ADVERTISEMENT

ಅರಮನೆ, ಮೃಗಾಲಯ ಸಮಯ ವಿಸ್ತರಿಸಿ

ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಸಂಘಟನೆಗಳ ಜತೆ ಜಿಲ್ಲಾಧಿಕಾರಿ ರಂದೀಪ್‌ ಚರ್ಚೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 11:35 IST
Last Updated 15 ಫೆಬ್ರುವರಿ 2017, 11:35 IST
ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಮಂಗಳವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಿ.ರಂದೀಪ್‌ ಮಾತನಾಡಿದರು. ಜನಾರ್ದನ್‌, ಜಿ.ಜಗದೀಶ್‌, ಐಎಎಸ್‌ (ಪ್ರೊಬೇಷನ್‌)  ಅಧಿಕಾರಿ ಅರುಣಾಂಶು ಗಿರಿ ಇದ್ದಾರೆ
ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಕುರಿತು ಮಂಗಳವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಿ.ರಂದೀಪ್‌ ಮಾತನಾಡಿದರು. ಜನಾರ್ದನ್‌, ಜಿ.ಜಗದೀಶ್‌, ಐಎಎಸ್‌ (ಪ್ರೊಬೇಷನ್‌) ಅಧಿಕಾರಿ ಅರುಣಾಂಶು ಗಿರಿ ಇದ್ದಾರೆ   

ಮೈಸೂರು: ಜಿಲ್ಲೆಗೆ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಹಾಗೂ ಹೆಚ್ಚು ದಿನ ನಗರದಲ್ಲಿ ಉಳಿಯುವಂತೆ ಮಾಡುವ ನಿಟ್ಟಿನಲ್ಲಿ ರೂಪಿಸಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಡಿ.ರಂದೀಪ್‌, ಪ್ರವಾಸೋದ್ಯಮ ಅಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಮಂಗಳವಾರ ಸಮಾಲೋಚನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ರಂದೀಪ್‌, ಜಿಲ್ಲೆಯಲ್ಲಿ ಶೇ 50ರಷ್ಟು ಮಾತ್ರ ಪ್ರವಾಸೋದ್ಯಮ ಪ್ರಚುರಪಡಿಸಲಾಗಿದೆ. ಅದನ್ನು ಶೇ 100ಕ್ಕೆ ಹೆಚ್ಚಿಸಲು ಪ್ರಯತ್ನ ನಡೆಸಬೇಕು. ಇದಕ್ಕೆ ಕೇವಲ ಸರ್ಕಾರದ ಅನುದಾನ ಸಾಕಾಗುವುದಿಲ್ಲ. ಎಲ್ಲರ ಮಾರ್ಗದರ್ಶನ, ಸಲಹೆ ಹಾಗೂ ಸಹಕಾರ ಬೇಕು. ವಿವಿಧ ದೇಶಗಳ ಮಾದರಿ ಅನುಸರಿಸಬಹುದು, ಅದಕ್ಕಾಗಿ ವಿವಿಧ ಸಂಘ ಸಂಸ್ಥೆಗಳ ತಜ್ಞರನ್ನು ಒಳಗೊಂಡು ವಿಷನ್‌ ಸಮಿತಿ ರಚಿಸಿ, ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವ ಸಲ್ಲಿಸಿ ಎಂದು ಸಲಹೆ ನೀಡಿದರು.

‘ಜಿಲ್ಲೆಯ ಪ್ರವಾಸೋದ್ಯಮ ಸಂಬಂಧ ಕ್ಯಾಲೆಂಡರ್‌ ರಚಿಸಿಕೊಂಡು ಪ್ರವಾಸಿಗರಿಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಬೇಕು. ವಿವಿಧ ಕಾರ್ಯಕ್ರಮಗಳ ಮಾಹಿತಿ ಇರಬೇಕು. ಈಗ ಇರುವ ‘ವಿಸಿಟ್‌ ಮೈಸೂರು’ ಆ್ಯಪ್‌ಅನ್ನು ಪ್ರಚುರಪಡಿಸಿಬೇಕು’ ಎಂದು ತಿಳಿಸಿದರು.
ಸಭೆಯಲ್ಲಿ ಪ್ರಮುಖವಾಗಿ ಅರಮನೆ ಹಾಗೂ ಮೃಗಾಲಯದ ಸಮಯ ವಿಸ್ತರಣೆಗೆ ಹಾಗೂ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಸಂಬಂಧ ಒಕ್ಕೂರಲಿನ ಸಲಹೆಗಳು ಮೂಡಿಬಂದವು.

ಸೇಫ್‌ ವ್ಹೀಲ್ಸ್‌ನ ಪ್ರಶಾಂತ್‌ ಮಾತನಾಡಿ, ಅರಮನೆಯ ಪೊಲೀಸ್‌ ಬ್ಯಾಂಡ್‌ ಕೇವಲ ಪ್ರಮುಖ ಕಾರ್ಯಕ್ರಮಗಳಿಗಷ್ಟೇ ಸೀಮಿತವಾಗಿದೆ. ಅದನ್ನು ನಿತ್ಯ ಬಳಸಿಕೊಳ್ಳಲು ಗಮನಹರಿಸಬೇಕು. ಸಂಜೆ ಆರು ಗಂಟೆಗೆ ಅರಮನೆ ಮುಂಭಾಗ ಪಥಸಂಚಲನದ ಮೂಲಕ ಪೊಲೀಸ್‌ ಬ್ಯಾಂಡ್‌ ನುಡಿಸುವ ವ್ಯವಸ್ಥೆ ಮಾಡಬೇಕು. ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿದರೆ ರಾತ್ರಿ ವೇಳೆಯೂ ಪ್ರವಾಸಿಗರು ನಗರದಲ್ಲಿಯೇ ವಾಸ್ತವ್ಯ ಹೂಡುತ್ತಾರೆ ಎಂದರು.

ನಗರ ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಅರಮನೆ ಹಾಗೂ ಮೃಗಾಲಯಕ್ಕೆ ಭೇಟಿ ಸಮಯವನ್ನು ರಾತ್ರಿ 10 ಗಂಟೆವರೆಗೆ ವಿಸ್ತರಿಸಬೇಕು. ಅರಮನೆಯ ಸುತ್ತ ಉದ್ಯಾನ ಅಭಿವೃದ್ಧಿಪಡಿಸಬೇಕು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಂದೀಪ್‌, ವಾರಕ್ಕೆ ಒಮ್ಮೆ ಪೊಲೀಸ್‌ ಬ್ಯಾಂಡ್‌ ನುಡಿಸಲು ವ್ಯವಸ್ಥೆ ಮಾಡಲಾಗುವುದು. ಪ್ರವಾಸಿಗರ ಬೇಡಿಕೆಗೆ ತಕ್ಕಂತೆ ಅರಮನೆಯನ್ನು ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗುವುದು. ಪುರಭವನದ ಬಯಲು ರಂಗಮಂದಿರ (ಆ್ಯಂಫಿ ಥಿಯೇಟರ್‌) ಕಾಮಗಾರಿ ಮುಗಿಯುತ್ತಿದ್ದು, ಅಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅನುವು ಮಾಡಿ ಕೊಡಲಾಗುವುದು ಎಂದು ಹೇಳಿದರು.

ಪ್ರವಾಸೋದ್ಯಮ ತಜ್ಞ ಪ್ರೊ.ನಾಗಪತಿ, ‘ಜಿಲ್ಲೆಯ ಹೊಸ ತಾಣಗಳನ್ನು ಪರಿಚಯಿಸುವ ಅವಶ್ಯ­ವಿದೆ. ಅಲ್ಲದೆ, ಸಾಹಸ ಕ್ರೀಡೆಗಳ ಮೂಲಕ ಪ್ರವಾಸಿಗರನ್ನು ಸೆಳೆಯ­ಬಹುದು. ಅದಕ್ಕಾಗಿ ಯೋಗ, ಸಾಂಸ್ಕೃತಿಕ, ಸಾಹಸ ಕ್ರೀಡೆ ಸೇರಿದಂತೆ ಹಲವು ಗುಂಪುಗಳನ್ನು ರಚಿಸಿ ವಿಷನ್‌ ಸಮಿತಿ ರಚಿಸಬೇಕು. ಒಂದು ತಿಂಗಳಲ್ಲಿ ಸಮಿತಿ ವರದಿ ನೀಡಬೇಕು. ವರದಿಯಂತೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಶ್ರೀಹರಿ ಮಾತನಾಡಿ, ಜೂನ್‌ 21ಕ್ಕೆ ವಿಶ್ವ ಯೋಗಾ ದಿನಾಚರಣೆ ನಡೆಯಲಿದೆ. ಅದಕ್ಕೆ ಸುಮಾರು 45 ಸಾವಿರ ಜನರನ್ನು ಸೇರಿಸಬೇಕು. ಜಿಲ್ಲೆಯ ಎಲ್ಲಾ ಶಾಲಾ ಮಕ್ಕಳು ಭಾಗವಹಿಸಲು ಡಿಡಿಪಿಐ ಮೂಲಕ ಸೂಚನೆ ನೀಡಬೇಕು ಎಂದರು.
ಪಾಲಿಕೆ ಆಯುಕ್ತ ಜಿ.ಜಗದೀಶ್‌, ಎಂಜಿನಿಯರ್‌ ಸುರೇಶ್‌ ಬಾಬು, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜನಾರ್ದನ್‌ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿನ ಪ್ರವಾಸೋದ್ಯಮ ತಜ್ಞರು ಇದ್ದರು.

ಪ್ರಮುಖ ಸಲಹೆಗಳು...

- ಅರಮನೆ, ಮೃಗಾಲಯಕ್ಕೆ ಭೇಟಿಯನ್ನು ರಾತ್ರಿ 10 ಗಂಟೆವರೆಗೆ ವಿಸ್ತರಿಸಬೇಕು
- ಸಂಜೆ ವೇಳೆ ನಿತ್ಯ ಪೊಲೀಸ್‌ ಬ್ಯಾಂಡ್‌ ನುಡಿಸಬೇಕು
- ಪುರಭವನ, ಅರಮನೆ ಆವರಣದಲ್ಲಿ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಬೇಕು
- ಜಿಲ್ಲೆಗೆ ಪ್ರವಾಸೋದ್ಯಮ ರಾಯಭಾರಿ ನೇಮಿಸಬೇಕು
- ಸಾಹಸ ಕ್ರೀಡೆಗಳ ಮೂಲಕ ಪ್ರವಾಸಿಗರನ್ನು ಆಕರ್ಷಿಸಬೇಕು
- ಕೆಆರ್ಎಸ್‌ ಉದ್ಯಾನದ ನಿರ್ವಹಣೆಗೆ ಒತ್ತು ನೀಡಬೇಕು
- ಅರಮನೆಯ ಯುಗಾದಿ ಉತ್ಸವ ಮತ್ತೆ ಆರಂಭಿಸಬೇಕು
- ಅರಮನೆಯನ್ನು ನಿತ್ಯ ಅರ್ಧ ಗಂಟೆ ವಿದ್ಯುತ್‌ ದೀಪಗಳಿಂದ ಅಲಂಕರಿಸಬೇಕು
- ಪ್ರವಾಸೋದ್ಯಮ ಮಾಹಿತಿಗೆ ಡಿಜಿಟಲ್‌ ವೇದಿಕೆ ಕಲ್ಪಿಸಬೇಕು
- ವಿಷನ್‌ ಸಮಿತಿ ರಚಿಸಿ ಸಲಹೆ ಪಡೆಯಬೇಕು
- ಪ್ರವಾಸಿ ಕ್ಯಾಲೆಂಡರ್‌ ರಚಿಸಬೇಕು
- ಪ್ಯಾಕೇಜ್‌ ಟೂರಿಸಂ ಪ್ರೋತ್ಸಾಹಿಸಬೇಕು
- ಹಾಪ್‌ ಆನ್‌ ಹಾಪ್‌ ಆಫ್‌, ಓಪನ್‌ ಏರ್‌ ಸಾರಿಗೆ ವ್ಯವಸ್ಥೆ ಮತ್ತೆ ಜಾರಿಗೆ ತರಬೇಕು
- ಜನಪದ ಸೊಗಡನ್ನು ಪ್ರವಾಸಿಗರಿಗೆ ಉಣ ಬಡಿಸಬೇಕು
- ವಿಶ್ವ ಯೋಗಾಸನ ದಿನಾಚರಣೆಗೆ ಈಗಿನಿಂದಲೇ ಸಿದ್ಧತೆ ನಡೆಸಬೇಕು
- ನಗರದಲ್ಲಿ ಒಮ್ಮೆಗೇ ವಿವಿಧ ರಸ್ತೆಗಳ ಕಾಮಗಾರಿ ನಡೆಸಬಾರದು
- ಪ್ರವಾಸಿಗರನ್ನು ಸೆಳೆಯಲು ಸಂಜೆಯ ಅವಧಿಯಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಬೇಕು
- ‘ವಿಸಿಟ್‌ ಮೈಸೂರು’ ಆ್ಯಪ್‌ ಪ್ರಚುರಪಡಿಸಬೇಕು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.