ADVERTISEMENT

‘ಡಿ’ ಗ್ರೂಪ್‌ ಸಿಬ್ಬಂದಿ ನೇಮಕಾತಿಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 28 ಮೇ 2017, 6:41 IST
Last Updated 28 ಮೇ 2017, 6:41 IST

ಮೈಸೂರು: ವಸತಿಶಾಲೆ ಮತ್ತು ವಿದ್ಯಾರ್ಥಿನಿಲಯಗಳಲ್ಲಿ ‘ಡಿ’ ಗ್ರೂಪ್‌ನ 5 ಸಾವಿರ ನೌಕರರ ನೇಮಕಾತಿಗೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಹಾಸ್ಟೆಲ್‌ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಧರಣಿ ನಡೆಸಿದರು. ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡುಗೆ ತಯಾರಕರು, ಸಹಾಯಕರು, ಕಾವಲು­ಗಾರರು, ಜವಾನರು ಹಾಗೂ ಸ್ವಚ್ಛತಾ ಸಿಬ್ಬಂದಿಯ ಸೇವೆಯನ್ನು ಕಾಯಂ­ಗೊಳಿಸ­ಬೇಕು ಎಂದೂ  ಆಗ್ರಹಿಸಿದರು.

‘ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಅಧೀನದಲ್ಲಿರುವ ಹಾಸ್ಟೆಲ್‌ ಹಾಗೂ ವಸತಿ ಶಾಲೆಗಳಲ್ಲಿ ಗುತ್ತಿಗೆದಾರರ ಶೋಷಣೆಯ ನಡುವೆಯೂ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ಸೇವೆಯನ್ನು ಕಾಯಂಗೊಳಿಸುವುದಾಗಿ ಭರವಸೆ ನೀಡಿದ್ದ ಸರ್ಕಾರ ಏಕಾಏಕಿ ನೇರ ನೇಮಕಾತಿ ಪ್ರಕ್ರಿಯೆಗೆ ಮುಂದಾಗಿದೆ. ಇದರಿಂದ ನಮಗೆ ತೀವ್ರ ಆತಂಕ ಎದುರಾಗಿದ್ದು, ಆಘಾತಕ್ಕೆ ಒಳಗಾಗಿದ್ದೇವೆ’ ಎಂದು ಅಳಲು ತೋಡಿಕೊಂಡರು.

‘ಈ ಹಿಂದೆಯೂ ಎರಡು ಬಾರಿ ಸರ್ಕಾರ ನೇರ ನೇಮಕಾತಿಗೆ ಮುಂದಾಗಿತ್ತು. ಜನಪ್ರತಿನಿಧಿಗಳ ತೀವ್ರ ವಿರೋಧದ ಬಳಿಕ ಈ ಪ್ರಕ್ರಿಯೆ ಕೈಬಿಟ್ಟಿತ್ತು. ಅಡುಗೆ ತಯಾರಕರಿಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಕಡ್ಡಾಯ­ಗೊಳಿಸಿದ್ದು ಹಾಸ್ಯಾಸ್ಪದ. ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿರುವವರಿಗೆ ವಿದ್ಯಾರ್ಹತೆ ಇಲ್ಲದಿರಬಹುದು. ಆದರೆ, ಶುಚಿ ಹಾಗೂ ರುಚಿಯಾದ ಆಹಾರ ತಯಾರಿಸುವ ಕೌಶಲವಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂಘದ ಜಿಲ್ಲಾ ಸಂಚಾಲಕ ಜಗದೀಶ್‌ ಸೂರ್ಯ, ಸಹ ಸಂಚಾಲಕ ಶಶಿವರ್ಧನ್‌ ಇದ್ದರು.

ADVERTISEMENT

ತನಿಖೆಗೆ ಆಗ್ರಹ
ಮೈಸೂರು: ತಾಲ್ಲೂಕಿನ ವರಕೋಡು ಗ್ರಾಮದ 13 ಸ್ತ್ರೀಶಕ್ತಿ ಸಂಘಗಳ ಹಣ ದುರುಪಯೋಗ ಮಾಡಿಕೊಂಡ ಆರೋಪ ಎದುರಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆ ವಸಂತ ಅಲಿಯಾಸ್‌ ಬಿ.ವಿ.ಮಂಜುಳಾ ವಿರುದ್ಧ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಧರಣಿ ನಡೆಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ ಅವರಿಗೆ ದೂರು ನೀಡಿದ 50ಕ್ಕೂ ಹೆಚ್ಚು ಮಹಿಳೆಯರು ಬಳಿಕ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಜಮಾಯಿಸಿ ಘೋಷಣೆ ಕೂಗಿದರು.

‘ಗ್ರಾಮದ ಸ್ತ್ರೀಶಕ್ತಿ ಸಂಘಗಳ ವ್ಯವಹಾರವನ್ನು ಮಂಜುಳಾ 15 ವರ್ಷಗಳಿಂದ ನೋಡಿಕೊಳ್ಳುತ್ತಿದ್ದಾರೆ. ಬ್ಯಾಂಕಿನಿಂದ ಸಂಘಕ್ಕೆ ₹ 8 ಲಕ್ಷ ಸಾಲ ಕೊಡಿಸಿ ₹ 8 ಸಾವಿರ ಕಮಿಷನ್‌ ಪಡೆಯುತ್ತಿದ್ದಾರೆ. ಲೆಕ್ಕಪರಿಶೋಧನೆಯ ಹೆಸರಿನಲ್ಲಿ ಪ್ರತಿವರ್ಷ ಒಬ್ಬರಿಂದ ₹ 175 ಹಾಗೂ ಮಾಸಿಕ ₹ 20 ಸಂಗ್ರಹಿಸಿದ್ದಾರೆ. ತಪ್ಪು ಲೆಕ್ಕ ನೀಡಿ ಮುಗ್ದರನ್ನು ವಂಚಿಸಿದ್ದಾರೆ’ ಎಂದು ಆರೋಪಿಸಿದರು.

‘ವಿಮೆ ಹೆಸರಲ್ಲಿ 260 ಸದಸ್ಯರಿಂದ 10 ವರ್ಷಗಳಿಂದ ಲಕ್ಷಾಂತರ ರೂಪಾಯಿ ಹಣ ಕಟ್ಟಿಸಿಕೊಂಡಿದ್ದಾರೆ. ಅವಧಿ ಮುಗಿದರೂ ಹಣ ಮರಳಿಸಿಲ್ಲ. ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಕೂಡಲೇ ಅವರನ್ನು ಅಮಾನತುಗೊಳಿಸಿ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.
ಮುಖಂಡರಾದ ಸುನಂದಾ, ಸುಂದರಮ್ಮ, ಹೇಮಾ ಇದ್ದರು.

30ರಂದು ಔಷಧ ವ್ಯಾಪಾರ ಬಂದ್‌
ಮೈಸೂರು: ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘದ ಕರೆಯಂತೆ ಮೇ 30ರಂದು ದೇಶದಾದ್ಯಂತ ನಡೆಸಲು ಉದ್ದೇಶಿಸಿರುವ ಬಂದ್‌ಗೆ ಜಿಲ್ಲೆಯ ಔಷಧ ವ್ಯಾಪಾರಿಗಳು ಬೆಂಬಲ ಸೂಚಿಸಿದ್ದಾರೆ ಎಂದು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಕೆ.ಮಂಜುನಾಥ್‌ ಇಲ್ಲಿ ಶನಿವಾರ ತಿಳಿಸಿದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೈಸೂರಿನ ಎಲ್ಲ ಔಷಧ ವ್ಯಾಪಾರಿಗಳು ಒಂದು ದಿನದ ಬಂದ್‌ ಆಚರಿಸಲಿದ್ದಾರೆ.  ಜಿಲ್ಲೆಯಾ­ದ್ಯಂತ ಸುಮಾರು 2,200 ಔಷಧ ಅಂಗಡಿಗಳು ಬಾಗಿಲು ಮುಚ್ಚಲಿವೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ರೋಗಿಗಳಿಗೆ ತೊಂದರೆ­ಯಾಗುವುದನ್ನು ತಪ್ಪಿಸಲು ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಹೋಂಗಳಲ್ಲಿರುವ ಔಷಧ ಅಂಗಡಿಗಳಿಗೆ ಬಂದ್‌ನಿಂದ ವಿನಾಯಿತಿ ನೀಡಲಾಗಿದೆ ಎಂದರು.
ಆನ್‌ಲೈನ್‌ನಲ್ಲಿ ಔಷಧ ಮಾರಾಟ ಮಾಡುವುದರ ಮೇಲೆ ನಿರ್ಬಂಧ ವಿಧಿಸಬೇಕು, ಕಳಪೆ ಗುಣಮಟ್ಟದ ಔಷಧ ಮಾರಾಟ ತಡೆಗಟ್ಟಬೇಕು, ಔಷಧ ವ್ಯಾಪಾರಿ­ಗಳ ಪರವಾನಗಿ ನವೀಕರಣ ನಿಯಮಗಳನ್ನು ಸಡಿಲಿಸಬೇಕು ಮುಂತಾದ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಬಂದ್‌ ನಡೆಯಲಿದೆ ಎಂದು ತಿಳಿಸಿದರು. ಸಂಘದ ಅಧ್ಯಕ್ಷ ಕೆ.ವಿ.ಪ್ರಕಾಶ್‌, ಖಜಾಂಚಿ ಯು.ಎಸ್‌.ಹರೀಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.