ADVERTISEMENT

ಪಿಯು: ವಿಶೇಷ ತರಬೇತಿಗೆ ವಿದ್ಯಾರ್ಥಿಗಳ ನಿರಾಸಕ್ತಿ!

​ಪ್ರಜಾವಾಣಿ ವಾರ್ತೆ
Published 13 ಮೇ 2017, 10:25 IST
Last Updated 13 ಮೇ 2017, 10:25 IST

ಮೈಸೂರು: ಪದವಿಪೂರ್ವ ಶಿಕ್ಷಣ ವಿಭಾಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ ಸರ್ಕಾರ ರೂಪಿಸಿದ್ದ ವಿಶೇಷ ತರಬೇತಿಯಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕುಸಿದಿರುವುದು ಪಿಯು ಫಲಿತಾಂಶದಲ್ಲಿ ಜಿಲ್ಲೆ ಹಿಂದುಳಿಯಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಬಾರಿ ಶೇ 60ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಇಂತಹ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ದ್ದರು. ಆದರೆ, ಫಲಿತಾಂಶದ ಪಟ್ಟಿಯಲ್ಲಿ ತನ್ನ ಸ್ಥಾನ ಉತ್ತಮಪಡಿಸಿಕೊಂಡಿರುವ ಚಾಮರಾಜನಗರ ಜಿಲ್ಲೆಯಲ್ಲಿ ಈ ತರಬೇತಿಗೆ ಶೇ 90ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಹಾಜರಾಗಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.

ಚಾಮರಾಜನಗರದಲ್ಲಿ ಈ ಕಾರ್ಯಕ್ರಮಕ್ಕೆ ಬಯೊಮೆಟ್ರಿಕ್ ಕಡ್ಡಾಯ ಮಾಡಲಾಗಿತ್ತು. ಇದರ ಜತೆಗೆ, ಪ್ರವೇಶಾತಿ ಪತ್ರ ಕೊಡುವುದಕ್ಕೆ ಈ ಹಾಜರಾತಿಯನ್ನು ಪರಿಗಣಿಸುವುದಾಗಿಯೂ ಹೇಳಲಾಗಿತ್ತು. ಇದರಿಂದ ಅಲ್ಲಿ ತರಬೇತಿ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಾಯಿತು ಎಂದು 5 ತಿಂಗಳ ಹಿಂದೆ ಚಾಮರಾಜನಗರ ಜಿಲ್ಲೆಯ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯ ಪ್ರಕಾಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಮೈಸೂರು ಜಿಲ್ಲೆಯಲ್ಲಿಯೂ ಬಯೊಮೆಟ್ರಿಕ್ ವ್ಯವಸ್ಥೆ ಜಾರಿಗೊಳಿಸಲಾಗಿತ್ತು. ಆದರೆ, ಇಲ್ಲಿ ಪ್ರವೇಶಾತಿ ಪತ್ರ ನೀಡಲು ಹಾಜರಾತಿ ಪರಿಗಣಿಸಲಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಹೇಳಿರಲಿಲ್ಲ. ಹೀಗಾಗಿ, ತರಬೇತಿ ಕಾರ್ಯಕ್ರಮಗಳಿಗೆ ವಿದ್ಯಾರ್ಥಿಗಳು ಸಮರ್ಪಕವಾಗಿ ಹಾಜರಾಗಿರಲಿಲ್ಲ.

ಗ್ರಾಮೀಣ ಪ್ರದೇಶಕ್ಕಿಂತ ನಗರ ಮತ್ತು ಪಟ್ಟಣ ಪ್ರದೇಶ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಸಾಗಿದ್ದಾರೆ. ನಗರ ಮತ್ತು ಪಟ್ಟಣ ಪ್ರದೇಶದ 25,069 ವಿದ್ಯಾರ್ಥಿಗಳ ಪೈಕಿ 15,323 ವಿದ್ಯಾರ್ಥಿಗಳು ಅಂದರೆ ಶೇ.61.12 ಉತ್ತೀರ್ಣರಾಗಿದ್ದಾರೆ. ಗ್ರಾಮೀಣ ಪ್ರದೇಶದ 4,496 ವಿದ್ಯಾರ್ಥಿಗಳ ಪೈಕಿ 2,210 ಮಂದಿ ಅಂದರೆ ಶೇ 49.15 ಪಾಸಾಗಿದ್ದಾರೆ.

ತಾಲ್ಲೂಕುವಾರು ಮೊದಲ ಸ್ಥಾನ ಪಡೆದವರು
ಎಚ್.ಡಿ.ಕೋಟೆ: ಕಲಾ ವಿಭಾಗದಲ್ಲಿ ಆದಿಚುಂಚನಗಿರಿ ಪಿಯು ಕಾಲೇಜಿನ ಮಹೇಶ್ 557, ವಾಣಿಜ್ಯ ವಿಭಾಗದಲ್ಲಿ ವಿಶ್ವಭಾರತಿ ಪಿಯು ಕಾಲೇಜಿನ ಛಾಯಾದೇವಿ 560, ವಿಜ್ಞಾನ ವಿಭಾಗದಲ್ಲಿ ಆದಿಚುಂಚನಗಿರಿ ಪಿಯು ಕಾಲೇಜಿನ ಶಿಲ್ಪಾ 571

ಪಿರಿಯಾಪಟ್ಟಣ:ಕಲಾ ವಿಭಾಗದಲ್ಲಿ ಬಸವೇಶ್ವರ ಪಿಯು ಕಾಲೇಜಿನ ಪಿ.ಯೋಗೇಶ್ 530, ವಾಣಿಜ್ಯ ವಿಭಾಗದಲ್ಲಿ ಇದೇ ಕಾಲೇಜಿನ ಕೀರ್ತನಾ 539, ವಿಜ್ಞಾನ ವಿಭಾಗದಲ್ಲಿ ಸರ್ಕಾರಿ ಪಿಯು ಕಾಲೇಜಿನ ಜಿ.ಎಸ್.ರಮೇಶ 494 

ಕೆ.ಆರ್.ನಗರ: ಕಲಾ ವಿಭಾಗದಲ್ಲಿ ತಾಲ್ಲೂಕಿನ ಕಗ್ಗೆರೆಯ ಸರ್ಕಾರಿ ಪಿಯು ಕಾಲೇಜಿನ ಅನಿತಾ 550, ವಾಣಿಜ್ಯ ವಿಭಾಗದಲ್ಲಿ ಬಾಲಕರ ಸರ್ಕಾರಿ ಪಿಯು ಕಾಲೇಜಿನ ಮಧು 563, ವಿಜ್ಞಾನ ವಿಭಾಗದಲ್ಲಿ ಬಾಲಕಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಎನ್.ಕೆ.ಅರ್ಪಿತಾ 560

ನಂಜನಗೂಡು: ಕಲಾ ವಿಭಾಗದಲ್ಲಿ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಮೇಘನಾ 550, ವಾಣಿಜ್ಯ ವಿಭಾಗದಲ್ಲಿ ಜೆಎಸ್ಎಸ್ ಪಿಯು ಕಾಲೇಜಿನ 552, ವಿಜ್ಞಾನ ವಿಭಾಗದಲ್ಲಿ ಸಿಟಿಜನ್ ಪಿಯು ಕಾಲೇಜಿನ ಕೆ.ಪ್ರಿಯದರ್ಶಿನಿ 587

ತಿ.ನರಸೀಪುರ: ಕಲಾ ವಿಭಾಗದಲ್ಲಿ ವಿದ್ಯೋದಯ ಬಾಲಕಿಯರ ಪಿಯು ಕಾಲೇಜಿನ ವಿಜಯಲಕ್ಷ್ಮಿ 515, ಇದೇ ಕಾಲೇಜಿನ ಮೋನಿಕಾ ವಾಣಿಜ್ಯ ವಿಭಾಗದಲ್ಲಿ 558, ವಿಜ್ಞಾನ ವಿಭಾಗದಲ್ಲಿ ಸರ್ಕಾರಿ ಪಿಯು ಕಾಲೇಜಿನ ಸಹನಾ 585

ಹುಣಸೂರು: ಕಲಾ ವಿಭಾಗದಲ್ಲಿ ಸೇಂಟ್ ಜೋಸೆಫ್ ಪಿಯು ಕಾಲೇಜಿನ ನಿಶ್ಚಿತಾ 536, ಇದೇ ಕಾಲೇಜಿನ ಉನ್ನಿ ಅಭಿ ವಾಣಿಜ್ಯ ವಿಭಾಗದಲ್ಲಿ 563 ಹಾಗೂ ವಿಜ್ಞಾನ ವಿಭಾಗದಲ್ಲಿ ಟ್ಯಾಲೆಂಟ್ ಪಿಯು ಕಾಲೇಜಿನ ಗಗನ್ 538 ಅಂಕ ಗಳಿಸುವ ಮೂಲಕ ಆಯಾ ತಾಲ್ಲೂಕಿನಲ್ಲಿ ವಿಭಾಗಾವಾರು ಉನ್ನತ ಸ್ಥಾನ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.