ADVERTISEMENT

ಚುನಾವಣಾ ಕಣಕ್ಕೆ ನಾಮಪತ್ರಗಳ ಸುರಿಮಳೆ

11 ವಿಧಾನಸಭಾ ಕ್ಷೇತ್ರ, 50ಕ್ಕೂ ಹೆಚ್ಚು ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 11:26 IST
Last Updated 24 ಏಪ್ರಿಲ್ 2018, 11:26 IST

ಮೈಸೂರು: ಚುನಾವಣಾ ಕಣಕ್ಕೆ ಧುಮುಕಲು ಒಂದು ದಿನ ಮಾತ್ರ ಬಾಕಿ ಉಳಿದಿದ್ದು, ಜಿಲ್ಲೆಯ 11 ವಿಧಾನಸಭಾ ಕ್ಷೇತ್ರದ ಬಹತೇಕ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸಿದರು.

ಮಂಗಳವಾರ ನಾಮಪತ್ರ ಸಲ್ಲಿಕೆ ಮಾಡುವವರ ಸಂಖ್ಯೆ ವಿರಳ ಎನ್ನಲಾಗಿದ್ದು, ಕಣದಲ್ಲಿ ಇರುವವರ ಬಹುತೇಕ ಚಿತ್ರಣ ಒಂದು ದಿನ ಮುನ್ನವೇ ಲಭ್ಯವಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಶಿಕ್ಷಣ ಸಚಿವ ತನ್ವೀರ್‌ ಸೇಠ್‌, ಶಾಸಕರಾದ ಎಂ.ಕೆ.ಸೋಮಶೇಖರ್‌, ಸಾ.ರಾ.ಮಹೇಶ್‌ ಸೇರಿ 52ಕ್ಕೂ ಹೆಚ್ಚು ಅಭ್ಯರ್ಥಿಗಳು ಚುನಾವಣೆಯ ಅಖಾಡಕ್ಕೆ ಇಳಿದರು. ಅಪಾರ ಬೆಂಬಲಿಗರೊಂದಿಗೆ ಮೆರವಣಿಗೆ ನಡೆಸಿ ಶಕ್ತಿಪ್ರದರ್ಶನ ನಡೆಸಿದರು. ದೇಗುಲ, ದರ್ಗಾ, ಮಠಗಳಿಗೆ ಭೇಟಿ ನೀಡಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು.

ADVERTISEMENT

ಮರು ಆಯ್ಕೆ ಬಯಸಿರುವ ಕೆ.ಆರ್‌.ಕ್ಷೇತ್ರದ ಶಾಸಕ ಎಂ.ಕೆ.ಸೋಮಶೇಖರ್‌ ಕಾಂಗ್ರೆಸ್‌ ಪಕ್ಷದಿಂದ ಉಮೇದುವಾರಿಕೆ ಸಲ್ಲಿಸಿದರು. ವಿದ್ಯಾರಣ್ಯಪುರಂನ ಚಾಮುಂಡಿವನಂ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು, ಬೆಂಬಲಿಗರೊಂದಿಗೆ ಮಹಾನಗರ ಪಾಲಿಕೆಗೆ ತೆರಳಿದರು. ಕಾಂಗ್ರೆಸ್‌ ಧ್ವಜಗಳನ್ನು ಹಿಡಿದಿದ್ದ ಕಾರ್ಯಕರ್ತರು ಪಕ್ಷದ ಅಭ್ಯರ್ಥಿಯನ್ನು ಹೊತ್ತು ಸಂಭ್ರಮಿಸಿದರು.

ಚಾಮರಾಜ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಪ್ರೊ.ಕೆ.ಎಸ್‌.ರಂಗಪ್ಪ ಉಮೇದುವಾರಿಕೆ ಸಲ್ಲಿಕೆಗೂ ಮುನ್ನ ದಿವಾನ್ಸ್‌ ರಸ್ತೆಯ ಅಮೃತೇಶ್ವರ ದೇಗುಲಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಕೃಷ್ಣವಿಲಾಸ ರಸ್ತೆಯಲ್ಲಿರುವ ದರ್ಗಾಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಡೊಳ್ಳು, ನಗಾರಿಯೊಂದಿಗೆ ನಂಜರಾಜ ಬಹದ್ದೂರು ಛತ್ರದಿಂದ ಮೆರವಣಿಗೆಯಲ್ಲಿ ಸಾಗಿದ ಅವರು, ಮಹಾನಗರ ಪಾಲಿಕೆಯಲ್ಲಿ ಚುನಾವಣಾ ಧಿಕಾರಿಗೆ ನಾಮಪತ್ರ ಸಲ್ಲಿಕೆ ಮಾಡಿದರು.

ಈ ವೇಳೆ ಹಾಜರಿದ್ದ ಜೆಡಿಎಸ್‌ ಮುಖಂಡ ಎಚ್‌.ಡಿ.ರೇವಣ್ಣ, ‘ಎರಡು ರಾಷ್ಟ್ರೀಯ ಪಕ್ಷಗಳ ಆಡಳಿತವನ್ನು ನೋಡಿ ರಾಜ್ಯದ ಜನ ಬೇಸತ್ತಿದ್ದಾರೆ. ಹೀಗಾಗಿ, ಪ್ರಾದೇಶಿಕ ಪಕ್ಷ ಬೆಂಬಲಿಸುವ ನಿರೀಕ್ಷೆ ಇದೆ. ಹೊಳೆನರಸೀಪುರ, ಚಾಮರಾಜ ಕ್ಷೇತ್ರ ಸೇರಿ ರಾಜ್ಯದ ಎಲ್ಲೆಡೆ ಮತದಾರರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಹೇಳಿದರು.

ಚಾಮರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಲ್‌.ನಾಗೇಂದ್ರ ಬೆಂಬಲಿಗರೊಂದಿಗೆ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದ ಬಳಿ ಜಮಾಯಿಸಿದರು. ರಾಘವೇಂದ್ರ ಸ್ವಾಮಿ ಮಠದಲ್ಲಿ ಪೂಜೆ ಸಲ್ಲಿಸಿದ ಅವರು, ಮೆರವಣಿಗೆಯ ಮೂಲಕ ಚಾಮರಾಜ ಜೋಡಿರಸ್ತೆಯಲ್ಲಿ ಸಾಗಿದರು. ಸಂಸದ ಪ್ರತಾಪಸಿಂಹ, ಬಿಜೆಪಿ ನಗರ ಘಟಕದ ಅಧ್ಯಕ್ಷ ಡಾ.ಬಿ.ಎಚ್‌.ಮಂಜುನಾಥ್ ಅವರೊಂದಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಿದರು.

ಜೆಡಿಎಸ್‌ನಿಂದ ಹೊರಬಂದು ಪಕ್ಷೇತರ ಅಭ್ಯರ್ಥಿಯಾಗಿರುವ ಕೆ. ಹರೀಶ್‌ ಗೌಡ ಕೂಡ ಚಾಮರಾಜ ಕ್ಷೇತ್ರದಿಂದ ಉಮೇದುವಾರಿಕೆ ಸಲ್ಲಿಸಿದರು. ಕ್ಷೇತ್ರ ವ್ಯಾಪ್ತಿಯ ವಿವಿಧ ರಸ್ತೆಯಲ್ಲಿ ಮೆರವಣಿಗೆ ನಡೆಸಿದ ಅವರು, ಚಾಮರಾಜ ಜೋಡಿರಸ್ತೆಯಲ್ಲಿರುವ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಕೋಟೆ ಆಂಜನೇಯಸ್ವಾಮಿ ದೇಗುಲದ ಬಳಿ ಬೆಂಬಲಿಗರೊಂದಿಗೆ ಸೇರಿದ ಅವರು, ಪಾದಯಾತ್ರೆಯಲ್ಲಿ ತೆರಳಿದರು.

ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಅವರು ನಜರಬಾದಿನ ಎಸ್‌.ಪಿ.ಕಚೇರಿ ಎದುರು ಬೆಂಬಲಿಗರೊಂದಿಗೆ ಜಮಾಯಿಸಿದರು. ಅಲ್ಲಿಂದ ಮೆರ ವಣಿಗೆ ಹೊರಟು ಚಾಮುಂಡಿ ವಿಹಾರದಲ್ಲಿರುವ ಚುನಾ ವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಮುಖಾ ಮುಖಿಯಾದ ಎಸ್‌ಡಿಪಿಐ ಅಭ್ಯರ್ಥಿ
ಅಬ್ದುಲ್‌ ಮಜೀದ್‌, ಸೇಠ್‌ ಆಲಂಗಿಸಿಕೊಂಡರು.

ನರಸಿಂಹರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌.ಸತೀಶ್‌ (ಸಂದೇಶ್ ಸ್ವಾಮಿ) ಅವರು ಕ್ಯಾತಮಾರನಹಳ್ಳಿಯ ಹುಲಿಯಮ್ಮನ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ಅಲ್ಲಿಂದ ಮೆರವಣಿಗೆ ಹೊರಟು ಗಾಯತ್ರಿಪುರಂ ಮಾರ್ಗವಾಗಿ ಚಾಮುಂಡಿವಿಹಾರ ಕ್ರೀಡಾಂಗಣ ತಲುಪಿದರು. ತೋಂಟದಾರ್ಯ ಸೇರಿ ಅನೇಕರು ಜೊತೆಗಿದ್ದರು.

ಪ್ರತಿಷ್ಠೆಯ ಕಣವಾಗಿರುವ ಪರಿ ವರ್ತನೆ ಚಾಮುಂಡೇಶ್ವರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌.ಆರ್‌.ಗೋಪಾಲರಾವ್‌ ಅವರು ಪಕ್ಷದ ಮುಖಂಡರೊಂದಿಗೆ ಮಿನಿ ವಿಧಾನಸೌಧಕ್ಕೆ ತೆರಳಿ ಉಮೇದುವಾರಿಕೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.