ADVERTISEMENT

ಕಾನೂನು ತೊಡಕು ಬಿಚ್ಚಿಟ್ಟ ವಿವಾಹ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2017, 9:13 IST
Last Updated 11 ಏಪ್ರಿಲ್ 2017, 9:13 IST

ಮೈಸೂರು: 19ರ ಹರೆಯದ ಯುವಕ ನೊಬ್ಬ 21 ವರ್ಷದ ಯುವತಿಯನ್ನು ವರಿಸಿದ ಪ್ರಕರಣವೊಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸರನ್ನು ಪೇಚಿಗೆ ಸಿಲುಕಿಸಿದೆ. ಕಾನೂನು ಮಾನ್ಯತೆ ಇಲ್ಲದ ವಯಸ್ಸಿನಲ್ಲಿ ಹಸೆಮಣೆ ಏರಿದವರ ವಿರುದ್ಧ ಕೈಗೊಳ್ಳುವ ಕ್ರಮದ ಕುರಿತು ಜಿಜ್ಞಾಸೆ ಶುರುವಾಗಿದೆ.

ಇಂತಹದೊಂದು ಪ್ರಸಂಗ ಸೋಮವಾರ ಬೆಳಕಿಗೆ ಬಂದಿದೆ. ಯುವಕನಿಗೆ ಒತ್ತಾಯಪೂರ್ವಕವಾಗಿ ಮದುವೆ ಮಾಡಿಸಲಾಗಿದೆ ಎಂದು ಆರೋಪಿಸಿ ಆತನ ಸಹೋದರ ಮಂಡಿ ಠಾಣೆ ಮೆಟ್ಟಿಲೇರಿದ್ದಾರೆ. ಆದರೆ, ಯಾವ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂಬುದು ಪೊಲೀಸರಿಗೆ ಸ್ಪಷ್ಟವಾಗಿಲ್ಲ.

ಬಂಬೂಬಜಾರಿನ ಯುವತಿ ಹಾಗೂ ಕುಂಬಾರಕೊಪ್ಪಲಿನ ಯುವಕ ಎರಡು ವರ್ಷಗಳಿಂದ ಪರಿಚಿತರು. ಯಾದವಗಿರಿಯ ಕಾರ್ಖಾನೆಯೊಂದ ರಲ್ಲಿ ಮಾಸಿಕ ₹ 3 ಸಾವಿರ ಸಂಬಳಕ್ಕೆ ಕೆಲಸ ಮಾಡುತ್ತಿರುವ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಬೆಲವತ್ತದ ಮಂಟಿಯ ಸ್ನೇಹಿತರ ಮನೆಯಲ್ಲಿ ಇಬ್ಬರು ಆಗಾಗ ಸೇರಿದ್ದಾರೆ. ಈ ವಿಚಾರ ಯುವತಿಯ ತಾಯಿಗೆ ತಿಳಿದು, ಅವರನ್ನು ಮನೆಗೆ ಕರೆಸಿ ಬುದ್ಧಿವಾದ ಹೇಳಿದ್ದಾರೆ.

ADVERTISEMENT

ಈ ವೇಳೆ ಕುಪಿತಗೊಂಡ ಯುವತಿಯ ಸಂಬಂಧಿಕರು ಪ್ರಿಯಕರ ನನ್ನು ಹಿಡಿದು ಮಂಡಿ ಠಾಣೆಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಿಯತಮೆ, ಆತನನ್ನು ವರಿಸುವುದಾಗಿ ಪೊಲೀಸರ ಬಳಿ ಹೇಳಿಕೆ ನೀಡಿದ್ದಾರೆ. ಆತ ವಯಸ್ಕನಲ್ಲದ ಪರಿಣಾಮ ಎರಡೂ ಕುಟುಂಬದವರನ್ನು ಕರೆಸಿದ ಪೊಲೀಸರು ಕಿವಿಮಾತು ಹೇಳಿ ಕಳುಹಿಸಿ ದ್ದಾರೆ. ಮದುವೆಯಾಗಲು ಇನ್ನೂ ಎರಡು ವರ್ಷ ಕಾಯುವಂತೆ ಎಚ್ಚರಿಕೆ ನೀಡಿದ್ದಾರೆ.

ಇದಕ್ಕೆ ಮಣಿಯದ ಜೋಡಿ ಭಾನು ವಾರ ಬೆಳಿಗ್ಗೆ ಮಂಡಿ ಮೊಹಲ್ಲಾದ ಸತ್ಯನಾರಾಯಣ ದೇಗುಲದಲ್ಲಿ ವಿವಾಹ ವಾಗಿದ್ದಾರೆ. ಇದೊಂದು ಬಾಲ್ಯವಿವಾಹವೆಂದು ಕೆಲವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೂ ದೂರು ನೀಡಿದ್ದಾರೆ. ಸಿಬ್ಬಂದಿ ಸ್ಥಳಕ್ಕೆ ಧಾವಿಸುವ ಹೊತ್ತಿಗೆ ನವದಂಪತಿ ದೇಗುಲದಲ್ಲಿ ಪತ್ತೆಯಾಗಿಲ್ಲ.
‘ಬಾಲಕಿಯರನ್ನು ದೃಷ್ಟಿಯಲ್ಲಿಟ್ಟು ಕೊಂಡು ಬಾಲ್ಯ ವಿವಾಹ ಕಾಯ್ದೆಯನ್ನು ರೂಪಿಸಲಾಗಿದೆ. ವಿವಾಹದ ವಯಸ್ಸು ವರನಿಗೆ 21 ಆಗಿರಬೇಕು ಎಂಬುದನ್ನು ಮಾತ್ರ ಹೇಳಿದೆ. ಆದರೆ, ಅದಕ್ಕಿಂತಲೂ ಮೊದಲು ಮದುವೆಯಾಗುವ ಯುವಕನ ಪ್ರಕರಣವನ್ನು ಹೇಗೆ ನಿಭಾಯಿಸಬೇಕು ಎಂಬುದು ಸ್ಪಷ್ಟವಾಗಿಲ್ಲ’ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಬ್ಬಂದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.