ADVERTISEMENT

ಕೆಡಿಪಿ ಸಭೆ: ಅಧಿಕಾರಿಗಳನ್ನು ಬೆಂಡೆತ್ತಿದ ಸಿ.ಎಂ!

ಕೆರೆ ಭರ್ತಿ ಮಾಡಿ* ವಾಸು– ಪ್ರಸಾದ್‌ ಮಾತಿನ ಚಕಮಕಿ * ಕಬಿನಿ ಯೋಜನೆ ಮುಗಿಸಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2014, 10:52 IST
Last Updated 6 ಆಗಸ್ಟ್ 2014, 10:52 IST

ಮೈಸೂರು: ‘ನಿಮ್ಮಂತವರು ಸರ್ಕಾರಿ ನೌಕರಿಗೆ ಯಾಕೆ ಬರ್ತೀರಿ. ಬಿಟ್ಟು ಹೋಗ್ರಿ. ಇಂತಹ ಬೇಜವಾಬ್ದಾರಿ ವರ್ತನೆ ಸಹಿಸಲ್ಲ. ಅನುಪಾಲನಾ ವರದಿ ಬರೆಯಲೂ ಬರುವುದಿಲ್ಲ ನಿಮಗೆ’–
ಮಂಗಳವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಬೆಳಿಗ್ಗೆ ಕೃಷಿ ಇಲಾಖೆಯಿಂದ ಆರಂಭಿಸಿದ ಅವರು ಅನುಪಾಲನ ವರದಿ ನೀಡಿದ ಅಧಿಕಾರಿಯ ವಿರುದ್ಧ ತೀವ್ರ ಅಸಮಾಧಾನಗೊಂಡರು. ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 9.30ರವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹುತೇಕ ಎಲ್ಲ ಇಲಾಖೆಯ ಅಧಿಕಾರಿಗಳಿಗೂ ಬಿಸಿ ಮುಟ್ಟಿಸಿದರು.

‘ನಾಲ್ಕು ತಿಂಗಳ ಹಿಂದೆ ನಡೆದ ಸಭೆಯಲ್ಲಿ ನಾನು ಸೂಚಿಸಿದ ವಿಷಯಗಳಿಗೆ ಸರಿಯಾದ ಕ್ರಮ ಜರುಗಿಲ್ಲ’ ಎಂದು ಸಿಡಿಮಿಡಿಗೊಂಡ ಸಿಎಂ, ‘ನಿಮ್ಮ ಅಧಿಕಾರಿಗಳು ಹಳ್ಳಿಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಮಾಲೋಚನೆ ನಡೆಸಿರುವ ಕುರಿತು ವರದಿ ಎಲ್ಲಿದೆ’ ಎಂದು ಕೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ಎಂ. ಮಹಾಂತೇಶಪ್ಪ, ‘ನಮ್ಮ ಅಧಿಕಾರಿಗಳು ಹೋಗಿದ್ದಾರೆ. ದಿನಚರಿ ಪುಸ್ತಕದಲ್ಲಿ ಬರೆದಿದ್ದಾರೆ’ ಎಂದರು.

‘ದಿನಚರಿ ಪುಸ್ತಕ ಎಲ್ಲಿದೆ. ಅದರ ಸಾರಾಂಶ ಮಾಡಿದ ವರದಿ ಎಲ್ಲಿದೆ ತೋರಿಸಿ’ ಎಂದು ಸಿಎಂ ಕೇಳಿದಾಗ, ‘ಈಗ ತಂದಿಲ್ಲ ಸಾರ್, ಇನ್ನು ಹತ್ತು ನಿಮಿಷದಲ್ಲಿ ತರಿಸುತ್ತೇನೆ’ ಎಂದು ಅಧಿಕಾರಿ ಹೇಳಿದಾಗ ತೀವ್ರ ಅಸಮಾಧಾನಗೊಂಡರು. ‘ನಿಮ್ಮ ಬೇಜವಾಬ್ದಾರಿತನ ನಿಮ್ಮ ಉತ್ತರದಿಂದ ಕಂಡುಬರುತ್ತಿದೆ. ನಿಮ್ಮ ಅಧಿಕಾರಿಗಳು ಹೋಗಿರುವ ಬಗ್ಗೆಯೂ ನಿಮಗೆ ಗೊತ್ತಿಲ್ಲ. ನೀವೂ ರೈತರ ಬಳಿ ಹೋಗಿರುವ ಕುರಿತು ವರದಿಯಿಲ್ಲ. ನೀವು ಹೇಳಿದ್ದನ್ನು ಕೇಳಿ ನಾವು ಎದ್ದು ಹೋಗಬೇಕಾ. ಕಚೇರಿಯಲ್ಲಿ ಕುಳಿತು ಕೃಷಿ ಮಾಡ್ತೀರಾ. ಹೊಲಗಳಿಗೆ ಹೋಗಿ ರೈತರ ಕಷ್ಟ–ಸುಖ ಕೇಳಿದ್ದೀರಾ. ನಿಮ್ಮ ಅಧಿಕಾರಿಗಳಾದರೂ ಹೋಗಿದ್ದಾರೆಯೇ, ನನ್ನದೇ ಕ್ಷೇತ್ರವಾದ ನಂಜನಗೂಡು ತಾಲ್ಲೂಕಲ್ಲಿ ಮಾಡಿದ ಬಗ್ಗೆ ನನಗೆ ಅಥವಾ ಅಲ್ಲಿಯ ಶಾಸಕ ಶ್ರೀನಿವಾಸಪ್ರಸಾದ್ ಅವರಿಗೆ ವರದಿ ಕೊಟ್ಟಿದ್ದೀರಾ. ಮುಂದಿನ ಬಾರಿ ಸರಿಯಾದ ವರದಿ ತರದೇ ಹೋದರೆ ಶಿಸ್ತು ಕ್ರಮ ಜರುಗಿಸಿ, ಅಮಾನತು ಮಾಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಕೆರೆ ಭರ್ತಿ ಮಾಡಿ: ‘ಈ ಮಳೆಗಾಲದಲ್ಲಿ ಎಲ್ಲ ಜಲಾಶಯಗಳು ತುಂಬಿದ ಕೂಡಲೇ ಜಿಲ್ಲೆಯ ಎಲ್ಲ ಕೆರೆಗಳಿಗೂ ನೀರು ತುಂಬಿಸಿಬಿಡಿ. ಇದರಿಂದ ಗ್ರಾಮಗಳು, ರೈತರಿಗೆ ಅನುಕೂಲವಾಗುತ್ತದೆ’ ಎಂದು ಸಿದ್ದರಾಮಯ್ಯ ಸೂಚಿಸಿದರು. ಹುಣಸೂರು ಶಾಸಕ ಎಚ್‌.ಪಿ. ಮಂಜುನಾಥ್ ಅವರು ಬೋರ್‌ವೆಲ್ ಕೊರೆಸುವುದು ಅವೈಜ್ಞಾನಿಕ, ಕೆರೆ, ಬಾವಿಗಳಿಗೆ ನೀರು ಮರುಪೂರಣ ಮಾಡುವುದೇ ಉತ್ತಮ ಎಂದು ನೀಡಿದ ಸಲಹೆಗೆ ಸಿಎಂ ಸ್ಪಂದಿಸಿದರು.

ಸಭೆಯಿಂದಲೇ ಆಹ್ವಾನ: ಬುಧವಾರ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರದಲ್ಲಿ (ಕೆಆರ್‌ಎಸ್) ಕಾವೇರಿ ನದಿಗೆ ಬಾಗಿನ ಅರ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಂಪುಟದ ಸಚಿವರಿಗೆ ಕೆಡಿಪಿ ಸಭೆಯಲ್ಲಿಯೇ ಕುಳಿತು ದೂರವಾಣಿ ಮೂಲಕ ಆಹ್ವಾನ ನೀಡಿದರು.
ನೀರಾವರಿ ಇಲಾಖೆಯ ಅಧಿಕಾರಿಗಳು ವೇದಿಕೆ ಮೇಲಿದ್ದ ಸಿಎಂ, ಗಣ್ಯರಿಗೆ ಆಹ್ವಾನ ಪತ್ರಿಕೆ ನೀಡಿದರು. ಇದನ್ನು ಗಮನಿಸಿದ ಸಿಎಂ ಎಲ್ಲರಿಗೂ ಹೇಳಿದ್ದೀರಾ. ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವರಿಗೆ, ಸಂಸದ, ಶಾಸಕರಿಗೆ ಹೇಳಿದ್ದೀರಾ ಎಂದು ಕೇಳಿದರು. ನಂತರ ದೂರವಾಣಿಯಲ್ಲಿ ಮಂಡ್ಯ ಜಿಲ್ಲಾಉಸ್ತುವಾರಿ ಸಚಿವ ಅಂಬರೀಶ್, ನೀರಾವರಿ ಸಚಿವ ಎಂ.ಬಿ. ಪಾಟೀಲ ಅವರಿಗೆ ಆಹ್ವಾನ ನೀಡಿದರು.

ಕೊಳವೆಬಾವಿ; ವರದಿ ನೀಡಲು ಸೂಚನೆ: ಮೈಸೂರು ಜಿಲ್ಲೆಯಲ್ಲಿ ಇರುವ ಕೊಳವೆಬಾವಿಗಳು, ನೀರಿಲ್ಲದೇ ಬಿಟ್ಟಿರುವ ಕೊಳವೆಬಾವಿಗಳ ಬಗ್ಗೆ ವರದಿ ತಯಾರಿಸಿ ಕೊಡಬೇಕು. ಎಲ್ಲಿಯೂ ತೆರೆದ ಕೊಳವೆಬಾವಿ ಬಿಡಬಾರದು. ಮುಚ್ಚಲು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಅವಘಡ ಘಟಿಸಿದರೆ, ಸಂಬಂಧಿತ ಅಧಿಕಾರಿಗಳು, ಗುತ್ತಿಗೆದಾರರು, ಖಾಸಗಿಯವರಾಗಿದ್ದರೆ ಅವರೆಲ್ಲರೂ ತಪ್ಪಿತಸ್ಥರಾಗುತ್ತಾರೆ. ಎಲ್ಲರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗುವುದು. ಬಾಗಲಕೋಟೆಯ ತಿಮ್ಮಣ್ಣ ಪ್ರಕರಣ ಬೇಸರದ ಸಂಗತಿಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.