ADVERTISEMENT

ಕೆಪಿಎಸ್‌ಸಿ; ಬಾಯಿಗೆ ಮಣ್ಣು ಹಾಕಬೇಡಿ

ಮುಖ್ಯಮಂತ್ರಿಗೆ ಸಿ.ಎಸ್‌. ದ್ವಾರಕಾನಾಥ್‌ ಮನವಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2014, 10:17 IST
Last Updated 28 ಜುಲೈ 2014, 10:17 IST
ಮೈಸೂರಿನ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಭಾನುವಾರ ಕಾಯಕಯೋಗಿ ಸಂಘಟನೆ ಏರ್ಪಡಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೆ ಕಾರ್ಯಕ್ರಮದಲ್ಲಿ ಸಿ.ಎಸ್‌. ದ್ವಾರಕಾನಾಥ್‌ ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಿಕೇತ್‌ ರಾಜ್‌, ಅರುಣ್‌ಕುಮಾರ್‌ ಕನ್ನೂರು,  ಸಿ. ನಾಗರಾಜು,  ಡಾ.ಶಿವಣ್ಣ, ಪುರುಷೋತ್ತಮ್‌, ಡಾ.ಮಾಲೇಗೌಡ ಇದ್ದಾರೆ
ಮೈಸೂರಿನ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಭಾನುವಾರ ಕಾಯಕಯೋಗಿ ಸಂಘಟನೆ ಏರ್ಪಡಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೆ ಕಾರ್ಯಕ್ರಮದಲ್ಲಿ ಸಿ.ಎಸ್‌. ದ್ವಾರಕಾನಾಥ್‌ ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ನಿಕೇತ್‌ ರಾಜ್‌, ಅರುಣ್‌ಕುಮಾರ್‌ ಕನ್ನೂರು, ಸಿ. ನಾಗರಾಜು, ಡಾ.ಶಿವಣ್ಣ, ಪುರುಷೋತ್ತಮ್‌, ಡಾ.ಮಾಲೇಗೌಡ ಇದ್ದಾರೆ   

ಮೈಸೂರು: ‘ಕೆಪಿಎಸ್‌ಸಿ ಪರೀಕ್ಷೆ ಬರೆದು ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸ­ಬೇಕಾದ 362 ಅಭ್ಯರ್ಥಿಗಳಿಗೆ ಅನ್ಯಾಯ­ವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅಭ್ಯರ್ಥಿಗಳ ಬಾಯಿಗೆ ಮಣ್ಣು ಹಾಕಬೇಡಿ. ಯಾರ ಮಾತನ್ನೂ ಕೇಳಬೇಡಿ. ದನಿ ಇಲ್ಲದ ಮಕ್ಕಳಿಗೆ ದನಿಯಾಗಿ’ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್‌. ದ್ವಾರಕಾನಾಥ್‌ ಮನವಿ ಮಾಡಿದರು.

ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಭಾನುವಾರ ಕಾಯಕಯೋಗಿ ಸಂಘಟನೆ ಏರ್ಪಡಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೆ ಕಾರ್ಯಕ್ರಮದಲ್ಲಿ ‘ಅಹಿಂದ ಹಾಗೂ ಸಾಮಾಜಿಕ ಹೊಣೆ’ ಕುರಿತು ಮಾತನಾಡಿದರು. ‘ಕೆಪಿಎಸ್‌ಸಿ ಪರೀಕ್ಷೆ ಬರೆದ 1.57 ಲಕ್ಷ ಅಭ್ಯರ್ಥಿಗಳ ಪೈಕಿ 362 ಮಂದಿ ಆಯ್ಕೆಯಾದರು. ಅಹಿಂದದಿಂದ ಹೆಚ್ಚು ಅಭ್ಯರ್ಥಿಗಳು ಆಯ್ಕೆ ಆಗಿದ್ದರಿಂದ ಮೇಲ್ವರ್ಗದವರು ಸಹಿಸಲಿಲ್ಲ.

ಹಣ ಕೊಟ್ಟು ಪರೀಕ್ಷೆ ಪಾಸು ಮಾಡಿದ್ದಾರೆ ಎಂಬ ಆರೋಪ ಬಂತು. ಆದರೆ, ಕೆಲವೇ ಶ್ರೀಮಂತರನ್ನು ಬಿಟ್ಟರೆ ಬಹುತೇಕ ಮಂದಿ ಬಡವರ್ಗದವರೇ ಆಗಿದ್ದರು. ಇದೀಗ ಅವರ ಜೀವನಕ್ಕೆ ಕೊಡಲಿ ಪೆಟ್ಟು ಬಿದ್ದಿದೆ. ಕಳೆ ಕೀಳಿ. ಆದರೆ, ಕಳೆ ಜತೆ ಬೆಳೆಯನ್ನು ಕೀಳಬೇಡಿ. ಹಣ ಕೊಟ್ಟು ಪರೀಕ್ಷೆ ಪಾಸು ಮಾಡಿದ ತಪ್ಪಿತಸ್ಥ ಅಭ್ಯರ್ಥಿಗಳಿಗೆ ಶಿಕ್ಷೆ ಆಗಲಿ. ಆದರೆ, ಬಡ ಮಕ್ಕಳಿಗೆ ಅನ್ಯಾಯ ಆಗುವುದನ್ನು ಸಹಿಸುವುದಿಲ್ಲ. ಆ ಮಕ್ಕಳಿಗೆ ಅನ್ಯಾಯವಾದರೆ ನಾನು ಯಾವ ಮಟ್ಟಕ್ಕೆ (ಒಳ್ಳೆತನದಲ್ಲಿ) ಇಳಿಯಲು ಸಿದ್ಧ’ ಎಂದು ಹೇಳಿದರು.

ಅಹಿಂದ ಚೆಂಡು ಗೋಲು ಪೆಟ್ಟಿಗೆಗೆ ತಂದದ್ದು ನಾವು: ‘ನಾನು, ಸಮಾನ ಮನಸ್ಕರು ಸೇರಿ ಅಹಿಂದ ಕಲ್ಪನೆಯನ್ನು ಹುಟ್ಟು ಹಾಕಿದೆವು. ಅಹಿಂದ ಚೆಂಡನ್ನು ಮೈದಾನದ ಗೋಲು ಪೆಟ್ಟಿಗೆವರೆಗೂ ತಂದೆವು. ಆದರೆ, ಗೋಲು ಹೊಡೆದದ್ದು ಮಾತ್ರ ಸಿದ್ದರಾಮಯ್ಯ. ನಂತರ ಫುಟ್ ಬಾಲ್ ವರ್ಲ್ಡ್‌ಕಪ್‌ ಗೆದ್ದೆವು. ಅಹಿಂದ ಕೂಗು ರಾಜ್ಯದಲ್ಲಿ ಪ್ರತಿಧ್ವನಿಸುತ್ತಿದ್ದಂತೆ ಬಲಿಷ್ಠ ಜಾತಿಗಳು ತಲ್ಲಣಗೊಂಡವು’ ಎಂದು ಅಹಿಂದ ಕುರಿತು ಮನದಾಳದ ಮಾತುಗಳನ್ನು ಹಂಚಿಕೊಂಡರು.

‘1931ರಿಂದ ಇಲ್ಲಿಯವರೆಗೆ ಜಾತಿವಾರು ಸಮೀಕ್ಷೆ ಆಗಿಲ್ಲ. ಹತ್ತು ವರ್ಷಗಳಿಗೊಮ್ಮೆ ಸಮೀಕ್ಷೆ ಆಗಬೇಕೆಂದಿದೆ. ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷನಾಗಿದ್ದ ವೇಳೆ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿತ್ತು. ಸಾದರ ಲಿಂಗಾಯಿತರಿಗೆ ಮೀಸಲಾತಿ ಕಲ್ಪಿಸಿಕೊಡುವ ವಿಚಾರದಲ್ಲಿ ನನ್ನನ್ನು ವಿರೋಧಿಸಿದರು. ಆಗ ಗಲಾಟೆ ಸಹ ಆಗಿತ್ತು. ಮೀಸಲಾತಿ ಕೇಳುವುದರಲ್ಲಿ ತಪ್ಪಿಲ್ಲ. ಮೀಸಲಾತಿ ನಮ್ಮ ಸಂವಿಧಾನ­ಬದ್ಧ ಹಕ್ಕು’ ಎಂದು ಹೇಳಿದರು.

ಯುವ ಮುಖಂಡ ನಿಕೇತ್‌ರಾಜ್‌ ಮಾತನಾಡಿ, ‘ಕಿತ್ತೂರು ಚನ್ನಮ್ಮನ ಬಲಗೈ ಬಂಟನಾಗಿದ್ದ ಸಂಗೊಳ್ಳಿ ರಾಯಣ್ಣ ಕೆಚ್ಚು ಯುವಕರಲ್ಲಿ ಬರಬೇಕು. ಬ್ರಿಟಿಷರ ವಿರುದ್ಧ ಎದೆಯೊಡ್ಡಿದ ವೀರನಾಯಕ ಆತ. ಆದರೆ, ಬ್ರಿಟಿಷರು ಆತನನ್ನು ಗಲ್ಲಿಗೇರಿಸಿದರು. ಪತಿ ಸತ್ತಾಗ, ರಾಜ್ಯ ಪರಕೀಯರ ಪಾಲಾದಾಗ ಕಿತ್ತೂರು ಚನ್ನಮ್ಮ ಸಾಯಲಿಲ್ಲ. ಆದರೆ, ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರು ಬಂಧಿಸಿದ್ದಾರೆ ಎಂಬ ವಿಷಯ ತಿಳಿದ ಕೂಡಲೇ ಆಕೆ ಸಾಯುತ್ತಾಳೆ.

ರಾಯಣ್ಣನ ಮೇಲೆ ಆಕೆ ಇಟ್ಟಿದ್ದ ನಂಬಿಕೆ, ರಾಜ್ಯಕ್ಕಾಗಿ ಆತ ಮಾಡಿದ ತ್ಯಾಗ ಮನೋಭಾವನೆ ಇದಕ್ಕೆ ಸಾಕ್ಷಿ’ ಎಂದು ಬಣ್ಣಿಸಿದರು. ಡಾ.ಮಾಲೇಗೌಡ ಪ್ರಾಸ್ತಾವಿಕ ಭಾಷಣ ಮಾಡಿದರು. ಅರುಣ್‌­ಕುಮಾರ್‌ ಕನ್ನೂರು, ಕೆಎಎಸ್‌ ­ಅಧಿಕಾರಿ ಸಿ. ನಾಗರಾಜು ಹಾಜರಿದ್ದರು. ಕೆ.ಆರ್‌. ಪೇಟೆ ಬಿಇಒ ರೇವಣ್ಣ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.