ADVERTISEMENT

ಉಪವಿಭಾಗಾಧಿಕಾರಿಗೆ ರೈತರ ದಿಗ್ಬಂಧನ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2016, 9:57 IST
Last Updated 5 ಡಿಸೆಂಬರ್ 2016, 9:57 IST

ಮೈಸೂರು: ಕಬಿನಿ ನಾಲೆಗೆ ನೀರು ಹರಿಸುವಂತೆ ಒತ್ತಾಯಿಸಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರ ಮನೆ ಎದುರು ಪ್ರತಿಭಟನೆ ನಡೆಸುತ್ತಿದ್ದ ರೈತರ ಮನವಿ ಸ್ವೀಕರಿಸಲು ಧಾವಿಸಿದ್ದ ಉಪವಿಭಾಗಾಧಿಕಾರಿ ಸಿ.ಎಲ್‌.ಆನಂದ ಅವರಿಗೆ ದಿಗ್ಬಂಧನ ಹಾಕಿದ ಘಟನೆ ಭಾನುವಾರ ನಡೆಯಿತು.

ದೂರವಾಣಿ ಮೂಲಕ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಅವರನ್ನು ಸಂಪರ್ಕಿಸಿದ ರೈತರು, ಜಿಲ್ಲಾಧಿಕಾರಿ ಡಿ.ರಂದೀಪ್‌ ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದರು. ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಲು ಡಿ. 6ರಂದು ಸಭೆ ಕರೆಯುವುದಾಗಿ ಜಿಲ್ಲಾಡಳಿತ ಭರವಸೆ ನೀಡಿದ ಬಳಿಕ ಕಬ್ಬು ಬೆಳೆಗಾರರು ಪ್ರತಿಭಟನೆ ಹಿಂಪಡೆದರು.

ವಿಜಯನಗರದಲ್ಲಿರುವ ಸಚಿವರ ಮನೆ ಎದುರು ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಜಮಾಯಿಸಿದ 50ಕ್ಕೂ ಹೆಚ್ಚು ರೈತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕಬಿನಿ ಅಚ್ಚುಕಟ್ಟು ಪ್ರದೇಶದಲ್ಲಿ ಒಂದು ಲಕ್ಷ ಎಕರೆ ಭೂಮಿಯಲ್ಲಿ ಭತ್ತ ಬೆಳೆಯಲಾಗಿದೆ. ಭತ್ತ ಕಾಳು ಕಟ್ಟಿದ್ದು, ಇನ್ನೊಂದು ನೀರಿನ ಅಗತ್ಯವಿದೆ. ನೀರಿಲ್ಲದೇ ಫಸಲು ನಾಶವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಳೆಯ ಕೊರತೆಯಿಂದಾಗಿ ಮೂರು ವರ್ಷಗಳಿಂದ ರೈತರಿಗೆ ಬೆಳೆ ಬಂದಿಲ್ಲ. ಸಾಲ ಮಾಡಿ ನಾಟಿ ಮಾಡಿದ ಭತ್ತವೂ ಕೈತಪ್ಪುವ ಆತಂಕ ಎದುರಾಗಿದೆ. ಜಲಾಶಯದಲ್ಲಿ ನೀರಿದ್ದರೂ ಸರ್ಕಾರ ರೈತರ ಬೆಳೆ ಉಳಿಸಲು ಆಸಕ್ತಿ ತೋರುತ್ತಿಲ್ಲ. ಇದರಿಂದ ಕಂಗಾಲಾದ ರೈತರು ಆತ್ಮಹತ್ಯೆಯ ಹಾದಿ ಹಿಡಿಯುವ ಸಾಧ್ಯತೆ ಇದೆ ಎಂದರು.

ಪ್ರತಿಭಟನಾಕಾರರ ಅಹವಾಲು ಆಲಿಸಲು ಉಪವಿಭಾಗಾಧಿಕಾರಿ ಆನಂದ ಧಾವಿಸಿದರು. ‘ಸಚಿವರು ಬೆಂಗಳೂರಿ­ನಲ್ಲಿದ್ದಾರೆ. ಅವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು. ಇದಕ್ಕೆ ತೃಪ್ತರಾಗದ ರೈತರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದರು. ನಾಲೆಗೆ ನೀರು ಬಿಡುವವರೆಗೂ ಅಧಿಕಾರಿ ತೆರಳಲು ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು. ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನಾಕಾರರ ಮನವೊಲಿಸಿದರು.

ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌, ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್‌, ಕಿರಗೂರು ಶಂಕರ್‌, ಹಳ್ಳಿಕೆರೆಹುಂಡಿ ಭಾಗ್ಯರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.