ADVERTISEMENT

ಟಿಪ್ಪು ಜಯಂತಿ ವಿರೋಧಿಸಿ ಒನಕೆ ಚಳವಳಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 9:09 IST
Last Updated 9 ನವೆಂಬರ್ 2017, 9:09 IST
ಟಿಪ್ಪು ಜಯಂತಿ ವಿರೋಧಿ ಸಮಿತಿಯು ಟಿಪ್ಪು ಜಯಂತಿ ಆಚರಣೆಯನ್ನು ಖಂಡಿಸಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಒನಕೆ ಹಿಡಿದು ಗಮನಸೆಳೆದರು
ಟಿಪ್ಪು ಜಯಂತಿ ವಿರೋಧಿ ಸಮಿತಿಯು ಟಿಪ್ಪು ಜಯಂತಿ ಆಚರಣೆಯನ್ನು ಖಂಡಿಸಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಒನಕೆ ಹಿಡಿದು ಗಮನಸೆಳೆದರು   

ಮೈಸೂರು: ರಾಜ್ಯ ಸರ್ಕಾರವು ನ. 10ರಂದು ಹಮ್ಮಿಕೊಂಡಿರುವ ಟಿಪ್ಪು ಜಯಂತಿ ಖಂಡಿಸಿ ಇಲ್ಲಿನ ಗಾಂಧಿ ಚೌಕದ ಬಳಿ ಟಿಪ್ಪು ಜಯಂತಿ ವಿರೋಧಿ ಸಮಿತಿಯು ಒನಕೆ ಚಳವಳಿ ನಡೆಸಿತು. ಒನಕೆ ಹಿಡಿದ ಸುಮಾರು 100 ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

‘ಟಿಪ್ಪು ಹಿಂದೂ ವಿರೋಧಿಯಾಗಿದ್ದು, ಅತ್ಯಾಚಾರ, ಕೊಲೆ ಎಸಗಿದ್ದಾನೆ. ಹಿಂಸೆಯ ಆರಾಧಕನ ಆಚರಣೆ ಮಾಡುವುದು ಸಲ್ಲದು’ ಎಂದು ಸಂಸದ ಪ್ರತಾಪಸಿಂಹ ಹೇಳಿದರು.
ಕೊಡಗಿನಲ್ಲಿ ಟಿಪ್ಪು ಲಕ್ಷಾಂತರ ಮಂದಿಯನ್ನು, ಕರಾವಳಿಯಲ್ಲಿ ಕೊಂಕಣಿ ಕ್ರೈಸ್ತರ ಮಾರಣ ಹೋಮ ನಡೆಸಿದ್ದ.

ಕನ್ನಡದ ಮೇಲೆ ಪರ್ಷಿಯನ್ ಭಾಷೆ ಹೇರಿದ್ದ. ಈ ಐತಿಹಾಸಿಕ ಸತ್ಯವನ್ನು ಮರೆಮಾಚಿ ಟಿಪ್ಪು ದೇಶಭಕ್ತ, ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದವ ಎಂದು ರಾಜ್ಯ ಸರ್ಕಾರ ಹೇಳುವುದು ಖಂಡನೀಯ ಎಂದರು.

ADVERTISEMENT

ಸಮಿತಿಯು ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. ಆಚರಣೆ ನಿಲ್ಲಿಸದೆ ಇದ್ದಲ್ಲಿ ಜಯಂತಿ ದಿನದಂದೇ ಟಿಪ್ಪು ಕುರಿತ ಎಲ್ಲ ಸತ್ಯವನ್ನೂ ಬಹಿರಂಗಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಬಿಜೆಪಿ ಮುಖಂಡ ಎಸ್‌.ಎ.ರಾಮದಾಸ್ ಮಾತನಾಡಿ, ‘ಜನರ ಭಾವನೆಗಳ ಜತೆ ಚೆಲ್ಲಾಟವಾಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಇದನ್ನು ನಿಲ್ಲಿಸದೆ ಇದ್ದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು’ ಎಂದರು.‌

ಕೊಡಗಿನ ವಕೀಲ ಮೇದಪ್ಪ, ಬಿಜೆಪಿ ಮುಖಂಡರಾದ ಮಂಜುಳಾ, ಎಲ್‌.ನಾಗೇಂದ್ರ, ಬಿಜೆಪಿ ನಗರ ಘಟಕದ ಅಧ್ಯಕ್ಷ ಡಾ.ಮಂಜುನಾಥ್‌, ಸಮಿತಿ ಸಹ ಸಂಚಾಲಕ ಮೈ.ಕಾ.ಪ್ರೇಮಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.