ADVERTISEMENT

ಅಭಿವೃದ್ಧಿ ಕೈಂಕರ್ಯಕ್ಕೆ ದೇಣಿಗೆ ನೀಡಿ

‘ಕರ್ನಾಟಕ ಕಲ್ಪವೃಕ್ಷ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಹಿತಿ ನರಹಳ್ಳಿ ಬಾಲಸುಬ್ರಹ್ಮಣ್ಯ ಸಲಹೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 8:48 IST
Last Updated 9 ಜನವರಿ 2017, 8:48 IST

ಮೈಸೂರು: ‘ಶ್ರೀಮಂತರು ಆಡಂಬರಕ್ಕೆ ಖರ್ಚು ಮಾಡುವ ಕೋಟ್ಯಂತರ ರೂಪಾಯಿಯನ್ನು ವಿಶ್ವವಿದ್ಯಾಲಯ ಗಳಿಗೆ ದೇಣಿಗೆ ನೀಡಿದರೆ, ವಿ.ವಿ.ಗಳ ಅಭಿವೃದ್ಧಿಗೆ ನೆರವಾಗುತ್ತದೆ’ ಎಂದು ಸಾಹಿತಿ ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯಪಟ್ಟರು.

ಕಲ್ಪವೃಕ್ಷ ಟ್ರಸ್ಟ್‌ ವತಿಯಿಂದ ಜೆಎಲ್‌ಬಿ ರಸ್ತೆಯ ರೋಟರಿ ಸಭಾಂಗಣ ದಲ್ಲಿ ಭಾನುವಾರ ಏರ್ಪಡಿಸಿದ್ದ ‘ಕರ್ನಾಟಕ ಕಲ್ಪವೃಕ್ಷ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುರಸ್ಕಾರ ಸ್ವೀಕರಿಸಿ ಮಾತನಾಡಿದರು.

ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಟ್ಯಾನ್‌ಫರ್ಡ್‌ ವಿ.ವಿ ನಿರ್ಮಾತೃ ಸ್ಟ್ಯಾನ್‌ಫರ್ಡ್‌ ಶ್ರೀಮಂತರಿಗೆ ಮಾದರಿ. ಆತ 800 ಎಕರೆ ಫಾರ್ಮ್‌ ನಿರ್ಮಿಸುವ ಗುರಿ ಹಾಕಿಕೊಂಡು ಎಂಟು ಸಾವಿರ ಎಕರೆ ಫಾರ್ಮ್‌ ನಿರ್ಮಿಸಿದ ಧೀಮಂತ. ಟೈಫಾಯಿಡ್‌ನಿಂದಾಗಿ ಏಕೈಕ ಪುತ್ರ ಮೃತಪಟ್ಟಾಗ ತನ್ನೆಲ್ಲ ಆಸ್ತಿಯನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡಲು ನಿರ್ಧರಿಸಿ ವಿಶ್ವವಿದ್ಯಾನಿಲಯ ನಿರ್ಮಿಸುತ್ತಾನೆ. ಜಗತ್ತಿನ ಅಗ್ರಗಣ್ಯ ಐದು ವಿ.ವಿ.ಗಳಲ್ಲಿ ಇದು ಕೂಡ ಸ್ಥಾನ ಪಡೆದಿದೆ ಎಂದು ಅವರು ತಿಳಿಸಿದರು.

ಈ ವಿ.ವಿ.ಯಲ್ಲಿ ಶಿಕ್ಷಣ ಪಡೆಯುವುದು ದುಬಾರಿ. ಇಲ್ಲಿ ಶೇ 80ರಷ್ಟು ವಿದ್ಯಾರ್ಥಿಗಳು ವಿ.ವಿ.ಯ ವಿದ್ಯಾರ್ಥಿವೇತನ ಪಡೆದು ವಿದ್ಯಾಭ್ಯಾಸ ಮಾಡುತ್ತಾರೆ. ಶ್ರೀಮಂತರು, ದಾನಿಗಳು ನೀಡಿದ ಹಣವನ್ನು ಠೇವಣಿ ಇಡಲಾಗಿದ್ದು, ಅದರಲ್ಲಿ ಇಷ್ಟೊಂದು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ ಎಂದರು.

ನಮ್ಮ ದೇಶದಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮದುವೆ ಮೊದಲಾದ ಸಮಾರಂಭಗಳನ್ನು ಅದ್ಧೂರಿಯಾಗಿ ನೆರವೇರಿಸುತ್ತಾರೆ. ಆದರೆ, ಅಭಿವೃದ್ಧಿ ಕಾರ್ಯಗಳಿಗೆ ನೆರವು ನೀಡಲು ಹಿಂದೇಟು ಹಾಕುತ್ತಾರೆ. ಸಮಾಜಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ಶ್ರೀಮಂತರು ಉದಾರ ನೆರವು ನೀಡಬೇಕು ಎಂದು ಸಲಹೆ ನೀಡಿದರು.

ಕಲ್ಪವೃಕ್ಷ ಟ್ರಸ್ಟ್‌ನವರು ಅಕ್ಷರ, ಅನ್ನ ಮತ್ತು ಆರೋಗ್ಯ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಒಳ್ಳೆಯ ಕೆಲಸ. ಮೂಲತಃ ಸೇವಾ ಕ್ಷೇತ್ರಗಳಾದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಉದ್ಯಮವಾಗಿವೆ. ಹಣ ಸಂಪಾದನೆ ಕ್ಷೇತ್ರಗಳಾಗಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ ಮಾತನಾಡಿ, ತಪ್ಪುದಾರಿ ತುಳಿಯುವ ವಿದ್ಯಾರ್ಥಿಗಳಿಗೆ ತಿಳಿಹೇಳಿ ಸರಿದಾರಿಗೆ ತರುವ ಕಾಯಕವನ್ನು ಟ್ರಸ್ಟ್‌, ಸಂಘ ಸಂಸ್ಥೆಗಳು ಮಾಡಬೇಕು. ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.

ಸಾಹಿತಿ ನರಹಳ್ಳಿ ಬಾಲಸುಬ್ರಹ್ಮಣ್ಯ, ಮಂಡ್ಯದ ವೈದ್ಯ ಶಂಕರೇಗೌಡ, ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಜ್ಯೋತಿ ಮಲ್ಲಾಪುರದ ಯಶಸ್ವಿ ರೈತ ಮಹಿಳೆ ಕೆ.ಬಿ.ಪ್ರತಿಭಾ ಅವರಿಗೆ ‘ಕರ್ನಾಟಕ ಕಲ್ಪವೃಕ್ಷ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಆದಿಚುಂಚನಗಿರಿ ಕೊಮ್ಮೇರಹಳ್ಳಿ ಶಾಖಾ ಮಠದ ಪುರುಷೋತ್ತಮಾ ನಂದನಾಥ ಸ್ವಾಮೀಜಿ, ಮೈಸೂರು ಶಾಖಾಮಠದ ಸೋಮನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಕಲ್ಪವೃಕ್ಷ ಟ್ರಸ್ಟ್‌ ಅಧ್ಯಕ್ಷ ಡಾ.ಎಚ್.ಬಿ. ರಾಜಶೇಖರ್‌, ಉಪಾಧ್ಯಕ್ಷರಾದ ಆಶಾ ಶಂಕರೇಗೌಡ, ಉದ್ಯಮಿ ಎಚ್.ಆರ್‌. ಕೇಶವ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.