ADVERTISEMENT

ಎಪಿಎಂಸಿ ಚುನಾವಣೆ; ಮತದಾನ ಇಂದು

​ಪ್ರಜಾವಾಣಿ ವಾರ್ತೆ
Published 16 ಜನವರಿ 2017, 6:32 IST
Last Updated 16 ಜನವರಿ 2017, 6:32 IST
ಎಪಿಎಂಸಿ ಚುನಾವಣೆ; ಮತದಾನ ಇಂದು
ಎಪಿಎಂಸಿ ಚುನಾವಣೆ; ಮತದಾನ ಇಂದು   

ಮೈಸೂರು: ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಜ. 16ರಂದು ಸೋಮವಾರ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆವರೆಗೆ 855 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.

ಮೈಸೂರು ಕಸಬಾ, ನಂಜನಗೂಡು, ತಿ.ನರಸೀಪುರ, ಹುಣಸೂರು, ಕೆ.ಆರ್.ನಗರ, ಪಿರಿಯಾಪಟ್ಟಣ ಹಾಗೂ ಎಚ್.ಡಿ.ಕೋಟೆ ತಾಲ್ಲೂಕಿನ ಸಂತೆ ಸರಗೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಚುನಾವಣೆ ನಡೆಯಲಿದ್ದು , ಒಟ್ಟು 7,01,353 ಮತದಾರರು ಇದ್ದಾರೆ.

ಮೈಸೂರು ತಾಲ್ಲೂಕಿನ  ಮಸ್ಟರಿಂಗ್ ತಾಲ್ಲೂಕು ಕಚೇರಿಯಲ್ಲಿ ಡಿ–ಮಸ್ಟರಿಂಗ್ ಮತ್ತು ಎಣಿಕೆ ಕಾರ್ಯ ನಜರ್‌ಬಾದ್‌ನಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಇತರೆ ತಾಲ್ಲೂಕಿಗೆ ಸಂಬಂಧಿಸಿದಂತೆ ಮಸ್ಟರಿಂಗ್, ಡಿ–ಮಸ್ಟರಿಂಗ್ ಹಾಗೂ ಎಣಿಕೆ ಕಾರ್ಯ ನಂಜನಗೂಡು ತಾಲ್ಲೂಕಿನ ಊಟಿ ರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜು, ತಿ.ನರಸೀಪುರ ವಿದ್ಯೋದಯ ಶಿಕ್ಷಣ ಸಂಸ್ಥೆ, ಹುಣಸೂರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಕೆ.ಆರ್.ನಗರ ಸರ್ಕಾರಿ ಪ್ರಥಮದರ್ಜೆ ಕಾಲೇಜು, ಪಿರಿಯಾಪಟ್ಟಣದ ತಾಲ್ಲೂಕು ಕಚೇರಿ ಹಾಗೂ ಎಚ್.ಡಿ.ಕೋಟೆ ತಾಲ್ಲೂಕಿನ ಸೆಂಟ್ ಮೇರಿಸ್ ಶಾಲೆಯಲ್ಲಿ ನಡೆಯಲಿದೆ.

ಪ್ರತಿ ಮತಗಟ್ಟೆಗೆ ಒಬ್ಬರು ಅಧ್ಯಕ್ಷಾಧಿಕಾರಿ ಹಾಗೂ ಇಬ್ಬರು ಮತಗಟ್ಟೆ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸಿಬ್ಬಂದಿಯನ್ನು ಮತಗಟ್ಟಗಳಿಗೆ ಕರೆದೊಯ್ಯಲು ಒಟ್ಟು 107 ಕೆಎಸ್ಆರ್‌ಟಿಸಿ ಬಸ್‌ಗಳ ವ್ಯವಸ್ಥೆ  ಮಾಡಲಾಗಿದೆ. ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿ ಅಥವಾ ಚುನಾವಣಾ ಆಯೋಗ ನಿಗದಿಪಡಿಸಿರುವ ಇತರ 21 ದಾಖಲಾತಿಗಳನ್ನು ಹಾಜರುಪಡಿಸಿ ಮತದಾನ ಮಾಡಬಹುದು.

ಜ. 18ರಂದು ಬೆಳಿಗ್ಗೆ 8 ಗಂಟೆಯಿಂದ ತಾಲ್ಲೂಕು ಕೇಂದ್ರದಲ್ಲಿ ಮತ ಎಣಿಕೆ ಆರಂಭವಾಗುತ್ತದೆ. ಚುನಾವಣೆ ಆಯಾ ತಾಲ್ಲೂಕಿನ ತಹಶೀಲ್ದಾರ್ ಅವರನ್ನು ಎಪಿಎಂಸಿ ಚುನಾವಣೆಯ ಚುನಾವಣಾ ಧಿಕಾರಿಯಾಗಿ ನೇಮಿಸಲಾಗಿದೆ.

11 ಕ್ಷೇತ್ರಗಳಿಗೆ ಚುನಾವಣೆ
ತಿ.ನರಸೀಪುರ:   ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 13 ಕ್ಷೇತ್ರಗಳಲ್ಲಿ  11 ಕ್ಷೇತ್ರಗಳಿಗೆ ಸೋಮವಾರ ಚುನಾವಣೆ ನಡೆಯಲಿದ್ದು, ಇಬ್ಬರು ನಿರ್ದೇಶಕರು ಅವಿರೋಧ ಆಯ್ಕೆಯಾಗಿದ್ದಾರೆ.

ತಾಲ್ಲೂಕಿನಲ್ಲಿ 11 ಕೃಷಿಕರ ಕ್ಷೇತ್ರ, ಒಂದು ಕಮಿಷನ್‌ ಏಜೆಂಟರು ಮತ್ತು ವರ್ತಕರ ಕ್ಷೇತ್ರ ಹಾಗೂ ಮತ್ತೊಂದು ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ಸಂಘ ಕ್ಷೇತ್ರ ಸೇರಿದಂತೆ  ಒಟ್ಟು 13 ಕ್ಷೇತ್ರಗಳಿವೆ.

ಕೃಷಿಕರ ಕ್ಷೇತ್ರ ಮೂಗೂರು (ಸಾಮಾನ್ಯ) ಮಹಿಳಾ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಗದಾಂಬ  ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ಸಂಘ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಎಸ್.ರಾಜಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ 38 ಮಂದಿ ಕಣದಲ್ಲಿ ಉಳಿದಿದ್ದು,  9 ಬಿಜೆಪಿ ಬೆಂಬಲಿತ  11 ಕಾಂಗ್ರೆಸ್‌ ಬೆಂಬಲಿತ , 8 ಜೆಡಿಎಸ್ ಬೆಂಬಲಿತ  ಹಾಗೂ 10 ಮಂದಿ ಪಕ್ಷೇತರರಾಗಿದ್ದಾರೆ.  ಸೋಮವಾರ ಅವರ ಭವಿಷ್ಯ ನಿರ್ಧಾರವಾಗಲಿದೆ.

ಬನ್ನೂರು, ಕೊಡಗಹಳ್ಳಿ,  ತುರುಗನೂರು,  ಸೋಮನಾಥಪುರ,  ಚಿದರವಳ್ಳಿ,  ಸೋಸಲೆ, ತಲಕಾಡು, ಕಲಿಯೂರು , ಆಲಗೂಡು  ರಂಗ ಸಮುದ್ರ ಹಾಗೂ  ಕಮಿಷನ್ ಏಜೆಂಟರುಗಳು ಮತ್ತು ವ್ಯಾಪಾರಿಗಳ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

13 ಕ್ಷೇತ್ರಗಳಿಗೆ
ನಂಜನಗೂಡು: ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 13 ಕ್ಷೇತ್ರಗಳಿಗೆ ಜ.16ರಂದು ನಡೆಯುವ ಚುನಾವಣೆಗೆ ಒಟ್ಟು 152 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್‌ ಎಂ.ದಯಾನಂದ್ ಭಾನುವಾರ ತಿಳಿಸಿದರು.

ತಾಲ್ಲೂಕಿನಲ್ಲಿ  1,37,040 ಮಂದಿ ಮತದಾರು ಮತ ಚಲಾಯಿಸಿಲಿದ್ದು. ಮತದಾನದ ಸಮಯ ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಎಂದು ಹೇಳಿದರು.
152 ಮತಗಟ್ಟೆಗಳಿಗೆ ತಲಾ 4ಮಂದಿ ಒಟ್ಟು 608 ಮಂದಿಯನ್ನುಚುನಾವಣಾ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಉಪ ವಿಭಾಗಾಧಿಕಾರಿ ಆನಂದ್ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಚುನಾವಣಾ ಪೂರ್ವಸಿದ್ಧತೆಗಳ ಕುರಿತು ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.