಗೊಂಡಿತು.

ಇದೀಗ ಸಂಘದಲ್ಲಿ 1,050 ಷೇರುದಾರರಿದ್ದು, 350 ಹಾಲು ಉತ್ಪಾದಕರಿದ್ದಾರೆ. ಪ್ರತಿನಿತ್ಯ 350 ಲೀಟರ್‌ ಹಾಲು ಪೂರೈಕೆಯಾಗುತ್ತಿದೆ. ಕಳೆದ ಸಾಲಿನಲ್ಲಿ ₹ 11.2ಲಕ್ಷ ನಿವ್ವಳ ಲಾಭ ಬಂದಿದೆ. 1,050 ಮಂದಿ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ ನೋಂದಾಯಿಸಿದ್ದಾರೆ. ಪ್ರತಿವರ್ಷ ನಿವ್ವಳ ಲಾಭದಲ್ಲಿ ಹಾಲು ಉತ್ಪಾದಕ ರೈತರಿಗೆ ಬೋನಸ್‌ ಸೇರಿದಂತೆ ಉತ್ಪಾದಕರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ.

ಪ್ರಗತಿಯತ್ತ: ಹಾಲಿ ಅಧ್ಯಕ್ಷ ಕೆ.ಎಂ.ಉಮೇಶ್‌ ಅವರ ಆಸಕ್ತಿ ಫಲವಾಗಿ ಕಳೆದ ಮೂರೂವರೆ ವರ್ಷಗಳಿಂದ ಸಂಘವು ಪ್ರಗತಿಯತ್ತ ಸಾಗಿದೆ. ಸಂಘದಲ್ಲಿ ಹಾಲು ಶೇಖರಣೆ ಹಾಗೂ ಕ್ಷೀರ ಗುಣಮಟ್ಟ ಪರೀಕ್ಷೆಗೆ ಅತ್ಯಾಧುನಿಕ ಯಂತ್ರೋಪಕಣಗಳನ್ನು ಅಳವಡಿಸಲಾಗಿದೆ. ಸಕಾಲದಲ್ಲಿ ಉತ್ಪಾದಕರಿಗೆ ಹಣ ಪಾವತಿ, ಜಾನುವಾರುಗಳಿಗೆ ವಿಮಾ ಸೌಲಭ್ಯ, ಪಶುಆಹಾರ ಪೂರೈಕೆ ಸೇರಿದಂತೆ ಇನ್ನಿತರ ಆರೋಗ್ಯಸೇವೆಗಳನ್ನು ಒದಗಿಸಲಾಗುತ್ತಿದೆ

ಸಂಘದ ಉಪಾಧ್ಯಕ್ಷ ಸಿದ್ದೇಗೌಡ, ಜಯರಾಮು, ಬೋರೇಗೌಡ, ಶ್ರೀಕಾಂತ್, ರಮೇಶ್, ಸುಮತಿ, ಗೀತಾ, ನಾಗಬೋರಯ್ಯ, ಕಾರ್ಯದರ್ಶಿ ಸುಧಾಕರ್, ಗುಮಾಸ್ತ ದರ್ಶನ್ ಸಂಘದ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ.

* * 

ತೀವ್ರ ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ಈ ಭಾಗದ ರೈತರ ಬದುಕಿಗೆ ಹೈನುಗಾರಿಕೆ ವರದಾನವಾಗಿದ್ದು, ಇಲ್ಲಿನ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ’
ಕೆ.ಎಂ.ಉಮೇಶ್‌
ನಿರ್ದೇಶಕರು, ಮಂಡ್ಯ ಜಿಲ್ಲಾ ಹಾಲು ಒಕ್ಕೂಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.