ADVERTISEMENT

‘ಪಕ್ಷಗಳಿಂದ ಸಮಾಜದ ದುರ್ಬಳಕೆ ಸಲ್ಲದು’

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 6:45 IST
Last Updated 9 ಫೆಬ್ರುವರಿ 2018, 6:45 IST

ಶ್ರೀರಂಗಪಟ್ಟಣ: ‘ಮಡಿವಾಳ, ಸವಿತಾ ಸಮಾಜ, ನಾಯಕ ಇನ್ನಿತರ ವರ್ಗಗಳ ಜನರನ್ನು ಪಕ್ಷಗಳು ದುರ್ಬಳಕೆ ಮಾಡಿ ಕೊಳ್ಳುತ್ತಿವೆ’ ಎಂದು ಜಿಲ್ಲಾ ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್‌.ಸಂದೇಶ್‌ ಹೇಳಿದರು. ಅವರು ಪಟ್ಟಣದಲ್ಲಿ ಮಡಿವಾಳ ಮಾಚಿದೇವರ ಕ್ಷೇಮಾಭಿವೃದ್ಧಿ ಸಂಘ ಏರ್ಪಡಿಸಿದ್ದ ಮಡಿವಾಳ ಮಾಚಿದೇವರ ಜಯಂತ್ಯುತ್ಸವದಲ್ಲಿ ಮಾತನಾಡಿದರು.

‘ಹಿಂದುಳಿದ ವರ್ಗಗಳಿಗೆ ಯಾವ ಪಕ್ಷವೂ ಸೂಕ್ತ ಪ್ರಾತಿನಿಧ್ಯ ನೀಡುತ್ತಿಲ್ಲ. ಮಡಿವಾಳ ಜನಾಂಗವನ್ನು ಎಸ್‌ಸಿಗೆ ಸೇರಿಸಬೇಕು. ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿ ₹ 50 ಕೋಟಿ ಮೀಸಲಿಡಬೇಕು’ ಎಂದು ಒತ್ತಾಯಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಕಾಂಗ್ರೆಸ್‌ ಮಾಧ್ಯಮ ವಿಭಾಗದ ಜಿಲ್ಲಾ ಸಂಚಾಲಕ ಎಂ.ಪುಟ್ಟೇಗೌಡ, ‘ಕಾಂಗ್ರೆಸ್‌ ಸರ್ಕಾರ ಸಮಾನತೆ ಸಮಾಜ ನಿರ್ಮಾಣ ಕೆಲಸ ಮಾಡುತ್ತಿದೆ’ ಎಂದರು. ರಾಜ್ಯ ಮಡಿವಾಳರ ಸಂಘದ ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ, ‘ಮಡಿವಾಳರು ಸ್ವಾವಲಂಬಿಗಳಾಗ ಬೇಕು. ಭಿನ್ನಾಭಿಪ್ರಾಯಕ್ಕೆ ಅವಕಾಶ ನೀಡಬಾರದು’ ಎಂದು ಹೇಳಿದರು.

ADVERTISEMENT

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ್‌, ‘ಜೆಡಿಎಸ್‌ ಬ್ಯಾನರ್‌ ಅಡಿಯಲ್ಲಿ ಮಂಡ್ಯದಲ್ಲಿ ನಡೆದ ಮಡಿವಾಳರ ಸಮಾವೇಶಕ್ಕೆ ವಿರೋಧವಿದೆ’ ಎಂದರು. ‘ರಾಜ್ಯದ ಸಂಘದ ಅಧ್ಯಕ್ಷ ನಂಜಪ್ಪ ಜನಾಂಗವನ್ನು ಒಂದು ಪಕ್ಷಕ್ಕೆ ಅಡಮಾನ ಇಟ್ಟಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಸಂಘದ ತಾಲ್ಲೂಕು ಅಧ್ಯಕ್ಷ ಮರಳಾಗಾಲ ಮಂಜುನಾಥ್‌ ಒತ್ತಾಯಿಸಿದರು.

ಇದಕ್ಕೂ ಮುನ್ನ ಶಾಸಕರು ಕುವೆಂಪು ವೃತ್ತದಲ್ಲಿ ಮಾಚಿದೇವರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿದರು. ಜಾನಪದ ಕಲಾತಂಡಗಳು ಇದ್ದವು. ಸಿದ್ದಶೆಟ್ಟಿ, ಪ್ರಿಯಾ ರಮೇಶ್‌, ಪಾಲಹಳ್ಳಿ ನರಸಿಂಹ, ಡಿ.ರಮೇಶ್‌, ಎಚ್‌.ಎಸ್‌.ಹನುಮಂತಯ್ಯ, ಜೆ. ಪುಟ್ಟಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.