ADVERTISEMENT

ಚುನಾವಣೆ ಹತ್ತಿರ ಬಂದಾಗ ಸಾಲಮನ್ನಾ ತಂತ್ರ

ಬೂತ್‌ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್‌ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 11 ಮೇ 2017, 7:46 IST
Last Updated 11 ಮೇ 2017, 7:46 IST
ಮೈಸೂರು: ‘ಸಾಲಮನ್ನಾ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ಬದುಕಿನ ಜೊತೆ ಚೆಲ್ಲಾಟವಾಡುತ್ತಿವೆ. ಬಹುಶಃ ಚುನಾವಣೆ ಹತ್ತಿರ ಬಂದಾಗ ರಾಜ್ಯ ಸರ್ಕಾರವು ಒಂದಿಷ್ಟು ಸಾಲ ಮನ್ನಾ ಮಾಡುವ ತಂತ್ರ ರೂಪಿಸಿದೆ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದರು.
 
ದಟ್ಟಗಳ್ಳಿಯ ಸಾ.ರಾ.ಕನ್ವೆನ್ಷನ್‌ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜೆಡಿಎಸ್‌ ಮೈಸೂರು ನಗರ ಹಾಗೂ ಗ್ರಾಮಾಂತರ ಬೂತ್‌ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
 
‘ರಾಜಕೀಯವಾಗಿ ನನಗೆ ಮರುಜೀವ ನೀಡಿದ್ದು ರಾಮನಗರ ಜಿಲ್ಲೆ. ಮಂಡ್ಯ, ಮೈಸೂರು ಜಿಲ್ಲೆಗಳು ರಾಜಕೀಯ ಸಂಘಟನೆಗೆ ನನ್ನಲ್ಲಿ ಶಕ್ತಿ ತುಂಬಿವೆ. ಚಾಮುಂಡೇಶ್ವರಿ ದಯೆಯಿಂದ ಮುಖ್ಯಮಂತ್ರಿ ಆಗಲು ಸಾಧ್ಯವಾಯಿತು’ ಎಂದರು.
 
‘ಮುಂದಿನ ದಿನಗಳಲ್ಲಿ ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡುವವರಿಗೆ ಆದ್ಯತೆ ನೀಡಲಾಗುವುದು. ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕರ್ತರು ಈಗಿನಿಂದಲೇ ಬೂತ್ ಮಟ್ಟದಲ್ಲಿ ಕಾರ್ಯನಿರ್ವಹಿಸಬೇಕು. ಆಗ ಬೇರೆ ಪಕ್ಷದವರು ಎಷ್ಟೇ ಹಣ ಸುರಿದರೂ ಮತದಾರರು ಮಾರು ಹೋಗಲ್ಲ. ಮೈಸೂರು ಜಿಲ್ಲೆಯ 11 ಕ್ಷೇತ್ರಗಳ ಪೈಕಿ ಹತ್ತರಲ್ಲಿ ಜೆಡಿಎಸ್ ಗೆಲ್ಲಿಸಬೇಕು’ ಎಂದು ಹೇಳಿದರು.
 
‘ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರವನ್ನು ಸರ್ಕಾರದಿಂದಲೇ ಒದಗಿಸಲಾಗುವುದು. ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸ ಲಾಗುವುದು. ರೈತರ ಆತ್ಮಹತ್ಯೆ ತಡೆಗಟ್ಟಲು ಯೋಜನೆ ರೂಪಿಸಲಾ ಗುವುದು’ ಎಂದು ಭರವಸೆ ನೀಡಿದರು.
 
‘ಜೆಡಿಎಸ್‌ ಪಕ್ಷವು ನಾಯಕರನ್ನು ಸೃಷ್ಟಿಸುವ ಕಾರ್ಖಾನೆ ಇದ್ದಂತೆ. ಸಿದ್ದರಾಮಯ್ಯ ಅವರನ್ನು ಬೆಳೆಸಿದ್ದೂ ಜೆಡಿಎಸ್‌ ಕಾರ್ಯಕರ್ತರು. ಆದರೆ, ಅಧಿಕಾರಕ್ಕಾಗಿ ಕಾಂಗ್ರೆಸ್‌ ಸೇರಿದರು. ಬೆಳೆಸಿದವರನ್ನೇ ಮರೆತರು’ ಎಂದು ವಾಗ್ದಾಳಿ ನಡೆಸಿದರು.
 
ಶಾಸಕ ಸಾ.ರಾ.ಮಹೇಶ್‌ ಮಾತನಾಡಿ, ರಾಜ್ಯದ ರೈತರು ಉಳಿಯಬೇಕೆಂದರೆ ಜೆಡಿಎಸ್‌ ಅಧಿಕಾರಕ್ಕೆ ಬರಲೇಬೇಕು. ಅದಕ್ಕಾಗಿ ವಿವಿಧ ಪಕ್ಷಗಳ ಮುಖಂಡರು ಜೆಡಿಎಸ್‌ಗೆ ಬರಬೇಕು. ಬೂತ್‌ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಬೇಕು’ ಎಂದು ಕರೆ ನೀಡಿದರು.
 
ಶಾಸಕ ಸುರೇಶ್ ಬಾಬು, ವಿಧಾನ ಪರಿಷತ್ ಸದಸ್ಯರಾದ ಸಂದೇಶ್‌ ನಾಗರಾಜ್‌, ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡ, ಚೌಡರೆಡ್ಡಿ, ರಮೇಶ್ ಬಾಬು, ಮೇಯರ್‌ ಎಂ.ಜೆ. ರವಿಕುಮಾರ್‌, ಜಿಲ್ಲಾ ಘಟಕದ ಅಧ್ಯಕ್ಷ ನರಸಿಂಹಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯ ಬೀರಿಹುಂಡಿ ಬಸವಣ್ಣ 
ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.