ADVERTISEMENT

ಟ್ವಿಟ್ಟರ್ ಬಿಡಿ; ಜನರಿಗೆ ಸ್ಪಂದಿಸಿ

ಸಂಸದ ಪ್ರತಾಪಸಿಂಹಗೆ ಬ್ರಿಜೇಶ್ ಕಾಳಪ್ಪ ಸಲಹೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2017, 10:23 IST
Last Updated 6 ಮಾರ್ಚ್ 2017, 10:23 IST
ಮೈಸೂರು: ‘ಸಂಸದ ಪ್ರತಾಪಸಿಂಹ ಅವರು ಟ್ವೀಟ್‌ ಮೂಲಕ ವೈಯಕ್ತಿಕ ನಿಂದನೆ ಮಾಡುವುದನ್ನು ಬಿಟ್ಟು ಬರ ಪರಿಸ್ಥಿತಿಯಿಂದ ಸಮಸ್ಯೆಗೆ ಸಿಲುಕಿರುವ ರೈತರಿಗೆ ನೆರವಾಗಲಿ’ ಎಂದು ಎಐಸಿಸಿ ಸದಸ್ಯ ಬ್ರಿಜೇಶ್ ಕಾಳಪ್ಪ ಸಲಹೆ ನೀಡಿದರು.
 
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಬರ ಪರಿಸ್ಥಿತಿ ತೀವ್ರವಾಗಿದೆ. ನಿಮ್ಮ ಕ್ಷೇತ್ರದಲ್ಲಿ ಸಂಚರಿಸಿ ಪರಿಸ್ಥಿತಿಯ ಅವಲೋಕನ ಮಾಡಿ. ಬರ ಪರಿಹಾರ ಬಿಡುಗಡೆಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ. ಗುರ್‌ಮೆಹರ್‌ ಕುರಿತು ನೀವು ಮಾಡಿದ ಟ್ವೀಟ್‌ಗೆ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗಿದೆ. ಇಂತಹ ವ್ಯಕ್ತಿಗತ ಚಾರಿತ್ರಿಕ ವಧೆ ಮಾಡುವುದನ್ನು ನಿಲ್ಲಿಸಿ’ ಎಂದರು.
 
‘ರೋಹಿತ್ ವೇಮುಲಾ, ಕನ್ಹಯ್ಯಕುಮಾರ್, ಉಮರ್‌ ಖಾಲಿದ್ ಸೇರಿ ಅನೇಕರನ್ನು ಬಿಜೆಪಿ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ತೇಜೋವಧೆ ಮಾಡಿವೆ. ಈಗ 20 ವರ್ಷದ ಗುರ್‌ಮೆಹರ್‌ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇನ್ನು ಮುಂದೆ ಬಾಲಕಿಯರ ವಿರುದ್ಧವೂ ಇದೇ ರೀತಿ ವರ್ತಿಸುತ್ತಾರೆ. ಇವರ ಮನಸ್ಥಿತಿಯ ಕುರಿತು ಕಳವಳವಾಗುತ್ತಿದೆ’ ಎಂದು ಆರೋಪಿಸಿದರು.
 
‘ಆಜಾದಿ ಪರ ಘೋಷಣೆ ಮೊಳಗಿಸುವವರನ್ನು ಬಂಧಿಸಿ. ಆದರೆ, ಇದರ ನೆಪದಲ್ಲಿ ಇತರರಿಗೆ ಕಿರುಕುಳ ನೀಡುವುದನ್ನು ಬಿಡಬೇಕು. ಕನ್ಹಯ್ಯ ವಿರುದ್ಧದ ಆರೋಪ ಪೊಲೀಸ್ ತನಿಖೆಯಲ್ಲಿ ಸಾಬೀತಾಗಿಲ್ಲ. ರೋಹಿತ್‌ ವೇಮುಲಾ ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡರು. ಇನ್ನೂ ಎಷ್ಟು ಮಂದಿಯ ಬಲಿ ಪಡೆಯುತ್ತೀರಿ’ ಎಂದು ಪ್ರಶ್ನಿಸಿದರು.
 
‘ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಿ 110ಕ್ಕೂ ಅಧಿಕ ಸೈನಿಕರು ಹುತಾತ್ಮರಾಗಿದ್ದಾರೆ. ಈವರೆಗೆ ಮೋದಿ ಯಾವೊಬ್ಬ ಸೈನಿಕರ ಮನೆಗೂ ಭೇಟಿ ನೀಡಿ ಸಾಂತ್ವನ ಹೇಳಿಲ್ಲ. ಸಿಯಾಚಿನ್‌ನಲ್ಲಿ ಮೃತಪಟ್ಟ ಹನುಮಂತಪ್ಪ ಕೊಪ್ಪದ ಅವರ ಪತ್ನಿಗೆ ವರ್ಷ ಕಳೆದರೂ ಉದ್ಯೋಗ ನೀಡಿಲ್ಲ. ಸೈನಿಕರ ಶೌರ್ಯದಲ್ಲಿ ಮೋದಿ ಸರ್ಕಾರ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ’ ಎಂದು ದೂರಿದರು.

* ವಿ.ಶ್ರೀನಿವಾಸಪ್ರಸಾದ್‌ ಬಳಸುತ್ತಿರುವ ಕೀಳುಮಟ್ಟದ ಭಾಷೆಯೇ ಅವರ ರಾಜಕೀಯ ಜೀವನಕ್ಕೆ ಮುಳುವಾಗಲಿದೆ.
ನಂಜನಗೂಡಿನಲ್ಲಿ ಅವರು ಸೋಲುವುದು ನಿಶ್ಚಿತ
-ಬ್ರಿಜೇಶ್ ಕಾಳಪ್ಪ, ಎಐಸಿಸಿ ಸದಸ್ಯ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.