ADVERTISEMENT

ನೃತ್ಯ ಸಂಪದ; ಪ್ರೇಕ್ಷಕರ ಹರ್ಷೋದ್ಗಾರ

ದಸರಾ ಯುವಸಂಭ್ರಮಕ್ಕೆ ವರ್ಣರಂಜಿತ ತೆರೆ; ಕುಣಿದು ಕುಪ್ಪಳಿಸಿದ ಯುವಹೃದಯಗಳು

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2014, 8:22 IST
Last Updated 23 ಸೆಪ್ಟೆಂಬರ್ 2014, 8:22 IST

ಮೈಸೂರು: ರಾಷ್ಟ್ರಪ್ರೇಮ, ಪರಿಸರ ಜಾಗೃತಿ ಗೀತೆಗಳ ಗಾಯನ–ನೃತ್ಯ ವೈಭೋಗ, ಪ್ರೇಕ್ಷಕರ ಹರ್ಷೋದ್ಗಾರ, ಕರತಾಡನ... ಆ ಮೂಲಕ ದಸರಾ ಯುವ ಸಂಭ್ರಮಕ್ಕೆ ಸೋಮವಾರ ವರ್ಣರಂಜಿತ ತೆರೆ ಬಿತ್ತು.

‘ಏ ದುನಿಯಾ ಏಕ್‌ ದುಲ್ಹನ್‌ ದುಲ್ಹನ್‌... ಕೆ ಮಾತೆ ಪೇ ಬಿಂದಿಯಾ ಏ ಮೇರಾ ಇಂಡಿಯಾ ಐ ಲವ್‌ ಮೈ ಇಂಡಿಯಾ...’ ಹಾಡಿಗೆ ಸಿದ್ಧಾರ್ಥನಗರದ ನ್ಯಾಷನಲ್‌ ಫೆಡರೇಷನ್‌ ಆಫ್‌ ದಿ ಬ್ಲೈಂಡ್‌ ಶಾಲೆಯ ಅಂಧ ವಿದ್ಯಾರ್ಥಿಗಳು ಅದ್ಭುತ ಪ್ರದರ್ಶನ ನೀಡಿ ಪ್ರೇಕ್ಷಕರನ್ನು ಬೆರಗುಗೊಳಿಸಿದರು.  


‘ಯಹಾ ಹರ್‌ ಕದಮ್‌ ಕದಮ್‌ ಪೆ ಧರ್ತಿ ಬದ್ಲೆ ರಂಗ್‌, ಯಹಾ ಕಿ ಬೋಲಿ ಮೇ ರಂಗೋಲಿ ಸಾತ್‌ ರಂಗ್‌, ಧಾನಿ ಪಗ್ಡಿ ಪೆಹ್ನೆ ಮೌಸಮ್‌ ಹೇ, ನೀಲಿ ಚಾದರ್‌ ತಾನೆ ಅಂಬರ್‌ ಹೇ, ನದಿ ಸುನ್ಹೇರಿ ಹರಾ ಸಮುಂದರ್‌ ಹೇ ರೆ ಸಜಿಲಾ ದೇಸ್‌ ರಂಗಿಲಾ ರಂಗಿಲಾ ದೇಸ್‌ ಮೇರಾ ರಂಗಿಲಾ’ ‘ಮಾ ತುಜೇ ಸಲಾಂ...’ ಮತ್ತು ‘ಸಾರೆ ಜಹಾಂಸೆ ಅಚ್ಛಾ ಹಿಂದೂಸ್ತಾನ್‌ ಹಮಾರಾ, ಹಮ್‌ ಬುಲ್‌ಬುಲ್‌ ಹೇ ಇಸ್‌ ಕಿ ಯೇ ಗುಲಸಿತಾನ್‌ ಹಮಾರಾ ...’ ಗೀತೆಗಳಿಗೆ ಜಿಎಸ್‌ಎಸ್‌ಎಸ್‌ ಮಹಿಳಾ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿನಿಯರು ಪ್ರದರ್ಶಿಸಿದ ನೃತ್ಯ ಪ್ರೇಕ್ಷಕರಿಗೆ ಖುಷಿ ನೀಡಿತು.

ಕೆ.ಆರ್‌. ನಗರದ ಆದಿಚುಂಚನಗಿರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಆದಿಚುಂಚನಗಿರಿ ಕ್ಷೇತ್ರ ಮಹಿಮೆ ಸಾರುವ ಗೀತೆಗೆ ನೃತ್ಯ ರೂಪಕ ಪ್ರದರ್ಶಿಸಿ ಪ್ರೇಕ್ಷಕರ ಮನ ಗೆದ್ದರು. 

ವಿಜಯನಗರದ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ‘ನಾ ನಗುವ ಮೊದಲೇನೆ ಮಿನುಗುತಿದೆ ಯಾಕೊ ಹೊಸ ಮುಗುಳು ನಗೆ, ನಾ ನುಡಿವ ಮೊದಲೇನೆ ತೊದಲುತಿದೆ ಹೃದಯ ಒಳಗೊಳಗೆ...’  ಹಾಡಿನ ಮೂಲಕ ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರಿದರು.

ವಿದ್ಯಾವಿಕಾಸ್‌ ಪ್ರಥಮದರ್ಜೆ ಕಾಲೇಜಿನವರು ಮದ್ಯಪಾನ ಮತ್ತು ಧೂಮಪಾನ ಹಾನಿ ಸಂದೇಶ ಸಾರುವ  ಮತ್ತು ನಂಜನಗೂಡಿನ ಹೆಡಿಯಾಲ ಕಾಲೇಜಿನವರು ವಂದೇ ಮಾತರಂ ಗೀತೆಗೆ ನರ್ತನ ಮಾಡಿದರು.

ಹಾಸನ ಜಿಲ್ಲೆಯ ಹೊಳೆನರಸೀಪುರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಮಕ್ಕಳು ದೇಶ ಕಾಯುವ ಯೋಧರ ಕುರಿತ ಹಾಡಿಗೆ ಹೆಜ್ಜೆ ಹಾಕಿ ಪ್ರೇಕ್ಷಕ ಸಮುದಾಯವನ್ನು ದೇಶ ಪ್ರೇಮದ ಅಲೆಯಲ್ಲಿ ತೇಲಿಸಿದರು. ತ್ರಿವರ್ಣ ಧ್ವಜ, ಪರಿಸರ ಸೂಚಕ ಹಸಿರು ಬಣ್ಣ, ಯೋಧರ ವಸ್ತ್ರ, ದಟ್ಟ ನೀಲಿ, ಶುಭ್ರ ಬಿಳಿ  ಮೊದಲಾದ ವೇಷಭೂಷಣಗಳು ರಾರಾಜಿಸಿದವು. ಗ್ಯಾಲರಿಯಲ್ಲಿ
ಕಿಕ್ಕಿರಿದು ಸೇರಿದ್ದ ಯುವಪಡೆ ನೃತ್ಯ ಮೋಡಿಗೆ ನಿಂತಲ್ಲೇ ಹೆಜ್ಜೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT