ADVERTISEMENT

ಚೇತರಿಕೆ ಕಂಡ ಹುಣಸೆಹಣ್ಣಿನ ಧಾರಣೆ

ಬೀನ್ಸ್ ಬಲು ದುಬಾರಿ, ಒಣಮೆಣಸಿನಕಾಯಿ ಬೆಲೆ ಏರಿಳಿತ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 10:10 IST
Last Updated 22 ಮಾರ್ಚ್ 2017, 10:10 IST

ಮೈಸೂರು: ಸತತ ಬೆಲೆ ಕುಸಿತದಿಂದ ನೆಲಕಚ್ಚಿದ್ದ ಹುಣಸೆಹಣ್ಣಿನ ದರದಲ್ಲಿ ಚೇತರಿಕೆ ಕಂಡುಬಂದಿದೆ. ತಿಂಗಳ ಆರಂಭದಲ್ಲಿ ಕ್ವಿಂಟಲ್‌ಗೆ ಇಲ್ಲಿನ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ₹ 6,704 ಇದ್ದದ್ದು, ಇದೀಗ 7,467ಕ್ಕೆ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ದರ ಕಡಿಮೆ ಇದ್ದರೂ, ಈ ವರ್ಷದ ಉತ್ತಮ ದರ ಇದಾಗಿದೆ.

ಬೀನ್ಸ್ ದರ ಏರಿಕೆ ಮುಂದುವರಿದಿದ್ದು, ಕಳೆದ ವಾರ ಕೆ.ಜಿ.ಗೆ ಸಗಟು ಧಾರಣೆ ₹ 49 ಇದ್ದದ್ದು, ಇದೀಗ ₹ 65ನ್ನು ತಲುಪಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹ 80ರಿಂದ ₹ 90ರವರೆಗೂ ಮಾರಾಟವಾಗುತ್ತಿದೆ.

ಕ್ಯಾರೆಟ್ ದರವೂ ಏರಿಕೆಯಾಗುತ್ತಿದ್ದು, ಸಗಟು ಧಾರಣೆ ಕೆ.ಜಿ.ಗೆ ₹ 16ರಿಂದ ₹ 21ಕ್ಕೆ  ಹೆಚ್ಚಿದೆ. ಬೀಟ್ರೂಟ್‌ ದರವೂ ₹ 14ರಿಂದ ₹ 19ಕ್ಕೆ ಏರಿಕೆಯಾಗಿದೆ.

ಟೊಮೆಟೊ ಧಾರಣೆಯಲ್ಲಿ ಅಲ್ಪ ಇಳಿಕೆಯಾಗಿದೆ. ಕೆ.ಜಿ.ಗೆ ₹ 18.50ಯಿಂದ ₹ 16ಕ್ಕೆ ಇಳಿಕೆಯಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಇದು ಕೆ.ಜಿ.ಗೆ ₹ 20ಕ್ಕೆ ಮಾರಾಟವಾಗುತ್ತಿದೆ. ದಪ್ಪಮೆಣಸಿನಕಾಯಿ ದರ ಕೆ.ಜಿ.ಗೆ ₹ 32ರಿಂದ ₹ 26ಕ್ಕೆ, ನುಗ್ಗೆಕಾಯಿ ₹ 19ರಿಂದ ₹ 16ಕ್ಕೆ ಇಳಿಕೆಯಾಗಿದೆ.

ಒಣಮೆಣಸಿನಕಾಯಿ ದರದಲ್ಲಿ ಏರಿಳಿತ: ಒಣಮೆಣಸಿನಕಾಯಿ ದರ ಏರಿಳಿತದ ಹಾದಿಯಲ್ಲಿದೆ. ತಿಂಗಳ ಆರಂಭದಲ್ಲಿ ಕ್ವಿಂಟಲ್‌ಗೆ ಇದರ ಸಗಟು ಧಾರಣೆ ₹ 3,734 ಇತ್ತು. ಮಾರ್ಚ್ 14ರಂದು ₹ 6,150ಕ್ಕೆ ಏರಿತು. 15ರಂದು ₹ 10 ಸಾವಿರ ತಲುಪಿತು. ಎರಡೇ ದಿನದಲ್ಲಿ ₹ 2,804ಕ್ಕೆ ಕುಸಿಯಿತು.

ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಬೆಳೆಯಲಾಗಿರುವ ಒಣಮೆಣಸಿನಕಾಯಿ ಅಲ್ಲಿಂದ ಇಲ್ಲಿಗೆ ಆವಕವಾಗುತ್ತಿದೆ. ಮಾರುಕಟ್ಟೆಗೆ ಹೆಚ್ಚು ಬಂದ ದಿನ ಬೆಲೆ ಕುಸಿಯುತ್ತದೆ. ಬೇರೆ ದಿನಗಳಲ್ಲಿ ಉತ್ತಮ ದರಕ್ಕೆ ಮಾರಾಟವಾಗುತ್ತಿದೆ ಎಂದು ಎಪಿಎಂಸಿ ಮಾರುಕಟ್ಟೆಯ ವರ್ತಕ ಸ್ವಾಮಿ ತಿಳಿಸಿದರು.

ಕೋಳಿಮೊಟ್ಟೆ, ಮಾಂಸ ಏರಿಕೆ: ಕೋಳಿಮೊಟ್ಟೆ ಒಂದಕ್ಕೆ ₹ 3.37ರಿಂದ ₹ 3.51ಕ್ಕೆ ಅಲ್ಪ ಏರಿಕೆಯಾಗಿದೆ. ಬ್ರಾಯ್ಲರ್ ಕೋಳಿ ಮಾಂಸ ₹ 69ರಿಂದ ₹ 66ಕ್ಕೆ ಇಳಿಕೆಯಾಗಿದ್ದರೆ, ಕಲ್ ಬರ್ಡ್ ₹ 92ರಿಂದ ₹ 118ಕ್ಕೆ ಹೆಚ್ಚಿದೆ.

ಧಾನ್ಯಗಳ ಪೈಕಿ ವಿವಿಧ ತಳಿಗಳ ಅಕ್ಕಿ ದರ ಏರಿಕೆ ಮುಂದುವರಿದಿದೆ. ಸದ್ಯ, ಉತ್ತಮ ಗುಣಮಟ್ಟದ ಅಕ್ಕಿ ಕ್ವಿಂಟಲ್‌ಗೆ ₹ 5,100, ಮಧ್ಯಮ ಗುಣಮಟ್ಟದ ಅಕ್ಕಿ ₹ 3,700 ಇದೆ. ಉದ್ದಿನಬೇಳೆ ₹ 94ರಿಂದ ₹ 90ಕ್ಕೆ, ಕಡಲೆಬೇಳೆ ₹ 67ರಿಂದ 60ಕ್ಕೆ ಅಲ್ಪ ಇಳಿಕೆಯಾಗಿದೆ. ಕಡಲೆಕಾಳು ₹ 60ರಿಂದ ₹ 65ಕ್ಕೆ ಏರಿಕೆಯಾಗಿದೆ.

ಮೂರು ವರ್ಷಕ್ಕೆ ಹುಣಸೆ ಫಸಲು!: ಚಿಂತಾಮಣಿ ಕೃಷಿ ಸಂಶೋಧನಾ ಕೇಂದ್ರವು ‘ಜಿಕೆವಿಕೆ– 1’ ಎಂಬ ಹೈಬ್ರಿಡ್ ತಳಿಯನ್ನು ಸಂಶೋಧಿಸಿದೆ. ಇದು ಕೇವಲ ಮೂರೇ ವರ್ಷಕ್ಕೆ ಫಸಲು ನೀಡುತ್ತದೆ.

ಬರಗಾಲದಂತಹ ಹೊತ್ತಿನಲ್ಲಿ ಕೊಳವೆ ಬಾವಿ ಇರುವವರು ಇಂತಹ ತಳಿಗಳ ಸಹಾಯ ಪಡೆಯುವ ಮೂಲಕ ಲಾಭ ಗಳಿಸಬಹುದು ಎಂದು ನಾಗನಹಳ್ಳಿಯ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಸಿ.ಗೋವಿಂದರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT